ಮಾಲೆ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಇತ್ತೀಚೆಗೆ ಲಕ್ಷದ್ವೀಪಕ್ಕೆ ತೆರಳಿ, ಅಲ್ಲಿನ ಪ್ರವಾಸೋದ್ಯಮಕ್ಕೆ (Lakshadweep) ಉತ್ತೇಜನ ನೀಡಬೇಕು ಎಂದಿದ್ದಕ್ಕೇ ತಗಾದೆ ತೆಗೆದಿದ್ದ ಮಾಲ್ಡೀವ್ಸ್ ಪ್ರವಾಸೋದ್ಯಮಕ್ಕೆ (Maldives Tourism) ಭಾರಿ ಹೊಡೆತ ಬಿದ್ದಿದೆ. ಇದೀಗ ಮತ್ತೆ ಭಾರತದ ಜತೆ ಉತ್ತಮ ಸ್ನೇಹ ಬಾಂಧವ್ಯ ಸಂಪಾದಿಸಲು ಹರಸಾಹಸ ಪಡುತ್ತಿದೆ. ಇದೀಗ ಟಿ20 ವಿಶ್ವಕಪ್(T20 World Cup) ವಿಜೇತ ಭಾರತ ತಂಡದ ಸಂಭ್ರಮಾಚರಣೆಯನ್ನು ಮಾಲ್ಡೀವ್ಸ್‌ನಲ್ಲಿ ಆಚರಿಸುವಂತೆ(Maldives Tourism Invites Team India) ಅಲ್ಲಿನ ಪ್ರವಾಸೋದ್ಯಮ ಸಂಘ ಮತ್ತು ಮಾರ್ಕೆಟಿಂಗ್ ಹಾಗೂ ಸಾರ್ವಜನಿಕ ಸಂಪರ್ಕ ನಿಗಮ ಆಹ್ವಾನಿಸಿದೆ.
ಜೂನ್ 29ರಂದು ಬಾರ್ಬಡೋಸ್‌ನಲ್ಲಿ ನಡೆದ ಟಿ-ವಿಶ್ವಕಪ್ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ಮಣಿಸುವ ಮೂಲಕ ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡ ಟ್ರೋಫಿ ಎತ್ತಿಹಿಡಿದಿತ್ತು. ಬಳಿಕ ತವರಿಗೆ ಆಗಮಿಸಿದ ಭಾರತ ತಂಡಕ್ಕೆ ಮುಂಬೈನಲ್ಲಿ ಭರ್ಜರಿ ಅಭಿನಂದನಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ಸಮಾರಂಭದಲ್ಲಿ ಸಾಗರೋಪಾದಿಯಲ್ಲಿ ಸೇರಿದ ಜನರನ್ನು ಕಂಡು ಎಲ್ಲರು ಅಚ್ಚರಿಗೊಂಡಿದ್ದರು. ಇದೀಗ ಟಿ20 ವಿಶ್ವಕಪ್ ವಿಜೇತ ಭಾರತ ತಂಡವನ್ನು ಮಾಲ್ಡೀವ್ಸ್‌ಗೆ ಆಹ್ವಾನಿಸಿ ಮತ್ತೆ ಭಾರತೀಯರನ್ನು ತನ್ನತ್ತ ಸೆಳೆಯುವ ಪ್ರಯತ್ನ ಮಾಡಿದೆ.
‘ಮಾಲ್ಡೀವ್ಸ್ ಮಾರ್ಕೆಟಿಂಗ್ ಮತ್ತು ಪಬ್ಲಿಕ್ ರಿಲೇಶನ್ಸ್ ಕಾರ್ಪೊರೇಶನ್(ಎಂಎಂಪಿಆರ್‌ಸಿ), ಮಾಲ್ಡೀವ್ಸ್ ಅಸೋಸಿಯೇಶನ್ ಆಫ್ ಟೂರಿಸಂ ಇಂಡಸ್ಟ್ರೀ(ಎಂಎಟಿಐ) ಜಂಟಿಯಾಗಿ ಟೀಮ್ ಇಂಡಿಯಾಕ್ಕೆ ಮುಕ್ತ ಆಹ್ವಾನವನ್ನು ನೀಡುತ್ತಿದ್ದೇವೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
‘ವಿಶ್ವ ವಿಜೇತ ತಂಡಕ್ಕೆ ಆತಿಥ್ಯ ನೀಡಲು ನಾವು ಸಿದ್ಧರಾಗಿದ್ದೇವೆ. ವಿಶ್ರಾಂತಿಯ ಅನುಭವಗಳಿಂದ ತುಂಬಿರುವುದನ್ನು ಖಚಿತಪಡಿಸಲು ನಾವು ಇಚ್ಛಿಸುತ್ತೇವೆ’ಎಂದು ಎಂಎಂಪಿಆರ್‌ಸಿ ಸಿಇಒ ಇಬ್ರಾಹಿಂ ಶಿಯುರಿ ಮತ್ತು ಎಂಎಟಿಐ ಕಾರ್ಯದರ್ಶಿ ಅಹ್ಮದ್ ನಜೀರ್ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಭಾರತ ಹಾಗೂ ಮೋದಿ ಕುರಿತು ಮಾಲ್ಡೀವ್ಸ್ ಅಸಮಾಧಾನದ ಹೇಳಿಕೆ ನೀಡಿದ ಬಳಿಕ ದೇಶದಲ್ಲಿ ಬಾಯ್ಕಾಟ್ ಮಾಲ್ಡೀವ್ಸ್ ಅಭಿಯಾನ ಶುರುವಾದ ಕಾರಣ ಆ ದೇಶಕ್ಕೆ ತೆರಳುವವರ ಸಂಖ್ಯೆ ಭಾರಿ ಕುಸಿದಿದೆ.
ಇದನ್ನೂ ಓದಿ Team India : ಭಾರತ ತಂಡಕ್ಕೆ ಸಿಕ್ಕಿದ 125 ಕೋಟಿ ರೂ. ಬಹುಮಾನದಲ್ಲಿ ಯಾರಿಗೆ ಎಷ್ಟು? ಮಾಹಿತಿ ಬಹಿರಂಗ
ಭಾರತೀಯರ ಭೇಟಿ ಕುಸಿತ
ಮಾಲ್ಡೀವ್ಸ್‌ಗೆ ತೆರಳುವ ಪ್ರವಾಸಿಗರಲ್ಲಿ ಭಾರತೀಯರ ಸಂಖ್ಯೆಯೇ ಹೆಚ್ಚಿತ್ತು. ಆದರೆ, ಬಾಯ್ಕಾಟ್ ಅಭಿಯಾನದ ಬಳಿಕ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಕುಸಿದಿದೆ. 2024ರ ಏಪ್ರಿಲ್ 10ರವರೆಗೆ ಮಾಲ್ಡೀವ್ಸ್‌ಗೆ 6.63 ಲಕ್ಷ ಪ್ರವಾಸಿಗರು ಭೇಟಿ ನೀಡಿದ್ದಾರೆ. ಚೀನಾದ 71 ಸಾವಿರ ಪ್ರವಾಸಿಗರು ಭೇಟಿ ನೀಡಿದ್ದು, ಮೊದಲ ಸ್ಥಾನದಲ್ಲಿದ್ದಾರೆ. ನಂತರದ ಸ್ಥಾನದಲ್ಲಿ ಬ್ರಿಟನ್, ರಷ್ಯಾ, ಇಟಲಿ, ಜರ್ಮನಿ ಹಾಗೂ ಭಾರತದ ಪ್ರವಾಸಿಗರಿದ್ದಾರೆ.
ಮಾಲ್ಡೀವ್ಸ್ ಪ್ರವಾಸೋದ್ಯಮ ಸಚಿವಾಲಯ ನೀಡಿದ ಮಾಹಿತಿ ಪ್ರಕಾರ, 2023ರಲ್ಲಿ ಭಾರತೀಯರೇ ಹೆಚ್ಚಿನ ಸಂಖ್ಯೆಯಲ್ಲಿ ಮಾಲ್ಡೀವ್ಸ್‌ಗೆ ತೆರಳಿದ್ದಾರೆ. 2023ರಲ್ಲಿ ಭಾರತದಿಂದ ಮಾಲ್ಡೀವ್ಸ್‌ಗೆ 2,09,198 ಜನ ಭೇಟಿ ನೀಡಿದರೆ, ರಷ್ಯಾದಿಂದ 2,09,146 ಪ್ರವಾಸಿಗರು ಭೇಟಿ ನೀಡಿದ್ದಾರೆ. ಇನ್ನು, ಚೀನಾದಿಂದ ಕಳೆದ ವರ್ಷ 1,87,118 ಮಂದಿ ಮಾಲ್ಡೀವ್ಸ್‌ಗೆ ಭೇಟಿ ನೀಡಿದ್ದಾರೆ. ಇದೇ ಕಾರಣಕ್ಕಾಗಿಯೇ ಮಾಲ್ಡೀವ್ಸ್‌ನ ಪ್ರವಾಸೋದ್ಯಮ ಸಂಘವು, ಭಾರತದ ವಿರುದ್ಧ ಸಚಿವರು ನೀಡಿದ ಉದ್ಧಟತನದ ಹೇಳಿಕೆಯನ್ನು ಖಂಡಿಸಿದೆ. ಅಲ್ಲದೆ, ಭಾರತದ ಮನವೊಲಿಸಲು ಯತ್ನಿಸುತ್ತಿದೆ.
ನರೇಂದ್ರ ಮೋದಿ ಅವರು ಲಕ್ಷದ್ವೀಪಕ್ಕೆ ಭೇಟಿ ನೀಡಿದ ಬಳಿಕ ಭಾರತ ಹಾಗೂ ಮೋದಿ ವಿರುದ್ಧ ಮಾಲ್ಡೀವ್ಸ್ ಸಚಿವರು ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕೆ ಮಾಲ್ಡೀವ್ಸ್‌ನಲ್ಲಿಯೇ ಟೀಕೆಗಳು ವ್ಯಕ್ತವಾಗಿದ್ದವು ಮಾಲ್ಡೀವ್ಸ್ ಸಂಸದರು ಭಾರತದ ಕ್ಷಮೆಯಾಚಿಸಿದ್ದರು. ಭಾರತದಲ್ಲಂತೂ ಮಾಲ್ಡೀವ್ಸ್ ವಿರುದ್ಧ ಅಭಿಯಾನವೇ ಶುರುವಾಗಿತ್ತು. ನೂರಾರು ಸೆಲೆಬ್ರಿಟಿಗಳು, ನಟರು ಅಭಿಯಾನಕ್ಕೆ ಬೆಂಬಲ ಸೂಚಿಸಿದ್ದರು. ಇದಾದ ಬಲಿಕ ಮಾಲ್ಡೀವ್ಸ್ ಟ್ರಿಪ್ ಕ್ಯಾನ್ಸಲ್ ಮಾಡಿಕೊಂಡಿದ್ದರು. ಈಗ ಅದರ ಪರಿಣಾಮವನ್ನು ಮಾಲ್ಡೀವ್ಸ್ ಎದುರಿಸುತ್ತಿದೆ.