Site icon Vistara News

Commonwealth Games | ಲವ್ಲಿನಾ ಕೋಚ್‌ಗೆ ಕೊನೆಗೂ ಸಿಕ್ಕಿತು ಕ್ರೀಡಾ ಗ್ರಾಮಕ್ಕೆ ಎಂಟ್ರಿ

commonwealth Games

ಬರ್ಮಿಂಗ್‌ಹ್ಯಾಮ್‌: ಟೋಕಿಯೊ ಒಲಿಂಪಿಕ್ಸ್‌ ಕಂಚಿನ ಪದಕ ವಿಜೇತೆ ಬಾಕ್ಸರ್‌ ಲವ್ಲಿನಾ ಬೊರ್ಗೊಹೈನ್‌ ಕೋಚ್‌ ಸಂಧ್ಯಾ ಗುರಂಗ್‌ ಅವರಿಗೆ ಬರ್ಮಿಂಗ್‌ಹ್ಯಾಮ್‌ Commonwealth Games ಕ್ರೀಡಾ ಗ್ರಾಮಕ್ಕೆ ಕೊನೆಗೂ ಪ್ರವೇಶ ಲಭಿಸಿದೆ. ಕೇಂದ್ರ ಕ್ರೀಡಾ ಸಚಿವಾಲಯ ಹಾಗೂ ಭಾರತೀಯ ಒಲಿಂಪಿಕ್‌ ಸಂಸ್ಥೆಯ ಮಧ್ಯಪ್ರವೇಶದ ಬಳಿಕ ಸಂಧ್ಯಾ ಅವರಿಗೆ ಕ್ರೀಡಾ ಗ್ರಾಮ ಪ್ರವೇಶಕ್ಕೆ ಮಾನ್ಯತೆ ಲಭಿಸಿದೆ. ಈ ಮೂಲಕ ಭಾರತೀಯ ಬಾಕ್ಸಿಂಗ್‌ ಫೆಡರೇಷನ್‌ ವಿರುದ್ಧ ಮಾನಸಿಕ ದೌರ್ಜನ್ಯ ಆರೋಪ ಹೊರಿಸಿದ್ದ ಲವ್ಲಿನಾ ಬೊರ್ಗೊಹೈನ್‌ ಪ್ರಕರಣ ಸುಖಾಂತ್ಯ ಕಂಡಿದೆ.

ಸೋಮವಾರ ಸಂಜೆ ಬರ್ಮಿಂಗ್‌ಹ್ಯಾಮ್‌ನಿಂದಲೇ ಟ್ವೀಟ್‌ ಮಾಡಿದ್ದ ಲವ್ಲಿನಾ, ತಮ್ಮ ಕೋಚ್‌ ಸಂಧ್ಯಾ ಗುರುಂಗ್ ಅವರಿಗೆ ಕ್ರೀಡಾ ಗ್ರಾಮಕ್ಕೆ ಪ್ರವೇಶ ಕಲ್ಪಿಸದೇ ಭಾರತೀಯ ಬಾಕ್ಸಿಂಗ್‌ ಒಕ್ಕೂಟ (BFI) ತೊಂದರೆ ಕೊಡುತ್ತಿದೆ. ಇವರ ರಾಜಕೀಯದಿಂದ ನನಗೆ ಸಮಸ್ಯೆ ಎದುರಾಗುತ್ತಿದೆ. ಕೂಟ ಆರಂಭಗೊಳ್ಳುವ ಎಂಟು ದಿನ ಮೊದಲೇ ಅಭ್ಯಾಸ ನಿಲ್ಲಿಸಲಾಗಿದೆ ಎಂದು ಆರೋಪಿಸಿದ್ದರು. ಇದು ಭಾರತೀಯ ಕ್ರೀಡಾ ಕ್ಷೇತ್ರದಲ್ಲಿ ತಲ್ಲಣ ಉಂಟುಮಾಡಿತ್ತು.

ತಕ್ಷಣ ಪ್ರತಿಕ್ರಿಯೆ ಕೊಟ್ಟಿದ್ದ ಬಾಕ್ಸಿಂಗ್ ಫಡರೇಷನ್‌ ಸಮಸ್ಯೆಯಾಗದ ಹಾಗೆ ನೋಡಿಕೊಳ್ಳುವುದಾಗಿ ಹೇಳಿತ್ತು. ಅಂತೆಯೇ ಕ್ರೀಡಾ ಸಚಿವ ಅನುರಾಗ್ ಠಾಕೂರ್‌ ತಕ್ಷಣದಲ್ಲೇ ಸಂಧ್ಯಾ ಅವರಿಗೆ ಮಾನ್ಯತೆ ದೊರಕಿಸಿಕೊಡುವಂತೆ ಹೇಳಿದ್ದರು. ಭಾರತೀಯ ಒಲಿಂಪಿಕ್ಸ್‌ ಸಂಸ್ಥೆಯೂ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿತ್ತು. ಹೀಗಾಗಿ ಮಂಗಳವಾರ ಸಂಜೆಯ ವೇಳೆಗೆ ಸಂಧ್ಯಾ ಅವರಿಗೆ ಕ್ರೀಡಾ ಗ್ರಾಮಕ್ಕೆ ಪ್ರವೇಶ ದೊರಕಿದೆ.

ಇದನ್ನೂ ಓದಿ | Commonwealth Games | ಹಿಂದಿನ ಆರು ಆವೃತ್ತಿಗಳಲ್ಲಿ ಭಾರತದ ಸಾಧನೆಗಳೇನು?

Exit mobile version