Site icon Vistara News

Malaysia Open | ಲಕ್ಷ್ಯ ಸೇನ್‌ ಮಣಿಸಿ ದ್ವಿತೀಯ ಸುತ್ತಿಗೆ ಪ್ರವೇಶಿಸಿದ ಎಚ್​.ಎಸ್​ ಪ್ರಣಯ್‌

hs prannoy

ಕೌಲಾಲಂಪುರ: ಇಲ್ಲಿ ನಡೆಯುತ್ತಿರುವ ಮಲೇಷ್ಯಾ ಓಪನ್‌(Malaysia Open) ಬ್ಯಾಡ್ಮಿಂಟನ್​ ಟೂರ್ನಿಯಲ್ಲಿ ಎಚ್.​ಎಸ್​ ಪ್ರಣಯ್‌ ಅವರು ಭಾರತದವರೇ ಆದ ಲಕ್ಷ್ಯ ಸೇನ್‌ ಅವರನ್ನು ಪರಾಭವಗೊಳಿಸಿ ಮುಂದಿನ ಸುತ್ತಿಗೆ ಪ್ರವೇಶ ಪಡೆದಿದ್ದಾರೆ. ಜತೆಗೆ ಪುರುಷರ ಡಬಲ್ಸ್​ನಲ್ಲಿ ಸಾತ್ವಿಕ್​-ಚಿರಾಗ್​ ಜೋಡಿಯೂ ಗೆಲುವು ಸಾಧಿಸಿದೆ.

ಬುಧವಾರ ನಡೆದ ಪುರುಷರ ಸಿಂಗಲ್ಸ್​ ವಿಭಾಗದ ಸ್ಪರ್ಧೆಯಲ್ಲಿ 8ನೇ ಶ್ರೇಯಾಂಕದ ಪ್ರಣಯ್​ ಅವರು 10ನೇ ಶ್ರೇಯಾಂಕದ ಲಕ್ಷ್ಯ ಸೇನ್​ ಅವರನ್ನು 22-24, 21-12, 21-18 ಗೇಮ್​ಗಳ ಅಂತರದಿಂದ ಹಿಮ್ಮೆಟ್ಟಿಸಿದರು. ಪ್ರಣಯ್ ಮುಂದಿನ ಪಂದ್ಯದಲ್ಲಿ ಇಂಡೊನೇಷ್ಯಾದ ಚಿಕೊ ಔರಾ ದ್ವಿ ವರ್ದೊಯೊ ಎದುರು ಆಡಲಿದ್ದಾರೆ.

ಸಾತ್ವಿಕ್- ಚಿರಾಗ್ ಜೋಡಿಗೆ ಗೆಲುವು
ಪುರುಷರ ಡಬಲ್ಸ್ ವಿಭಾಗದ ಸ್ಪರ್ಧೆಯಲ್ಲಿ ಭಾರತ ಯಶಸ್ಸಿ ಬ್ಯಾಡ್ಮಿಂಟನ್​ ಜೋಡಿ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರು ಗೆಲುವು ಸಾಧಿಸಿ 16ರ ಘಟ್ಟಕ್ಕೆ ಮುನ್ನಡೆದರು. ಮೊದಲ ಸುತ್ತಿನ ಪಂದ್ಯದಲ್ಲಿ ಸಾತ್ವಿಕ್- ಚಿರಾಗ್‌ ಜೋಡಿ 21-16, 21-13 ನೇರ ಗೇಮ್​ಗಳ ಅಂತರದಿಂದ ಕೊರಿಯಾದ ಚೊಯಿ ಸೊಲ್ ಗು ಮತ್ತು ಕಿಮ್ ವೊನ್ ಹೊ ಜೋಡಿಯನ್ನು ಮಣಿಸಿ ಮೇಲುಗೈ ಸಾಧಿಸಿದರು. ಈ ಜೋಡಿ ಮುಂದಿನ ಪ್ರೀಕ್ವಾರ್ಟರ್‌ ಫೈನಲ್‌ ಮುಖಾಮುಖಿಯಲ್ಲಿ ಇಂಡೊನೇಷ್ಯಾದ ಮುಹಮ್ಮದ್‌ ಶೊಹಿಬುಲ್‌ ಫಿಕ್ರಿ- ಬಾಗಸ್‌ ಮೌಲಾನ ಎದುರು ಅದೃಷ್ಟ ಪರೀಕ್ಷೆಗೆ ಇಳಿಯಲಿದೆ.

ಮಹಿಳಾ ಸಿಂಗಲ್ಸ್​ನ ಮೊದಲ ಸುತ್ತಿನ ಇನ್ನೊಂದು ಪಂದ್ಯದಲ್ಲಿ ಮಾಳವಿಕಾ ಬನ್ಸೋದ್‌ 9-21, 13-21ರಿಂದ ಕೊರಿಯಾದ ಆಯನ್ ಸೆ ಯೂಂಗ್ ಎದುರು ಸೋಲು ಕಂಡರು. ಮಹಿಳಾ ಡಬಲ್ಸ್‌ನಲ್ಲಿ ಅಶ್ವಿನಿ ಭಟ್‌- ಶಿಖಾ ಗೌತಮ್‌ ಜೋಡಿ 10-21, 12-21 ರಿಂದ ಥಾಯ್ಲೆಂಡ್‌ನ ಸುಪಿಸ್ಸರಾ ಪಾಸಂಪ್ರನ್‌-ಪುಟ್ಟಿಟಾ ಸುಪಜಿರಾಕುಲ್ ಸೋತು ಕೂಟದಿಂದ ನಿರ್ಗವಿಸಿದರು. ಇದಕ್ಕೂ ಮುನ್ನ ನಡೆದ ಮಹಿಳಾ ಸಿಂಗಲ್ಸ್​ನಲ್ಲಿ ಭಾರತ ಸ್ಟಾರ್​ ಆಟಗಾರ್ತಿ ಪಿ.ವಿ. ಸಿಂಧು ಸ್ಪೇನಿನ ಆಟಗಾರ್ತಿ ಕ್ಯಾರೊಲಿನಾ ಮರಿನ್‌ ವಿರುದ್ಧ 12-21, 21-10, 15-21 ಅಂತರದಲ್ಲಿ ಸೋಲು ಕಂಡು ಟೂರ್ನಿಯಿಂದ ಹೊರಬಿದ್ದಿದ್ದರು.

ಇದನ್ನೂ ಓದಿ | Malaysia Open| ಸ್ಪೇನಿನ ಬದ್ಧ ಎದುರಾಳಿ ಕ್ಯಾರೊಲಿನಾ ಮರಿನ್‌ ವಿರುದ್ಧ ಸೋಲು ಕಂಡ ಪಿ.ವಿ. ಸಿಂಧು!

Exit mobile version