Site icon Vistara News

Malaysia Masters: ವಿಶ್ರಾಂತಿ ಬಳಿಕ ಮಲೇಷ್ಯಾ ಮಾಸ್ಟರ್ಸ್​ನಲ್ಲಿ ಕಣಕ್ಕಿಳಿಯಲು ಸಜ್ಜಾದ ಸಿಂಧು

Malaysia Masters

ಕೌಲಾಲಂಪುರ: ಪ್ಯಾರಿಸ್‌ ಒಲಿಂಪಿಕ್ಸ್‌ ಸವಾಲಿಗೆ ಸಜ್ಜಾಗುವ ಕಾರಣದಿಂದ ಪ್ರತಿಷ್ಠಿತ ಉಬರ್‌ ಕಪ್‌(Uber Cup) ಮತ್ತು ಥಾಯ್ಲೆಂಡ್‌ ಓಪನ್‌(Thailand Open 2024) ಸೂಪರ್‌ 500 ಬ್ಯಾಡ್ಮಿಂಟನ್‌ ಪಂದ್ಯಾವಳಿಯಿಂದ ಹಿಂದೆ ಸರಿದ್ದಿದ್ದ ಎರಡು ಬಾರಿಯ ಒಲಿಂಪಿಕ್‌ ಪದಕ ವಿಜೇತೆ ಪಿ.ವಿ. ಸಿಂಧು(PV Sindhu) ಮತ್ತೆ ಬ್ಯಾಡ್ಮಿಂಟನ್​ ಕೋರ್ಟ್​ಗೆ ಮರಳಲು ಸಜ್ಜಾಗಿದ್ದಾರೆ. ಮಂಗಳವಾರ ಇಲ್ಲಿ ಆರಂಭವಾಗುವ ಮಲೇಷ್ಯಾ ಮಾಸ್ಟರ್ಸ್‌ ಬ್ಯಾಡ್ಮಿಂಟನ್‌(Malaysia Masters) ಟೂರ್ನಿಯಲ್ಲಿ ಕಣಕ್ಕಿಳಿಯಲಿದ್ದಾರೆ.

ಸಿಂಧು ಟೋಕಿಯೊ ಒಲಿಂಪಿಕ್ಸ್​ ಬಳಿಕ ಆಡಿದ ಎಲ್ಲ ಪ್ರಮುಖ ಟೂರ್ನಿಯಲ್ಲಿಯೂ ಕಳಪೆ ಪ್ರದರ್ಶನ ತೋರುವ ಮೂಲಕ ಸೋಲು ಕಾಣುತ್ತಲೇ ಬಂದಿದ್ದಾರೆ. ಕಳೆದ ವರ್ಷ ಮೊಣಕಾಲಿನ ಗಾಯಕ್ಕಾಗಿ ವಿಶ್ರಾಂತಿ ಪಡೆದು, ಚೇತರಿಸಿಕೊಂಡ ಬಳಿಕ ಅವರಿಗೆ ಫಾರ್ಮ್‌ ಕಂಡುಕೊಳ್ಳಲು ಸಾಧ್ಯವಾಗಿಲ್ಲ. ಪ್ರಸಕ್ತ ಋತುವಿನಲ್ಲಿ ಆಡಿದ ಆರು ಟೂರ್ನಿಗಳಲ್ಲಿ ಎರಡರಲ್ಲಿ ಮಾತ್ರ ಕ್ವಾರ್ಟರ್‌ಫೈನಲ್‌ ಹಂತ ತಲುಪಿದ್ದೇ ಅವರ ದೊಡ್ಡ ಸಾಧನೆಯಾಗಿತ್ತು. ಹೀಗಾಗಿ ಅವರು ವಿಶ್ರಾಂತಿ ಪಡೆದು ಕಠಿಣ ಅಭ್ಯಾಸ ನಡೆಸಿದ್ದರು. ಇದೀಗ ಈ ಟೂರ್ನಿಯಲ್ಲಿ ಅವರ ಪ್ರದರ್ಶನ ಹೇಗಿರಲಿದೆ ಎನ್ನುವುದನ್ನು ಕಾದು ನೋಡಬಬೇಕಿದೆ.

ಸಿಂಧು ಅವರು ತಮ್ಮ ಮೊದಲ ಪಂದ್ಯದಲ್ಲಿ ಸ್ಕಾಟ್ಲೆಂಡ್​ನ ಕಿರ್ಸ್ಟಿ ಗಿಲ್ಮೊರ್ ವಿರುದ್ಧ ಆಡುವ ಮೂಲಕ ಅಭಿಯಾನ ಆರಂಭಿಸಲಿದ್ದಾರೆ. ಅಶ್ಮಿತಾ ಚಾಲಿಹಾ, ಆಕರ್ಷಿ ಕಶ್ಯಪ್ ಮತ್ತು ಮಾಳವಿಕಾ ಬನ್ಸೋಡ್ ಅವರು ಕ್ವಾಲಿಫೈಯರ್‌ ಹಂತದಲ್ಲಿ ಸ್ಪರ್ಧಿಸಲಿದ್ದಾರೆ. ಕಿರಣ್‌ ಜಾರ್ಜ್‌, ಪುರುಷರ ಸಿಂಗಲ್ಸ್‌ನಲ್ಲಿ ಸ್ಪರ್ಧೆಯಲ್ಲಿರುವ ಭಾರತದ ಏಕೈಕ ಆಟಗಾರನಾಗಿದ್ದು, ಅವರು ಮೊದಲ ಸುತ್ತಿನ ಪಂದ್ಯದಲ್ಲಿ ಜಪಾನ್‌ನ ಟಕುಮಾ ಒಬಯಾಶಿ ಅವರನ್ನು ಎದುರಿಸಲಿದ್ದಾರೆ.

ಇದನ್ನೂ ಓದಿ PV Sindhu: ನೂತನ ಕೋಚ್​ ಮೊರೆ ಹೋದ ಪಿ.ವಿ. ಸಿಂಧು

ಭಾನುವಾರ ಮುಕ್ತಾಯ ಕಂಡಿದ್ದ ಥಾಯ್ಲೆಂಡ್‌ ಓಪನ್​ನಲ್ಲಿ ಚಾಂಪಿಯನ್​ ಪಟ್ಟ ಅಲಂಕರಿಸಿದ್ದ ಸ್ಟಾರ್​ ಜೋಡಿ ಸಾತ್ವಿಕ್‌ಸಾಯಿರಾಜ್‌ ರಾಂಕಿರೆಡ್ಡಿ ಮತ್ತು ಚಿರಾಗ್‌ ಶೆಟ್ಟಿ ಈ ಟೂರ್ನಿಯಿಂದ ಹೊರಗುಳಿದಿದ್ದಾರೆ. ಇವರ ಅನುಪಸ್ಥಿತಿಯಲ್ಲಿ ಕೃಷ್ಣ ಪ್ರಸಾದ್‌ ಗರಗ ಮತ್ತು ಸಾಯಿ ಪ್ರತೀಕ್‌ ಕೆ. ಆಡಲಿದ್ದಾರೆ. ಮಿಕ್ಸೆಡ್‌ ಡಬಲ್ಸ್‌ನಲ್ಲಿ ಬಿ. ಸುಮಿತ್ ರೆಡ್ಡಿ ಮತ್ತು ಎನ್.ಸಿಕ್ಕಿ ರೆಡ್ಡಿ ದಂಪತಿ ಹಾಗೂ ಸತೀಶ್ ಕುಮಾರ್ ಕರುಣಾಕರನ್ ಮತ್ತು ಆದ್ಯಾ ವರಿಯಾತ್ ಜೋಡಿಯು ಸುಧಾರಿತ ಪ್ರದರ್ಶನದ ವಿಶ್ವಾಸದಲ್ಲಿದೆ.

Exit mobile version