Site icon Vistara News

Swimming | ನಟ ಮಾಧವನ್​ ಹೆಮ್ಮೆಪಡುವಂತೆ ರಾಷ್ಟ್ರೀಯ ದಾಖಲೆ ಸೃಷ್ಟಿಸಿದ ಪುತ್ರ ವೇದಾಂತ್​

swimming

ಮುಂಬಯಿ: ಬಹುಭಾಷಾ ನಟ ಆರ್​. ಮಾಧವನ್​ ಅವರ ಪುತ್ರ ವೇದಾಂತ್​ ಈಜು ಪಟುವಾಗಿದ್ದು (Swimming), ಭಾರತದ ಪ್ರತಿಭಾನ್ವಿತ ಅಥ್ಲೀಟ್​ಗಳಲ್ಲಿ ಒಬ್ಬರು. ಅವರು ನ್ಯಾಷನಲ್​ ಅಕ್ವಾಟಿಕ್​ ಚಾಂಪಿಯನ್​ಷಿಪ್​ನ ಜೂನಿಯರ್ ವಿಭಾಗದಲ್ಲಿ ನೂತನ ರಾಷ್ಟ್ರೀಯ ದಾಖಲೆಯೊಂದನ್ನು ಸೃಷ್ಟಿಸಿದ್ದಾರೆ.

ವೇದಾಂತ್​ ಮಾಧವನ್​, ಚಾಂಪಿಯನ್​ಷಿಪ್​ನ ಬಾಲಕರ ಗುಂಪು 1 ವಿಭಾಗದ 1,500 ಮೀಟರ್​ ಫ್ರೀಸ್ಟೈಲ್​ ಸ್ಪರ್ಧೆಯನ್ನು 16: 01.73 ನಿಮಿಷಗಳಲ್ಲಿ ಪೂರ್ಣಗೊಳಿಸುವ ಮೂಲಕ ಚಾಂಪಿಯನ್​ ಪಟ್ಟ ಅಲಂಕರಿಸಿ, ಹೊಸ ದಾಖಲೆಯೊಂದನ್ನು ಸೃಷ್ಟಿಸಿದರು.

2017ರಲ್ಲಿ ಮಧ್ಯಪ್ರದೇಶದ ಈಜುಪಟು ಅದ್ವೈತ್​ ಪಾಗೆ 16:06.43 ನಿಮಿಷಗಳಲ್ಲಿ 1500 ಮೀಟರ್​ ಫ್ರೀಸ್ಟೈಲ್​ನಲ್ಲಿ ರಾಷ್ಟ್ರೀಯ ದಾಖಲೆ ಸೃಷ್ಟಿಸಿದ್ದರು. ಅದನ್ನು ಅದ್ವೈತ್​ ಮಾಧವನ್​ ಅಳಿಸಿ ಹಾಕಿದ್ದಾರೆ.

ಮಗನ ಬಗ್ಗೆ ಮಾಧನವ್​ ಹೆಮ್ಮೆಯ ಮಾತು

ನಟ ಮಾಧವನ್​ ಅವರು ತಮ್ಮ ಪುತ್ರನ ಸಾಧನೆಯ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ. ಈ ಕುರಿತು ಟ್ವೀಟ್​ ಮಾಡಿರುವ ಅವರು “Never say never. National Junior Record for 1500m freestyle broken” ಎಂದು ಬರೆದುಕೊಂಡಿದ್ದಾರೆ.

ವೇದಾಂತ್ ಮಾಧವನ್​, ಕೆಲವು ತಿಂಗಳ ಹಿಂದೆ ಡೆನ್ಮಾರ್ಕ್​ನ ಕೋಪನ್​ಹೇಗನ್​ನಲ್ಲಿ ನಡೆದ ಡ್ಯಾನಿಶ್​ ಓಪನ್​-2022 ಈಜು ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದು ಸಾಧನೆ ಮಾಡಿದ್ದರು. ಈ ವೇಳೆಯೂ ಮಾಧವನ್​ ಸಂಭ್ರಮ ವ್ಯಕ್ತಪಡಿಸಿದ್ದರು. ನಾನು ಮುಂಬಯಿಯ ರಸ್ತೆಯೊಂದರ ಬಳಿ ನಡೆದುಕೊಂಡು ಹೋಗುತ್ತಿದ್ದಾಗ ಸಾಕಷ್ಟು ಜನ ನನ್ನೆಡೆಗೆ ನಗೆ ಬೀರುತ್ತಾರೆ. ನಾನು ನನ್ನ ರಾಕೆಟ್ರಿ ಸಿನೆಮಾದ ಯಶಸ್ಸಿನ ಹಿನ್ನೆಲೆಯಲ್ಲಿ ನಗುತ್ತಿದ್ದಾರೆ ಎಂದು ಅಂದುಕೊಂಡಿದ್ದೆ. ಆದರೆ ಅವರೆಲ್ಲರೂ ವೇದಾಂತ್​ ಚಿನ್ನ ಗೆದ್ದಿರುವ ಬಗ್ಗೆಯೇ ಪ್ರಶ್ನೆ ಕೇಳುತ್ತಿದ್ದರು ಎಂದು ಹೇಳಿದ್ದಾರೆ.

ಇದನ್ನೂ ಓದಿ | ಯಲಹಂಕದಲ್ಲಿ ಕ್ರೀಡಾ ವಿಶ್ವವಿದ್ಯಾಲಯ: ಕ್ರೀಡಾ ಸಚಿವ ನಾರಾಯಣಗೌಡ

Exit mobile version