Site icon Vistara News

LSG vs DC: ಲಕ್ನೋ ವಿರುದ್ಧ ಮೊದಲ ಜಯದ ನಿರೀಕ್ಷೆಯಲ್ಲಿ ಡೆಲ್ಲಿ

LSG vs DC

ಲಕ್ನೋ: ಹ್ಯಾಟ್ರಿಕ್​ ಗೆಲುವಿನ ಜೋಶ್​ನಲ್ಲಿರುವ ಕನ್ನಡಿಗ ಕೆ.ಎಲ್ ರಾಹುಲ್​ ಸಾರಥ್ಯದ ಲಕ್ನೋ ಸೂಪರ್​ ಜೈಂಟ್ಸ್​(LSG vs DC)ಮತ್ತೊಂದು ಗೆಲುವಿನ ನಿರೀಕ್ಷೆಯೊಂದಿದೆ ಶುಕ್ರವಾರದ ಐಪಿಎಲ್​(IPL 2024) ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​(Delhi Capitals) ವಿರುದ್ಧ ಕಣಕ್ಕಿಳಿಯಲಿದೆ. ಲಕ್ನೋಗೆ ಇದು ತವರಿನ ಪಂದ್ಯವಾಗಿದೆ.​

ಲಕ್ನೋ ತಂಡ ಈ ಆವೃತ್ತಿಯಲ್ಲಿ ಮೊದಲ ಪಂದ್ಯವನ್ನು ಜೈಪುರದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಆಡಿ 20 ರನ್​ಗಳ ಸೋಲು ಕಂಡಿತ್ತು. ಈ ಸೋಲಿನಿಂದ ಪಾಠ ಕಲಿತ ತಂಡ ಮುಂದಿನ ಮೂರು ಪಂದ್ಯಗಳನ್ನು ಗೆದ್ದು ಅಂಕಪಟ್ಟಿಯಲ್ಲಿ ಸದ್ಯ ಮೂರನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ. ಲಕ್ನೋ ತಂಡದ ವಿಶೇಷತೆ ಎಂದರೆ ಮೊದಲು ಬ್ಯಾಟಿಂಗ್​ ನಡೆಸಿದ ಪಂದ್ಯವನ್ನೇ ಅತ್ಯಧಿಕ ಬಾರಿ ಗೆದ್ದಿರುವುದು. ಸಾಮಾನ್ಯ ಮೊತ್ತವನ್ನು ಬಾರಿಸಿದರೂ ಘಾತಕ ಬೌಲಿಂಗ್​ ಮತ್ತು ಉತ್ಕೃಷ್ಟ ಮಟ್ಟದ ಫೀಲ್ಡಿಂಗ್​ ಮೂಲಕ ಪಂದ್ಯವನ್ನು ಗೆಲ್ಲುವ ಚಾಕಚಕ್ಯತೆ ರಾಹುಲ್​ ನಾಯಕತ್ವದ್ದು.

ರಾಹುಲ್​ ನಿಧಾನಗತಿಯ ಬ್ಯಾಟಿಂಗ್​ ಮೂಡ್​ನಿಂದ ಹೊರಬರಬೇಕಾದ ಅನಿವಾರ್ಯತೆ ಇದೆ. ಇದೇ ರೀತಿ ಅವರು ಬ್ಯಾಟಿಂಗ್​ ನಡೆಸಿದರೆ ಟಿ20 ವಿಶ್ವಕಪ್​ ತಂಡದಲ್ಲಿ ಸ್ಥಾನ ಪಡೆಯುವು ಕಷ್ಟ. ಟ್ರೇಡಿಂಗ್​ ಮೂಲಕ ರಾಜಸ್ಥಾನ್​ ತಂಡದಿಂದ ಲಕ್ನೋ ಸೇರಿದ ದೇವದತ್ತ ಪಡಿಕ್ಕಲ್​ ಅವರು ಆಡಿದ 4 ಪಂದ್ಯಗಳಲ್ಲಿಯೂ ಒಂದಕಕ್ಕೆ ಸೀಮಿತರಾಗಿದ್ದರು. ಹೀಗಾಗಿ ಈ ಪಂದ್ಯದಲ್ಲಿ ಇವರಿಗೆ ಸ್ಥಾನ ಸಿಗುವುದು ಅನುಮಾನ ಎನ್ನಲಾಗಿದೆ. ಜತೆಗೆ ಆಯುಷ್​ ಬದೋನಿ ಕೂಡ ಬೆಂಚ್​ ಕಾಯಬೇಕಾಗಬಹುದು. ಇವರ ಸ್ಥಾನದಲ್ಲಿ ದೀಪಕ್​ ಹೂಡಾ ಕಣಕ್ಕಿಳಿಯಬಹುದು.

ಬೌಲಿಂಗ್​ ವಿಭಾಗದಲ್ಲಿ ನವೀನ್ ಉಲ್​ ಹಕ್​ ಬದಲು ಶಮರ್​ ಜೋಸೆಫ್​ ಆಡುವ ಬಳಗದಲ್ಲಿ ಕಾಣಿಸಬಹುದು. ಕಳೆದ ಪಂದ್ಯದಲ್ಲಿ ಐದು ವಿಕೆಟ್ ಕಬಳಿಸಿದ ಯಶ್ ಠಾಕೂರ್ ಮತ್ತು ಕೃನಾಲ್ ಪಾಂಡ್ಯ ಮೇಲೆ ತಂಡ ಈ ಪಂದ್ಯದಲ್ಲಿಯೂ ಹೆಚ್ಚಿನ ಬರವಸೆ ಇರಿಸಿದೆ. ಗಾಯಾಳು ಮಯಾಂಕ್ ಯಾದವ್ ಈ ಪಂದ್ಯದಲ್ಲಿಯೂ ಆಡುವುದು ಅನುಮಾನವಾಗಿದೆ.

ಇದನ್ನೂ ಓದಿ IPL 2024: ಸೋಲಿನ ಆಘಾತದ ಮಧ್ಯೆ ಸಂಜುಗೆ ಬಿತ್ತು 12 ಲಕ್ಷ ರೂ. ದಂಡ

ಡೆಲ್ಲಿ ಕ್ಯಾಪಿಲಟ್ಸ್​ ತಂಡ ಬೌಲಿಂಗ್​ ಮತ್ತು ಬ್ಯಾಟಿಂಗ್​ ಸಾಧಾರಣ ಮಟ್ಟದಿಂದ ಕೂಡಿದೆ. ಬ್ಯಾಟಿಂಗ್​ ತಕ್ಕ ಮಟ್ಟಿನಲ್ಲಿದ್ದರೂ ಬೌಲಿಂಗ್​ ಮಾತ್ರ ತೀರಾ ಕಳಪೆ. ಅದರಲ್ಲೂ ಅನುಭವಿ ಅನ್ರಿಜ್​ ನೋರ್ಜೆ ಪ್ರತಿ ಪಂದ್ಯದಲ್ಲಿಯೂ 50ಕ್ಕಿಂತ ಹೆಚ್ಚಿನ ರನ್​ ಬಿಟ್ಟುಕೊಡುತ್ತಿದ್ದಾರೆ. ಖಲೀಲ್​ ಅಹ್ಮದ್​, ಅಕ್ಷರ್​ ಪಟೇಲ್​ ಮತ್ತು ಇಶಾಂತ್​ ಕೂಡ ಓವರ್​ಗೆ 10ರ ಸರಾಸರಿಯಲ್ಲಿ ರನ್​ ಬಿಟ್ಟುಕೊಡುತ್ತಿದ್ದಾರೆ. ಬೌಲಿಂಗ್​ ಸುಧಾರಣೆ ಕಾಣದ ಹೊರತು ಡೆಲ್ಲಿಗೆ ಗೆಲುವು ದೂರದ ಮಾತು.

ಮುಖಾಮುಖಿ


ಡೆಲ್ಲಿ ಮತ್ತು ಲಕ್ನೋ ತಂಡ ಇದುವರೆಗೆ ಮೂರು ಬಾರಿ ಮುಖಾಮುಖಿಯಾಗಿವೆ. ಈ ಮೂರು ಪಂದ್ಯಗಳನ್ನು ಕೂಡ ಲಕ್ನೋ ತಂಡ ಗೆದ್ದಿದೆ. ಹೀಗಾಗಿ ಡೆಲ್ಲಿ ತಂಡ ಲಕ್ನೋ ವಿರುದ್ಧ ಮೊದಲ ಗೆಲುವಿನ ನಿರೀಕ್ಷೆಯಲ್ಲಿದೆ. ಭಾರತ ರತ್ನ ಶ್ರೀ ಅಟಲ್​ಬಿಹಾರಿ ವಾಜಪೇಯಿ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿರುವ ಪಿಚ್​ ವಿಭಿನ್ನವಾಗಿ ವರ್ತಿಸುತ್ತದೆ. ಇದಕ್ಕೆ ಕಳೆದ ಆವೃತ್ತಿಯ ಫಲಿತಾಂಶವೇ ಉತ್ತಮ ನಿದರ್ಶನ. ಬೇರೆಲ್ಲ ಪಿಚ್​ಗಳಲ್ಲಿ ರನ್​ ಮಳೆ ಸುರಿದಂತೆ ಇಲ್ಲಿ ರನ್​ ಗಳಿಸಲು ಅಷ್ಟು ಸುಲಭವಲ್ಲ. ಕಪ್ಪು ಮಣ್ಣು ಮಿಶ್ರಿತ ಪಿಚ್​ ಇದಾಗಿದ್ದು ಬ್ಯಾಟರ್​ಗಳು ರನ್​ ಗಳಿಸಲು ಹೆಣಗಾಡಿದ್ದಾರೆ. ಸದ್ಯ ಈ ಪಂದ್ಯದಲ್ಲಿ ಪಿಚ್​ ಹೇಗೆ ವರ್ತಿಸಲಿದೆ ಎಂದು ಕಾದು ನೋಡಬೇಕಿದೆ.

ಸಂಭಾವ್ಯ ತಂಡ


ಲಕ್ನೋ: ಕ್ವಿಂಟನ್ ಡಿ ಕಾಕ್, ಕೆಎಲ್ ರಾಹುಲ್ (ನಾಯಕ), , ಮಾರ್ಕಸ್ ಸ್ಟೊಯಿನಿಸ್, ನಿಕೋಲಸ್ ಪೂರನ್, ದೀಪಕ್​ ಹೂಡಾ, ಕೃನಾಲ್ ಪಾಂಡ್ಯ, ರವಿ ಬಿಷ್ಣೋಯ್, ಯಶ್ ಠಾಕೂರ್, ಶಮರ್​ ಜೋಸೆಫ್​, ಮಯಾಂಕ್ ಯಾದವ್, ಮಣಿಮಾರನ್ ಸಿದ್ಧಾರ್ಥ್, ಅರ್ಶಿನ್ ಕುಲಕರ್ಣಿ.

ಡೆಲ್ಲಿ ಕ್ಯಾಪಿಟಲ್ಸ್​: ಪೃಥ್ವಿ ಶಾ, ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ರಿಷಭ್ ಪಂತ್ (ನಾಯಕ), ಟ್ರಿಸ್ಟಾನ್ ಸ್ಟಬ್ಸ್, ಅಕ್ಷರ್ ಪಟೇಲ್, ಸುಮಿತ್ ಕುಮಾರ್, ರಸಿಖ್ ದಾರ್ ಸಲಾಂ, ಅನ್ರಿಚ್ ನಾರ್ಜೆ, ಇಶಾಂತ್ ಶರ್ಮಾ, ಖಲೀಲ್ ಅಹ್ಮದ್.

Exit mobile version