Site icon Vistara News

LSG vs GT: ಗುಜರಾತ್-ಲಕ್ನೋ ಕಾದಾಟ; ಯಾರಿಗೆ ಒಲಿಯಲಿದೆ ಗೆಲುವಿನ ಲಕ್​?

LSG vs GT

ಲಕ್ನೋ: ಆರಂಭಿಕ ಪಂದ್ಯ ಸೋತು ಆ ಬಳಿಕದ 2 ಪಂದ್ಯಗಳಲ್ಲಿ ಸತತವಾಗಿ ಗೆಲುವು ಕಂಡಿರುವ ಕನ್ನಡಿಗ ಕೆ.ಎಲ್​ ರಾಹುಲ್​ ಸಾರಥ್ಯದ ಲಕ್ನೋ ಸೂಪರ್​ ಜೈಂಟ್ಸ್(LSG vs GT)​ ಮತ್ತು ಗೆಲುವಿನ ಶುಭಾರಂಭ ಕಂಡು ಬಳಿಕ ಸೋಲಿನ ಹಾದಿ ಹಿಡಿದಿರುವ ಶುಭಮನ್​ ಗಿಲ್​ ನೇತೃತ್ವದ ಗುಜರಾತ್​ ಟೈಟಾನ್ಸ್ ಭಾನುವಾರದ ದ್ವಿತೀಯ(IPL 2024) ಪಂದ್ಯದಲ್ಲಿ ಮುಖಾಮುಖಿಯಾಗಲಿದೆ.

ಪೂರನ್​-ಡಿ ಕಾಕ್​ ಪ್ರಚಂಡ ಫಾರ್ಮ್​


ಲಕ್ನೋ ತಂಡದ ಬಲವೆಂದರೆ ವಿಂಡೀಸ್​ ಬ್ಯಾಟರ್​ ನಿಕೋಲಸ್​ ಪೂರನ್​ ಮತ್ತು ಡಿ ಕಾಕ್​ ಅವರ ಪ್ರಚಂಡ ಬ್ಯಾಟಿಂಗ್​. ಜತೆಗೆ ಮಯಾಂಕ್​ ಯಾದವ್ ಅವರ ಘಾತಕ ಬೌಲಿಂಗ್​ ದಾಳಿ. ಗಂಟೆಗೆ 150ಕ್ಕಿಂತ ವೇಗದಲ್ಲಿ ಚೆಂಡೆಸೆದು ಎದುರಾಳಿ ಬ್ಯಾಟರ್​ಗಳನ್ನು ಬೇಟೆಯಾಡುವಲ್ಲಿ ಈಗಾಗಲೇ ಅವರು ಯಶಸ್ಸು ಕಂಡಿದ್ದಾರೆ. ಅನುಭವಿ ಆಟಗಾರರು ಕೂಡ ಇವರ ಎಸೆತಕ್ಕೆ ತಡೆಯೊಡ್ಡಲು ವಿಫಲರಾಗಿದ್ದಾರೆ. ಹೀಗಾಗಿ ನಾಳಿನ ಪಂದ್ಯದಲ್ಲಿಯೂ ಇವರೇ ಪ್ರಮುಖ ಆಕರ್ಷಣೆ.

ಗುಜರಾತ್​ ಸಾಮಾನ್ಯ ತಂಡ

ಗುಜರಾತ್​ ತಂಡ ಯುವ ಆಟಗಾರರನ್ನೇ ಪ್ರಮುಖವಾಗಿ ನೆಚ್ಚಿಕೊಂಡಿದೆ. ಮೋಹಿತ್​ ಶರ್ಮ ಸ್ಲೋ ಬೌಲಿಂಗ್​ ನಡಸಿ ಗಮನಸೆಳೆದರೂ ಕೂಡ ಉಳಿದ ಬೌಲರ್​ಗಳಿಂದ ನಿರೀಕ್ಷಿತಮಟ್ಟದ ಪ್ರದರ್ಶನ ಕಂಡುಬರುತ್ತಿಲ್ಲ. ಇದೇ ಕಾರಣಕ್ಕೆ ಕಳೆದ ಪಂಜಾಬ್​ ವಿರುದ್ಧದ ಪಂದ್ಯದಲ್ಲಿ 199ರನ್​ ಬಾರಿಸಿದರೂ ಇದನ್ನು ಉಳಿಸಿಕೊಳ್ಳುವಲ್ಲಿ ವಿಫಲವಾಗಿತ್ತು. ವಿಶ್ವದ ಟಾಪ್​ ಸ್ಪಿನ್ನರ್​ ರಶೀದ್​ ಖಾನ್​ ಅವರು ಈ ಹಿಂದೆ ತೋರುತ್ತಿದ್ದ ಪ್ರದರ್ಶನವನ್ನು ತೋರುತ್ತಿಲ್ಲ. ಗಿಲ್​ ಬ್ಯಾಟಿಂಗ್​ ಫಾರ್ಮ್​ಗೆ ಮರಳಿದ್ದು ತಂಡಕ್ಕೆ ಕೊಂಚ ಬಲ ತಂದಿದೆ.

ಇದನ್ನೂ ಓದಿ IPL 2024: ಪಂದ್ಯ ಗೆದ್ದ ಸಂತಸದಲ್ಲಿ ಕುಣಿದು ಕುಪ್ಪಳಿಸಿದ ಹೈದರಾಬಾದ್​ ತಂಡದ ಮಾಲಕಿ; ವಿಡಿಯೊ ವೈರಲ್​

ಕಳೆದ ಆವೃತ್ತಿಯ ಪಂದ್ಯವೊಂದಲ್ಲಿ ಶ್ರೇಷ್ಠ ಪ್ರದರ್ಶನ ತೋರಿದ್ದ ಆಯುಷ್‌ ಬದೋನಿ ಆ ಬಳಿಕದ ಆಡಿದ ಎಲ್ಲ ಪಂದ್ಯಗಳಲ್ಲಿಯೂ ವಿಫಲರಾಗಿದ್ದರು. ಈ ಆವೃತ್ತಿಯಲ್ಲಿಯೂ ಅವರು ಆಡಿದ ಮೂರು ಪಂದ್ಯಗಳಲ್ಲಿಯೂ ಒಂದಂಕಿ ಗಡಿ ದಾಟಿಲ್ಲ. ಹೀಗಾಗಿ ಇವರನ್ನು ಈ ಪಂದ್ಯಕ್ಕೆ ಬೆಂಚ್​ ಕಾಯಿಸುವುದು ಖಚಿತ. ಇವರ ಸ್ಥಾನದಲ್ಲಿ ದೀಪಕ್​ ಹೂಡಾ ಆಡಬಹುದು. ಮಾರ್ಕಸ್​ ಸ್ಟೋಯಿನಿಸ್​ ಕೂಡ ಬ್ಯಾಟಿಂಗ್​ ಫಾರ್ಮ್​ ಕಂಡುಕೊಳ್ಳುವ ಅನಿವಾರ್ಯತೆ ಇದೆ.

ಮುಖಾಮುಖಿ


ಉಭಯ ತಂಡಗಳು ಇದುವರೆಗೆ 4 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಆದರೆ ಎಲ್ಲ ನಾಲ್ಕು ಪಂದ್ಯಗಳನ್ನು ಕೂಡ ಗುಜರಾತ್​ ತಂಡವೇ ಗೆದ್ದು ಬೀಗಿದೆ. ಹೀಗಾಗಿ ಲಕ್ನೋ ತಂಡ ಗುಜರಾತ್​ ವಿರುದ್ಧ ಮೊದಲ ಗೆಲುವಿನ ನಿರೀಕ್ಷೆಯಲ್ಲಿದೆ. ಏಕಾನ ಸ್ಟೇಡಿಯಂನಲ್ಲಿ ಕಳೆದ ಆವೃತ್ತಿಯಲ್ಲಿ ಆಡಿದ ಪಂದ್ಯ ಕೂಡ ಲಕ್ನೋ ಸೋಲು ಕಂಡಿತ್ತು.

ಪಿಚ್​ ರಿಪೋರ್ಟ್​


ಭಾರತ ರತ್ನ ಶ್ರೀ ಅಟಲ್​ಬಿಹಾರಿ ವಾಜಪೇಯಿ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿರುವ ಪಿಚ್​ ವಿಭಿನ್ನವಾಗಿ ವರ್ತಿಸುತ್ತದೆ. ಇದಕ್ಕೆ ಕಳೆದ ಆವೃತ್ತಿಯ ಫಲಿತಾಂಶವೇ ಉತ್ತಮ ನಿದರ್ಶನ. ಬೇರೆಲ್ಲ ಪಿಚ್​ಗಳಲ್ಲಿ ರನ್​ ಮಳೆ ಸುರಿದಂತೆ ಇಲ್ಲಿ ರನ್​ ಗಳಿಸಲು ಅಷ್ಟು ಸುಲಭವಲ್ಲ. ಕಪ್ಪು ಮಣ್ಣು ಮಿಶ್ರಿತ ಪಿಚ್​ ಇದಾಗಿದ್ದು ಬ್ಯಾಟರ್​ಗಳು ರನ್​ ಗಳಿಸಲು ಹೆಣಗಾಡಿದ್ದಾರೆ. ಸದ್ಯ ಈ ಪಂದ್ಯದಲ್ಲಿ ಪಿಚ್​ ಹೇಗೆ ವರ್ತಿಸಲಿದೆ ಎಂದು ಕಾದು ನೋಡಬೇಕಿದೆ.

ಸಂಭಾವ್ಯ ತಂಡ


ಗುಜರಾತ್​:
ವೃದ್ಧಿಮಾನ್ ಸಹಾ (ವಿಕೆಟ್​ ಕೀಪರ್​), ಶುಭಮನ್​ ಗಿಲ್ (ನಾಯಕ), ಸಾಯಿ ಸುದರ್ಶನ್, ಕೇನ್ ವಿಲಿಯಮ್ಸನ್, ವಿಜಯ್ ಶಂಕರ್, ಅಜ್ಮತುಲ್ಲಾ ಒಮರ್ಜಾಯ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ನೂರ್ ಅಹ್ಮದ್, ಉಮೇಶ್ ಯಾದವ್, ದರ್ಶನ್ ನಲ್ಕಂಡೆ.

ಲಕ್ನೋ: ಕ್ವಿಂಟನ್ ಡಿ ಕಾಕ್, ಕೆಎಲ್ ರಾಹುಲ್ (ನಾಯಕ), ದೇವದತ್ ಪಡಿಕ್ಕಲ್, ಮಾರ್ಕಸ್ ಸ್ಟೊಯಿನಿಸ್, ನಿಕೋಲಸ್ ಪೂರನ್, ಆಯುಷ್ ಬದೋನಿ, ಕೃನಾಲ್ ಪಾಂಡ್ಯ, ರವಿ ಬಿಷ್ಣೋಯ್, ಯಶ್ ಠಾಕೂರ್, ನವೀನ್-ಉಲ್-ಹಕ್, ಮಯಾಂಕ್ ಯಾದವ್, ಮಣಿಮಾರನ್ ಸಿದ್ಧಾರ್ಥ್.

Exit mobile version