ನವದೆಹಲಿ: ಕ್ರಿಕೆಟ್ ಜಗತ್ತು ಕಂಡ ಶ್ರೇಷ್ಠ ಆಟಗಾರರ ಪಂಕ್ತಿಯಲ್ಲಿ ಮಹೇಂದ್ರ ಸಿಂಗ್ ಧೋನಿ ಹಾಗೂ ವಿರಾಟ್ ಕೊಹ್ಲಿ ಕೂಡ ನಿಸ್ಸಂಶಯವಾಗಿ ಸೇರುತ್ತಾರೆ. ಧೋನಿ ನಾಯಕತ್ವದಿಂದ ಕ್ರಿಕೆಟ್ ಜಗತ್ತನ್ನು ಆಳಿದರೆ, ಕಿಂಗ್ ಕೊಹ್ಲಿ ರನ್ ಹಾಗೂ ಶತಕಗಳಿಂದಲೇ Goat ಎನಿಸಿದ್ದಾರೆ. ಈ ಇಬ್ಬರು ದಿಗ್ಗಜರು ಕ್ರಿಕೆಟ್, ಜನಪ್ರಿಯತೆ, ಫ್ಯಾನ್ಸ್ ಜತೆಗೆ ಹಣಗಳಿಕೆಯಲ್ಲೂ ಮುಂದಿದ್ದಾರೆ. ಇವರಿಬ್ಬರ ಆಸ್ತಿಯ ಮೌಲ್ಯದ ಕುರಿತು ಇತ್ತೀಚೆಗೆ ವರದಿಯೊಂದು ಪ್ರಕಟವಾಗಿದ್ದು, ಧೋನಿಗಿಂತ (Dhoni Net Worth) ಕೊಹ್ಲಿಯೇ ಹೆಚ್ಚು ಶ್ರೀಮಂತ ಎಂದು ತಿಳಿದುಬಂದಿದೆ.
ಹೌದು, ಕೆಲ ದಿನಗಳ ಹಿಂದಷ್ಟೇ ಸ್ಟಾಕ್ ಗ್ರೋ ಎಂಬ ಸಂಸ್ಥೆಯು ಇಬ್ಬರೂ ಕ್ರಿಕೆಟಿಗರ ಆಸ್ತಿಯ ಮೌಲ್ಯದ ಕುರಿತು ವರದಿ ಪ್ರಕಟಿಸಿದೆ. ವರದಿಯ ಪ್ರಕಾರ ಮಹೇಂದ್ರ ಸಿಂಗ್ ಧೋನಿ ಒಟ್ಟು ಆಸ್ತಿಯ ಮೌಲ್ಯ 1,040 ಕೋಟಿ ರೂ. ಆದರೆ, ವಿರಾಟ್ ಕೊಹ್ಲಿ ಆಸ್ತಿಯ ಮೌಲ್ಯ 1,050 ಕೋಟಿ ರೂ. ಆಗಿದೆ. ಇದರೊಂದಿಗೆ, 10 ಕೋಟಿ ರೂ. ಅಂತರದಲ್ಲಿ ಕೊಹ್ಲಿ ಶ್ರೀಮಂತರೆನಿಸಿದ್ದಾರೆ.
ಕೊಹ್ಲಿ ಆದಾಯದ ಮೂಲಗಳು
ವಿರಾಟ್ ಕೊಹ್ಲಿ ಅವರು ಬಿಸಿಸಿಐ ಕಾಂಟ್ರ್ಯಾಕ್ಟ್‌ನ ಎ ಪ್ಲಸ್ ಕೆಟಗರಿಯಲ್ಲಿದ್ದು, ಇದರಿಂದ ವರ್ಷಕ್ಕೆ 7 ಕೋಟಿ ರೂ. ಗಳಿಸುತ್ತಾರೆ. ಅವರಿಗೆ ಪ್ರತಿ ಟೆಸ್ಟ್ ಪಂದ್ಯಕ್ಕೆ 15 ಲಕ್ಷ ರೂ., ಏಕದಿನ 6 ಲಕ್ಷ ರೂ., ಟಿ-20ಗೆ 3 ಲಕ್ಷ ರೂ. ಸಂಭಾವನೆ ಪಡೆಯುತ್ತಾರೆ. ಇನ್ನು ಐಪಿಎಲ್‌ನಲ್ಲಿ ಆರ್‌ಸಿಬಿ ಪರ ಆಡುವ ಅವರಿಗೆ ವಾರ್ಷಿಕ 15 ಕೋಟಿ ರೂ. ದೊರೆಯುತ್ತದೆ. ಇನ್ನು ಇವರ ಬ್ಯುಸಿನೆಸ್, ಜಾಹೀರಾತು, ಸೋಷಿಯಲ್ ಮೀಡಿಯಾ ಪೋಸ್ಟ್‌ಗಳಿಂದಲೂ ಕೋಟ್ಯಂತರ ರೂ. ಪಡೆಯುತ್ತಾರೆ. ಇಷ್ಟೆಲ್ಲ ಆದಾಯ ಮೂಲಗಳಿಂದ ಕೊಹ್ಲಿ 1,050 ಕೋಟಿ ರೂ. ಗಳಿಸಿದ್ದಾರೆ.
ಇದನ್ನೂ ಓದಿ: MS Dhoni: ಕ್ಯಾಪ್ಟನ್ ಕೂಲ್ ಧೋನಿಯೂ ಆ್ಯಂಗ್ರಿಮ್ಯಾನ್ ಆಗಿ ಬದಲಾಗಿದ್ದರು!
ಧೋನಿ ಆದಾಯದ ಮೂಲಗಳು
ಮಹೇಂದ್ರ ಸಿಂಗ್ ಧೋನಿ ಅವರು ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕರಾಗಿದ್ದು, ಅವರಿಗೆ 12 ಕೋಟಿ ರೂ. ಸಿಗಲಿದೆ. ಇನ್ನು ಧೋನಿ ಅವರ ಬ್ಯುಸಿನೆಸ್, ರಿಯಲ್ ಎಸ್ಟೇಟ್ ಇನ್ವೆಸ್ಟ್‌ಮೆಂಟ್, ಜಾಹೀರಾತು ಆದಾಯ ಸೇರಿ ಹಲವು ಮೂಲಗಳಿಂದ ಅವರ ಆಸ್ತಿಯ ಮೌಲ್ಯ 1,040 ಕೋಟಿ ರೂ. ಆಗಿದೆ. ಸಾಮಾಜಿಕ ಜಾಲತಾಣಗಳ ಪೋಸ್ಟ್‌ಗಳಿಂದಲೂ ಧೋನಿ ಅವರಿಗೆ ಕೋಟ್ಯಂತರ ರೂ. ಸಿಗುತ್ತದೆ.