ಕೊಲಂಬೊ: ನಾಲ್ಕನೇ ಆವೃತ್ತಿಯ ಲಂಕಾ ಪ್ರೀಮಿಯರ್ ಲೀಗ್‌ನಲ್ಲಿ(LPL Auction 2023) ಟೀಮ್ ಇಂಡಿಯಾದ ಮಾಜಿ ಆಟಗಾರ ಸುರೇಶ್ ರೈನಾ(Suresh Raina) ಅವರು ಆಡಲಿದ್ದಾರೆ ಎಂದು ಕೆಲ ದಿನಗಳ ಹಿಂದೆ ಬಾರಿ ಸುದ್ದಿಯಾಗಿತ್ತು. ಆದರೆ ಹರಾಜು ಪ್ರಕ್ರಿಯೆಯಲ್ಲಿ ಅವರ ಹೇಸರನ್ನೇ ಕೂಗದೆ ಅವಮಾನ ಮಾಡಿದ ವಿಚಾರ ಬೆಳಕಿಗೆ ಬಂದಿದೆ. ರೈನಾ ಹೆಸರನ್ನು ಬಳಸಿಕೊಂಡು ಲಂಕಾ ಕ್ರಿಕೆಟ್ ಮಂಡಳಿ ಕುತಂತ್ರ ಮಾಡಿದೆ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರೈನಾ ಅವರು USD 50,000 ಮೂಲಬೆಲೆ ಹೊಂದಿದ್ದರು. ಆದರೆ ಬುಧವಾರ ನಡೆದ ಹರಾಜಿನಲ್ಲಿ ರೈನಾ ಹೆಸರು ಬಾರದೆ ಇದ್ದಿದ್ದು ಎಲ್ಲರಿಗು ಅಚ್ಚರಿಯುಂಟು ಮಾಡಿದೆ. 11ನೇ ಸೆಟ್ನ ಹರಾಜಿನಲ್ಲಿ ಸುರೇಶ್ ರೈನಾ ಹೆಸರಿತ್ತು. ಆದರೆ ಹರಾಜು ನಡೆಸುತ್ತಿದ್ದ ಚಾರು ಶರ್ಮಾ ಅವರು ರೈನಾ ಹೆಸರನ್ನು ಕಡೆಗಣಿಸಿದರು. ರೈನಾ ಹೊರತುಪಡಿಸಿ ಉಳಿದೆಲ್ಲರ ಹೆಸರನ್ನು ಹರಾಜಿನಲ್ಲಿ ಕೂಗಲಾಯಿತು. ಇದು ಭಾರತೀಯ ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ.
ಈ ಘಟನೆ ನಡೆದರೂ ಇದುವರೆಗೆ ಶ್ರೀಲಂಕಾ ಕ್ರಿಕೆಟ್ ಮಂಡಳಿ ಯಾವುದೇ ಸ್ಪಷ್ಟೀಕರಣ ನೀಡಿಲ್ಲ. ಆದರೆ ವರದಿಯ ಪ್ರಕಾರ ಸುರೇಶ್ ರೈನಾ ಅವರು ಲಂಕಾ ಪ್ರೀಮಿಯರ್ ಲೀಗ್‌ನಲ್ಲಿ ಆಡಲು ಹೆಸರು ನೋಂದಾಯಿಸಿಲ್ಲ. ಅವರ ಒಪ್ಪಿಗೆ ಇಲ್ಲದೆ ಲಂಕಾ ಮಂಡಳಿ ರೈನಾ ಹೆಸರು ಉದ್ದೇಶಪೂರ್ವಕವಾಗಿಯೇ ಬಳಸಿಕೊಂಡು ತಮ್ಮ ಬ್ರ್ಯಾಂಡ್ ಪ್ರಚಾರ ಮಾಡಲು ಈ ರೀತಿ ಮಾಡಿದೆ ಎಂದು ಟ್ವಿಟರ್ನಲ್ಲಿ ಅನೇಕ ಅಭಿಮಾನಿಗಳು ಟೀಕೆ ಮಾಡಿದ್ದಾರೆ.
ಇದನ್ನೂ ಓದಿ Suresh Raina: ಲಂಕಾ ಪ್ರೀಮಿಯರ್ ಲೀಗ್ನತ್ತ ಮುಖಮಾಡಿದ ಸುರೇಶ್ ರೈನಾ
2022ರ ಡಿಸೆಂಬರ್‌ನಲ್ಲಿ ನಡೆದಿದ್ದ ಅಬುದಾಬಿ ಟಿ10 ಲೀಗ್‌ನಲ್ಲಿ ರೈನಾ ಅವರು ಡೆಕ್ಕನ್ ಗ್ಲಾಡಿಯೇಟರ್ ಪರ ಕಣಕ್ಕಿಳಿದಿದ್ದರು. ಕಳೆದ ಮಾರ್ಚ್‌ನಲ್ಲಿ ನಡೆದ ಲೆಜೆಂಡ್ಸ್ ಲೀಗ್ ಕ್ರಿಕೆಟ್‌ನಲ್ಲಿಯೂ ರೈನಾ ಭಾಗಿಯಾಗಿದ್ದರು. 205 ಐಪಿಎಲ್ ಪಂದ್ಯಗಳನ್ನು ಆಡಿರುವ ಸುರೇಶ್ ರೈನಾ 5528 ರನ್‌ಗಳನ್ನು ಗಳಿಸಿದ್ದಾರೆ. ಈ ಬಾರಿಯ ಐಪಿಎಲ್ನಲ್ಲಿ(IPL) ಅವರು ಕಾಮೆಂಟ್ರಿ ಪ್ಯಾನಲ್ನಲ್ಲಿ ಕರ್ತತ್ಯ ನಿರ್ವಹಿಸಿದ್ದರು.