Site icon Vistara News

Malaysia Open Badminton| ಬ್ಯಾಡ್ಮಿಂಟನ್​; ಮೊದಲ ಸುತ್ತಿನಲ್ಲೇ ಸೋಲು ಕಂಡ ಸೈನಾ ನೆಹ್ವಾಲ್​, ಕೆ. ಶ್ರೀಕಾಂತ್​

Saina Nehwal

ಕೌಲಲಾಂಪುರ : ಭಾರತದ ಸ್ಟಾರ್​ ಶಟ್ಲರ್​ಗಳಾದ ಕಿದಂಬಿ ಶ್ರೀಕಾಂತ್‌ ಮತ್ತು ಸೈನಾ ನೆಹ್ವಾಲ್​ ಅವರು ಮಲೇಷ್ಯಾ ಓಪನ್ ಬ್ಯಾಡ್ಮಿಂಟನ್(Malaysia Open Badminton) ಟೂರ್ನಿಯ ಮೊದಲ ಸುತ್ತಿನ ಪಂದ್ಯದಲ್ಲೇ ಆಘಾತ ಅನುಭವಿಸಿದ್ದಾರೆ. ಮಂಗಳವಾರ ನಡೆದ ಸಿಂಗಲ್ಸ್​ ವಿಭಾಗದ ಸ್ಪರ್ಧೆಯಲ್ಲಿ ಸೈನಾ ಮತ್ತು ಶ್ರೀಕಾಂತ್​ ಸೋಲು ಕಂಡಿದ್ದಾರೆ.

ಎರಡು ಬಾರಿಯ ಕಾಮನ್ವೆಲ್ತ್​ ಗೇಮ್ಸ್ ಚಾಂಪಿಯನ್​ ಸೈನಾ ನೆಹ್ವಾಲ್​ ಮಹಿಳಾ ಸಿಂಗಲ್ಸ್​ ವಿಭಾಗದಲ್ಲಿ ಚೀನಾದ ಹಾನ್‌ ಯು ವಿರುದ್ಧ 12-21, 21-12, 12-21 ಗೇಮ್​ ಅಂತರದಿಂದ ಸೋಲು ಕಂಡರು. ಮೊದಲ ಗೇಮ್​ನಲ್ಲಿ ಸೋಲು ಕಂಡರೂ ದ್ವಿತೀಯ ಗೇಲ್​ನಲ್ಲಿ ತಿರುಗಿ ಬಿದ್ದ ಸೈನಾ 1-1 ಸಮಬಲದೊಂದಿಗೆ ಪಂದ್ಯದಲ್ಲಿ ಹಿಡಿದ ಸಾಧಿಸಿದರು. ಆದರೆ ಅಂತಿಮ ಗೇಮ್​ನಲ್ಲಿ ಮತ್ತೆ ಎಡವಿ ಸೋಲು ಕಂಡರು.

2022ರಲ್ಲಿ ಗಾಯದ ಸಮಸ್ಯೆಯಿಂದ ಬಳಲಿದ ಸೈನಾ ಬಹುತೇಕ ಟೂರ್ನಿಯಿಂದ ಹೊರಗುಳಿದಿದ್ದರು. ಇದೀಗ ಚೇತರಿಕೆಯ ಬಳಿಕ ಆಡಿದ ಮೊದಲ ಟೂರ್ನಿಯಲ್ಲೇ ಸೋಲು ಕಂಡಿದ್ದಾರೆ. ಸೋಲಿನ ಬಳಿಕ ಮಾತನಾಡಿದ ಅವರು ವರ್ಷಾರಂಭದ ಮೊದಲ ಟೂರ್ನಿಯಲ್ಲಿ ನಿರೀಕ್ಷಿತ ಪ್ರದರ್ಶನ ತೋರದ ಬಗ್ಗೆ ಬೇಸರವಿದೆ. ಆದರೆ ಮುಂದಿನ ಟೂರ್ನಿಯಲ್ಲಿ ಶ್ರೇಷ್ಠ ಪ್ರದರ್ಶನದ ಮೂಲಕ ಆಟದ ಲಯವನ್ನು ಕಂಡುಕೊಳ್ಳಲಿದ್ದೇನೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಶ್ರೀಕಾಂತ್‌ಗೆ ಸೋಲು

ಪುರುಷರ ಸಿಂಗಲ್ಸ್​ ವಿಭಾಗದಲ್ಲಿ ಕಿದಂಬಿ ಶ್ರೀಕಾಂತ್‌ ಅವರು ಜಪಾನ್‌ನ ಕೆಂಟೊ ನಿಶಿಮೊಟಾ ವಿರುದ್ಧ 19-21, 14-21 ನೇರ ಗೇಮ್​ಗಳಿಂದ ಹಿನಾಯ ಸೋಲು ಕಂಡರು. ಶ್ರೇಯಾಂಕ ರಹಿತ ಆಟಗಾರ ಕೆಂಟೊ ವಿರುದ್ಧ ಅನುಭವಿ ಆಟಗಾರ ಶ್ರೀಕಾಂತ್​ ಯಾವ ಹಂತದಲ್ಲಿಯೂ ಮೇಲುಗೈ ಸಾಧಿಸುವಲ್ಲಿ ಯಶಸ್ಸು ಕಾಣಲಿಲ್ಲ. ಉಭಯ ಆಟಗಾರರ ಹೋರಾಟ ಕೇವಲ 42 ನಿಮಿಷದಲ್ಲೇ ಕೊನೆಗೊಂಡಿತು.

ಇದನ್ನೂ ಓದಿ | PV Sindhu | ಗಾಯದ ಸಮಸ್ಯೆಯಿಂದ ಮುಕ್ತಿ ಪಡೆದ ಪಿ. ವಿ ಸಿಂಧೂ, ಮಲೇಷ್ಯಾ ಓಪನ್​ಗೆ ಸಜ್ಜು

Exit mobile version