ಮ್ಯಾಡ್ರಿಡ್: ಭಾರತದ ಹಿರಿಯ ಟೆನಿಸ್ ಆಟಗಾರ ರೋಹನ್ ಬೋಪಣ್ಣ ಮತ್ತು ಆಸ್ಟ್ರೇಲಿಯಾದ ಮ್ಯಾಥ್ಯು ಎಬ್ಡೆನ್ ಜೋಡಿ ಇಲ್ಲಿ ನಡೆದ ಮ್ಯಾಡ್ರಿಡ್ ಓಪನ್ ಟೆನಿಸ್(Madrid Open) ಟೂರ್ನಿಯ ಪುರುಷರ ಡಬಲ್ಸ್ ವಿಭಾಗದ ಫೈನಲ್‌ನಲ್ಲಿ ಸೋಲು ಕಾಣುವ ಮೂಲಕ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟಿದೆ.
ಶನಿವಾರ ರಾತ್ರಿ ನಡೆದ ಈ ಫೈನಲ್ ಪಂದ್ಯದಲ್ಲಿ ಬೋಪಣ್ಣ-ಎಬ್ಡೆನ್ ಜೋಡಿ 3-6, 6-3, 3-10 ರಲ್ಲಿ ರಷ್ಯಾದ ಕರೆನ್ ಕಚನೊವ್-ಆಯಂಡ್ರೆ ರುಬ್ಲೆವ್ ಜೋಡಿಯ ವಿರುದ್ಧ ಸೋಲು ಕಂಡರು. ಇದಕ್ಕೂ ಮುನ್ನ ನಡೆದ ಸೆಮಿಫೈನಲ್ನಲ್ಲಿ ಬೋಪಣ್ಣ-ಎಬ್ಡೆನ್ ಜೋಡಿ 5-7, 7-6(3), 10-4ರಿಂದ ಮೆಕ್ಸಿಕೊದ ಸ್ಯಾಂಟಿಯಾಗೊ ಗೊನ್ಜಾಲೆಜ್ ಮತ್ತು ಫ್ರಾನ್ಸ್‌ನ ಎಡ್ವರ್ಡ್ ರೋಜರ್ ವೆಸಲಿನ್ ಅವರನ್ನು ಮಣಿಸಿದ್ದರು.
ಜಿದ್ದಾಜಿದ್ದಿನ ಫೈನಲ್ ಕಾದಾಟದಲ್ಲಿ ಮೊದಲ ಸೆಟ್ ಸೋತರೂ ದ್ವಿತೀಯ ಸೆಟ್ನಲ್ಲಿ ತಿರುಗಿ ಬಿದ್ದ ಬೋಪಣ್ಣ ಜೋಡಿ ಈ ಸೆಟ್ ಗೆದ್ದು ಪಂದ್ಯದಲ್ಲಿ ಹಿಡಿತ ಸಾಧಿಸಿದರು. ಆದರೆ ಅಂತಿಮ ಹಾಗೂ ನಿರ್ಣಾಯಕ ಸೆಟ್ನಲ್ಲಿ ಇದೇ ಪ್ರದರ್ಶನ ಮುಂದುವರಿಸುವಲ್ಲಿ ವಿಫಲವಾದ ಕಾರಣ ಸೋಲು ಕಾಣುವಂತಾಯಿತು.
ಇದನ್ನೂ ಓದಿ US Open Tennis | ಮಾಜಿ ವಿಶ್ವ ನಂಬರ್ ಆಟಗಾರನಿಗೆ ಯುಎಸ್ ಓಪನ್ ಚಾನ್ಸ್ ಕೂಡ ಮಿಸ್
43 ವರ್ಷದ ಬೋಪಣ್ಣ ಅವರು ಮಾರ್ಚ್‌ನಲ್ಲಿ ನಡೆದ ಬಿಎನ್‌ಪಿ ಪರಿಬಾಸ್ ಓಪನ್ ಟ್ರೋಫಿ ಗೆದ್ದು ಎಟಿಪಿ ಮಾಸ್ಟರ್ಸ್ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿದ ಅತ್ಯಂತ ಹಿರಿಯ ಆಟಗಾರ ಎನಿಸಿಕೊಂಡಿದ್ದರು. ಆದರೆ ಮ್ಯಾಡ್ರಿಡ್ ಓಪನ್ನ ಫೈನಲ್ ಹಂತದಲ್ಲಿ ಎಡವಿ ಚಾಂಪಿಯನ್ ಪಟ್ಟದಿಂದ ವಂಚಿತರಾದರು.