Site icon Vistara News

Lionel Messi: ನಟನಾ ಕ್ಷೇತ್ರಕ್ಕೆ ಕಾಲಿಟ್ಟ ಲಿಯೋನೆಲ್​ ಮೆಸ್ಸಿ

Lionel Messi makes his acting debut

ಮುಂಬಯಿ: ಅರ್ಜೆಂಟೀನಾ(Argentina) ಫುಟ್​ಬಾಲ್​(football) ತಂಡದ ನಾಯಕ ಲಿಯೋನೆಲ್​ ಮೆಸ್ಸಿ(Lionel Messi) ಅವರು ನಟನಾ ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆ. ಶೀಘ್ರದಲ್ಲೇ ಅಮೆರಿಕದ ಇಂಟರ್‌ ಮಿಯಾಮಿ ಕ್ಲಬ್‌(Inter Miami) ಸೇರಲಿರುವ ಅವರು ಅರ್ಜೆಂಟೀನಾದ ಹಾಸ್ಯ ಡ್ರಾಮ ಪ್ರದರ್ಶನವಾದ “ಲಾಸ್ ಪ್ರೊಟೆಕ್ಟರ್ಸ್” (“ದಿ ಪ್ರೊಟೆಕ್ಟರ್ಸ್”) ನ(Los Protectores) (The Protectors) ಎರಡನೇ ಸೀಸನ್‌ನ ಆರಂಭಿಕ ಸಂಚಿಕೆಯಲ್ಲಿ ನಟಿಸಿದ್ದಾರೆ. ಲ್ಯಾಟಿನ್ ಅಮೆರಿಕಾದಲ್ಲಿ ಜೂನ್ 25 ರಂದು ಇದು ಸ್ಟಾರ್​ ಪ್ಲಸ್​ನಲ್ಲಿ ತೆರೆಕಂಡಿದೆ. ಮೆಸ್ಸಿ ಅವರು ಈ ಸೀಸನ್‌ನಲ್ಲಿ ಕಾಣಿಸಿಕೊಂಡ ವಿಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಪ್ಯಾರಿಸ್‌ ಸೇಂಟ್‌ ಜರ್ಮೈನ್‌ (ಪಿಎಸ್‌ಜಿ) ಕ್ಲಬ್‌ ಆಡುತ್ತಿದ್ದ ವೇಳೆ ಮೆಸ್ಸಿ ಅವರು ಈ ಸೀಸನ್‌ನಲ್ಲಿ ನಟಿಸಿದ್ದರು. ಐದು ನಿಮಿಷಗಳ ದೃಶ್ಯದಲ್ಲಿ ಕಾಣಿಸಿಕೊಂಡಿರುವ ಅವರನ್ನು ಫ್ರೆಂಚ್ ರಾಜಧಾನಿಯಲ್ಲಿ ಮೂವರು ಏಜೆಂಟ್‌ಗಳು ಭೇಟಿ ಮಾಡುವ ದೃಶ್ಯ ಇದಾಗಿದೆ. ನಟರಾದ ಆಂಡ್ರೆಸ್ ಪರ್ರಾ, ಆಡ್ರಿಯನ್ ಸುವಾರ್ ಮತ್ತು ಗುಸ್ಟಾವೊ ಬರ್ಮುಡೆಜ್ ನಟಿಸಿದ್ದಾರೆ.

ಮೆಸ್ಸಿ ಅವರ ಪ್ಯಾರಿಸ್‌ ಸೇಂಟ್‌ ಜರ್ಮೈನ್‌ (ಪಿಎಸ್‌ಜಿ) ಕ್ಲಬ್‌ ಜತೆಗಿನ ಒಪ್ಪಂದ ಮುಗಿದಿದ್ದು ಅವರು ಇಂಟರ್‌ ಮಿಯಾಮಿ ಕ್ಲಬ್‌(Inter Miami) ಪರ ಆಡಲು ಸಜ್ಜಾಗಿದ್ದಾರೆ. ಇತ್ತೀಚೆಗಷ್ಟೆ ಅವರು ತಮ್ಮ ಫುಟ್​ಬಾಲ್​ ನಿವೃತ್ತಿಯ ಬಗ್ಗೆ ಸುಳಿವೊಂದನ್ನು ನೀಡಿದ್ದರು. ಅವರ ಈ ಹೇಳಿಕೆಯನ್ನು ಇಲ್ಲಿ ಗಮನಿಸುವಾಗ ಅವರು ಶೀಘ್ರದಲ್ಲೇ ಅಂತಾರಾಷ್ಟ್ರೀಯ ಫುಟ್​ಬಾಲ್​ಗೆ ಗುಡ್​ಬೈ ಹೇಳಿ ಸಿನಿಮಾ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಸಾಧ್ಯತೆಯೊಂದು ಕಂಡು ಬಂದಿದೆ.

ಇದನ್ನೂ ಓದಿ Lionel Messi : ಖ್ಯಾತ ಫುಟ್ಬಾಲ್‌ ಆಟಗಾರ ಲಿಯೊನೆಲ್‌ ಮೆಸ್ಸಿಯ ಲವ್‌ ಸ್ಟೋರಿ ಹೀಗಿತ್ತು…

ಚೀನಾದ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದ ಮೆಸ್ಸಿ ಅವರು 2026 ಫಿಫಾ ವಿಶ್ವ ಕಪ್(2026 Fifa World Cup) ಆಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಈ ಮೂಲಕ ಮುಂದಿನ ವಿಶ್ವಕಪ್​ಗೂ ಮುನ್ನ ನಿವೃತ್ತಿ ಘೋಷಿಸುವ ಸೂಚನೆಯನ್ನು ನೀಡಿದ್ದರು. ಈ ಹಿಂದೆ ಕತಾರ್​ ಫಿಫಾ ವಿಶ್ವಕಪ್ ಬಳಿಕ ನಿವೃತ್ತಿ ನೀಡುವುದಾಗಿ ಮೆಸ್ಸಿ ಘೋಷಿಸಿದ್ದರು. ಆದರೆ ವಿಶ್ವ ಕಪ್​ ಗೆದ್ದ ಬಳಿಕ ತಮ್ಮ ನಿರ್ಧಾರವನ್ನು ಬದಲಿಸಿ ಸದ್ಯ ನಿವೃತ್ತಿಯಾಗುವ ಯೋಚನೆ ನನ್ನ ಮುಂದಿಲ್ಲ, ಆರ್ಜೆಂಟೀನಾ ಪರ ಒಬ್ಬ ಚಾಂಪಿಯನ್‌ ಆಟಗಾರನಂತೆ ಇನ್ನೂ ಆಟ ಮುಂದುವರಿಸುವ ಯೋಚನೆ ನನ್ನ ಮುಂದಿದೆ ಎಂದು ಹೇಳುವ ಮೂಲಕ ತಮ್ಮ ನಿವೃತ್ತಿಯನ್ನು ಮುಂದೂಡಿದ್ದರು. ಕತಾರ್‌ ವಿಶ್ವಕಪ್​​ನಲ್ಲಿ ಮೆಸ್ಸಿ ಅದ್ಭುತ ಪ್ರದರ್ಶನ ತೋರುವ ಮೂಲಕ 1986ರ ಬಳಿಕ ಅರ್ಜೆಂಟೀನಾಗೆ ಪ್ರಶಸ್ತಿ ತಂದುಕೊಟ್ಟಿದ್ದರು. ಜತೆಗೆ ಟೂರ್ನಿಯಲ್ಲಿ ಒಟ್ಟು 7 ಗೋಲು ಗಳಿಸಿದ್ದರು.

ಕಳೆದ ವಾರ ಸೌಹಾರ್ದ ಪಂದ್ಯಕ್ಕಾಗಿ ಬೀಜಿಂಗ್​ಗೆ ಆಗಮಿಸಿದ್ದ ಮೆಸ್ಸಿ ಅವರನ್ನು ವೀಸಾ ಸಮಸ್ಯೆಯಿಂದಾಗಿ ಗಡಿ ಭದ್ರತಾ ಪಡೆಯ ಯೋಧರು ಬಂಧಿಸಿ ವಿಚಾರಣೆ ನಡೆಸಲಾಗಿತ್ತು. ವೀಸಾ ಕ್ಲಿಯರೆನ್ಸ್​ ಸಿಕ್ಕ ಬಳಿಕ ಅವರನ್ನು ಬಿಡುಗಡೆ ಮಾಡಲಾಗಿತ್ತು.

Exit mobile version