ಕೌಲಾಲಂಪುರ: ಕಳೆದ 2 ವರ್ಷಗಳಿಂದಲೂ ಪ್ರಶಸ್ತಿ ಬರ ಎದುರಿಸುತ್ತಿರುವ ಅವಳಿ ಒಲಿಂಪಿಕ್ಸ್ ಪದಕ ವಿಜೇತ, ಭಾರತದ ತಾರಾ ಶಟ್ಲರ್ ಪಿ.ವಿ.ಸಿಂಧು(PV Sindhu), ತಮ್ಮ ಪ್ರಶಸ್ತಿ ಬರಗಾಲವನ್ನು ನೀಗಿಸುವ ನಿರೀಕ್ಷೆಯಲ್ಲಿದ್ದಾರೆ. ಇಂದು ನಡೆಯುವ ಮಲೇಷ್ಯಾ ಮಾಸ್ಟರ್ ಸೂಪರ್ 500 ಬ್ಯಾಡ್ಮಿಂಟನ್ ಪಂದ್ಯಾವಳಿಯ(Malaysia Masters final) ಫೈನಲ್ ಪಂದ್ಯದಲ್ಲಿ ಸಿಂಧು ಚೀನಾದ ದ್ವಿತೀಯ ಶ್ರೇಯಾಂಕದ ವಾಂಗ್ ಝಿ ಯಿ(Z.Y. Wang) ಅವರ ಸವಾಲು ಎದುರಿಸಲಿದ್ದಾರೆ.
ಶನಿವಾರ ರಾತ್ರಿ ನಡೆದ ಮಹಿಳಾ ಸಿಂಗಲ್ಸ್ ವಿಭಾಗದ ತೀವ್ರ ಪೈಪೋಟಿಯ ಸೆಮಿಫೈನಲ್ ಸೆಣಸಾಟದಲ್ಲಿ 5ನೇ ಶ್ರೇಯಾಂಕದ ಸಿಂಧು ಥಾಯ್ಲೆಂಡ್‌ನ 20ನೇ ಶ್ರೇಯಾಂಕದ ಆಟಗಾರ್ತಿ ಬುಸಾನನ್(Busanan Ongbamrungphan) ವಿರುದ್ಧ 13-21, 21-16, 21-12 ಅಂತರದಿಂದ ಗೆಲುವು ಸಾಧಿಸಿದ್ದರು.
ಮೊದಲ ಗೇಮ್ನಲ್ಲಿ ನೀರಸ ಪ್ರದರ್ಶನ ತೋರಿದ ಸಿಂಧು, ಆ ಬಳಿಕದ ಮಹತ್ವದ ಎರಡೂ ಗೇಮ್ಗಳನ್ನು ಗೆದ್ದು ಮೇಲುಗೈ ಸಾಧಿಸಿದರು. ಬಲಿಷ್ಠ ಹೊಡೆತಗಳ ಮೂಲಕ ಎದುರಾಳಿಯನ್ನು ಹೊಡೆದುರುಳಿಸಿದರು. ಈ ಪಂದ್ಯ 88 ನಿಮಿಷಗಳ ತನಕ ಸಾಗಿತು. ಇದು ಬುಸಾನನ್ ವಿರುದ್ಧ ಸಿಂಧುಗೆ ಒಲಿದ 18ನೇ ಗೆಲುವು. ಒಟ್ಟು 19 ಪಂದ್ಯಗಳಲ್ಲಿ ಸಿಂಧು ಇವರ ವಿರುದ್ಧ ಆಡಿದ್ದಾರೆ. ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ವಿಶ್ವ ನಂ.6, ಚೀನಾದ ಹ್ಯಾನ್ ಯು ವಿರುದ್ಧ ತೀವ್ರ ಹೋರಾಟ ನಡೆಸಿ ಸಿಂಧು 21-13, 14-21, 21-12ಅಂತರದಲ್ಲಿ ಗೆಲುವು ಸಾಧಿಸಿದ್ದರು.
ಇದನ್ನೂ ಓದಿ Malaysia Masters: ವಿಶ್ರಾಂತಿ ಬಳಿಕ ಮಲೇಷ್ಯಾ ಮಾಸ್ಟರ್ಸ್ನಲ್ಲಿ ಕಣಕ್ಕಿಳಿಯಲು ಸಜ್ಜಾದ ಸಿಂಧು
ಜುಲೈ 26ರಿಂದ ಆರಂಭಗೊಳ್ಳುವ ಒಲಿಂಪಿಕ್ಸ್ ಕ್ರೀಡಾಕೂಟಕ್ಕೂ ಮುನ್ನ ಸಿಂಧು ಮತ್ತೆ ಕಮ್ ಬಾಕ್ ಮಾಡಿದ್ದು ಸಂತಸದ ವಿಚಾರ. ಪ್ಯಾರಿಸ್ ಒಲಿಂಪಿಕ್ಸ್ ಸವಾಲಿಗೆ ಸಜ್ಜಾಗುವ ಕಾರಣದಿಂದ ಪ್ರತಿಷ್ಠಿತ ಉಬರ್ ಕಪ್(Uber Cup) ಮತ್ತು ಥಾಯ್ಲೆಂಡ್ ಓಪನ್(Thailand Open 2024) ಸೂಪರ್ 500 ಬ್ಯಾಡ್ಮಿಂಟನ್ ಪಂದ್ಯಾವಳಿಯಿಂದ ಹಿಂದೆ ಸರಿದ್ದಿದ್ದರು. ಇದೀಗ ಮಲೇಷ್ಯಾದಲ್ಲಿ ಪ್ರಶಸ್ತಿ ಬರಗಾಲ ನೀಗಿಸಿಕೊಳ್ಳುವ ಉತ್ತಮ ಅವಕಾಶ ಅವರ ಮುಂದಿದೆ. 2022ರ ಸಿಂಗಾಪುರ್ ಓಪನ್ ಪಂದ್ಯಾವಳಿ ಬಳಿಕ ಸಿಂಧು ಯಾವುದೇ ಪ್ರಶಸ್ತಿ ಜಯಿಸಿಲ್ಲ.
ಚೀನಾದ ವಾಂಗ್ ಝಿ ಯಿ ವಿರುದ್ಧ ಸಿಂಧು 3 ಪಂದ್ಯಗಳನ್ನಾಡಿ 2 ಪಂದ್ಯಗಳನ್ನು ಗೆದ್ದಿದ್ದಾರೆ. ಹೀಗಾಗಿ ಇಂದಿನ ಫೈನಲ್ ಪಂದ್ಯದಲ್ಲಿಯೂ ಸಿಂಧು ಪ್ರಶಸ್ತಿ ಫೇವರಿಟ್ ಆಗಿದ್ದಾರೆ. ಕಳೆದ ವರ್ಷ ಮೊಣಕಾಲಿನ ಗಾಯಕ್ಕಾಗಿ ವಿಶ್ರಾಂತಿ ಪಡೆದು, ಚೇತರಿಸಿಕೊಂಡ ಬಳಿಕ ಅವರಿಗೆ ಫಾರ್ಮ್ ಕಂಡುಕೊಳ್ಳಲು ಸಾಧ್ಯವಾಗಿಲ್ಲ ಸದ್ಯ ಗಾಯದಿಂದ ಚೇತರಿಕೆ ಕಂಡು ಉತ್ತಮವಾಗಿ ಪ್ರದರ್ಶನ ತೋರುತ್ತಿದ್ದಾರೆ.