ಚಿತ್ತಗಾಂಗ್: ನಾಯಕನಾಗಿದ್ದ ತಮೀಮ್ ಇಕ್ಬಾಲ್ ಅವರು ಗುರುವಾರ ದಿಢೀರ್ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಣೆ ಮಾಡಿದ ಹಿನ್ನೆಲೆ ಬಾಂಗ್ಲಾದೇಶ ತಂಡದ ನಾಯಕತ್ವ ಸ್ಥಾನ ಖಾಲಿಯಾಗಿತ್ತು. ಇದೀಗ ನೂತನ ನಾಯಕನಾಗಿ ಲಿಟ್ಟನ್ ದಾಸ್(Litton Das) ಅವರು ನೇಮಕಗೊಂಡಿದ್ದಾರೆ. ಅಘಫಾನಿಸ್ತಾನ ವಿರುದ್ಧ ಬಾಕಿ ಇರುವ 3 ಏಕದಿನ ಪಂದ್ಯಗಳಲ್ಲಿ ಅವರು ತಂಡವನ್ನು ಮುನ್ನಡೆಸಲಿದ್ದಾರೆ.
ಸದ್ಯ ಅಫಘಾನಿಸ್ತಾನದ ಸರಣಿಗೆ ಮಾತ್ರ ಲಿಟ್ಟನ್ ದಾಸ್ ನಾಯಕನಾಗಿದ್ದಾರೆ. ಆದರೆ ಏಕದಿನ ವಿಶ್ವಕಪ್ನಲ್ಲಿ ಅವರು ತಂಡವನ್ನು ಮುನ್ನಡೆಸುವುದು ಅನುಮಾನ. ಈ ಸ್ಥಾನಕ್ಕೆ ಅನುಭವಿ ಶಕೀಬ್ ಅಲ್ ಹಸನ್ ಅವರು ನೇಮಕಗೊಳ್ಳುವ ಸಾಧ್ಯತೆ ಇದೆ. ಲಿಟ್ಟನ್ ದಾಸ್ ಕೂಡ ಬಾಂಗ್ಲಾ ತಂಡವನನ್ನು ಈ ಹಿಂದೆ ನಾಯಕನಾಗಿ ಮುನ್ನಡೆಸಿದ್ದರು. 28 ವರ್ಷದ ಲಿಟ್ಟನ್ ಈಗಾಗಲೇ 180 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಆಡಿದ್ದಾರೆ. ಲಿಟ್ಟನ್ ನಾಯಕತ್ವದಲ್ಲಿ ಕಳೆದ ವರ್ಷ ಡಿಸೆಂಬರ್ನಲ್ಲಿ ಭಾರತ ವಿರುದ್ಧದ ನಡೆದಿದ್ದ ಏಕದಿನ ಸರಣಿಯಲ್ಲಿ ಬಾಂಗ್ಲಾ ತಂಡ 2-1 ಅಂತರದಿಂದ ಗೆದ್ದು ಐತಿಹಾಸಿಕ ಗೆಲುವು ಸಾಧಿಸಿತ್ತು.
ಕಣ್ಣೀರು ಸುರಿಸುತ್ತಲೇ ಕ್ರಿಕೆಟ್ಗೆ ವಿದಾಯ ಹೇಳಿದ್ದ ತಮೀಮ್ ಇಕ್ಬಾಲ್
ಗುರುವಾರ ಮಾಧ್ಯಮದ ಮುಂದೆ ತಮೀಮ್ ಇಕ್ಬಾಲ್ ಕಣ್ಣೀರಿಡುತ್ತಲೇ ತಕ್ಷಣಕ್ಕೆ ಜಾರಿಗೆ ಬರುವಂತೆ ವಿದಾಯ ಘೋಷಿಸುವ ಮೂಲಕ ತಮ್ಮ 16 ವರ್ಷಗಳ ಕ್ರಿಕೆಟ್ ಬಾಳ್ವೆಗೆ ತೆರೆ ಎಳೆದಿದ್ದರು. “ಅಫಘಾನಿಸ್ತಾನ ವಿರುದ್ಧದ ಪಂದ್ಯವೇ ನನ್ನ ಕೊನೆಯ ಅಂತಾರಾಷ್ಟ್ರೀಯ ಪಂದ್ಯವಾಗಿತ್ತು. ನಾನು ತಕ್ಷಣಕ್ಕೆ ಜಾರಿಗೆ ಬರುವಂತೆ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿ ಹೊಂದುತ್ತಿದ್ದೇನೆ. ಇದು ಹಠಾತ್ ನಿರ್ಧಾರವಲ್ಲ. ಈ ಬಗ್ಗೆ ಯೋಚಿಸಿಯೇ ನಾನು ಈ ನಿರ್ಧಾರಕ್ಕೆ ಬಂದಿದ್ದೇನೆ. ನಾನು ನನ್ನ ಕುಟುಂಬದೊಂದಿಗೆ ಮಾತನಾಡಿದ್ದೇನೆ. ಕ್ರಿಕೆಟ್ ನಿಂದ ನಿವೃತ್ತಿಯಾದ ನಂತರ, ನಾನು ನನ್ನ ಪ್ರೀತಿಪಾತ್ರರ ಜತೆ ಹೆಚ್ಚು ಸಮಯ ಕಳೆಯುತ್ತಿದ್ದೇನೆ. ಭವಿಷ್ಯದಲ್ಲಿ ಇದನ್ನು ಹೆಚ್ಚು ಮಾಡಲು ನಾನು ಎದುರು ನೋಡುತ್ತಿದ್ದೇನೆ” ಎಂದು ತಮೀಮ್ ಗದ್ಗದಿತರಾಗಿದ್ದರು.
ಇದನ್ನೂ ಓದಿ Tamim Iqbal: ಕಣ್ಣೀರು ಸುರಿಸುತ್ತಲೇ ಕ್ರಿಕೆಟ್ಗೆ ವಿದಾಯ ಹೇಳಿದ ತಮೀಮ್ ಇಕ್ಬಾಲ್
2007ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಇಕ್ಬಾಲ್ 2007ರ ವಿಶ್ವಕಪ್ ನಲ್ಲಿ ಭಾರತದ ವಿರುದ್ಧ ಅರ್ಧಶತಕ ಸಿಡಿಸಿ ತಂಡದ ಐತಿಹಾಸಿಕ ಜಯಕ್ಕೆ ಕಾರಣರಾಗಿದ್ದರು. ಬಾಂಗ್ಲಾ ವಿರುದ್ಧ ಸೋತ ಭಾರತ ಕೂಟದಿಂದ ಹೊರಬಿದ್ದಿತ್ತು. ಒಟ್ಟಾರೆ ಅವರು ಬಾಂಗ್ಲಾ ಪರ 69 ಟೆಸ್ಟ್ ಪಂದ್ಯಗಳಲ್ಲಿ 5082 ರನ್, 238 ಏಕದಿನ ಪಂದ್ಯಗಳಲ್ಲಿ 8224 ರನ್ ಮತ್ತು 78 ಟಿ20 ಪಂದ್ಯಗಳಲ್ಲಿ 1758 ರನ್ ಗಳಿಸಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ ಒಟ್ಟು 25 ಶತಕಗಳನ್ನು ಬಾರಿಸಿದ್ದಾರೆ. ಟೆಸ್ಟ್ನಲ್ಲಿ 10, ಏಕದಿನದಲ್ಲಿ 14, ಟಿ20ಯಲ್ಲಿ 1 ಶತಕ ಬಾರಿಸಿದ್ದರು.