ಕೋಲ್ಕತಾ: ಮುಂಬರುವ ಭಾರತ ಮತ್ತು ದಕ್ಷಿಣ ಆಫ್ರಿಕಾ ಕ್ರಿಕೆಟ್ ವಿಶ್ವಕಪ್ ಪಂದ್ಯದ (ICC World Cup 2023) ಟಿಕೆಟ್ ಗಳನ್ನು ಬ್ಲ್ಯಾಕ್ನಲ್ಲಿ ಮಾರಾಟ ಮಾಡಿದ ಆರೋಪದ ಮೇಲೆ ಕೋಲ್ಕತ್ತಾದ ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ. ಆರೋಪಿಯನ್ನು ಅಂಕಿತ್ ಅಗರ್ವಾಲ್ ಎಂದು ಗುರುತಿಸಲಾಗಿದ್ದು, ಆತನ ಬಳಿ 20 ಟಿಕೆಟ್ಗಳಿದ್ದವು ನವೆಂಬರ್ 5 ರಂದು ಈಡನ್ ಗಾರ್ಡನ್ಸ್ನಲ್ಲಿ ನಡೆಯಲಿರುವ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಪಂದ್ಯದ 2,500 ರೂಪಾಯಿ ಟಿಕೆಟ್ಗಳನ್ನು ಆರೋಪಿ 11,000 ರೂ.ಗೆ ಮಾರಾಟ ಮಾಡುತ್ತಿದ್ದ.
ವಿಶೇಷವೆಂದರೆ, ವಿಶ್ವಕಪ್ ಟಿಕೆಟ್ ಮಾರಾಟಕ್ಕೆ ಸಂಬಂಧಿಸಿದಂತೆ ಕಾನೂನುಬಾಹಿರ ಚಟುವಟಿಕೆ ಬೆಳಕಿಗೆ ಬಂದಿರುವುದು ಇದೇ ಮೊದಲಲ್ಲ. ಇದಕ್ಕೂ ಮುನ್ನ ಅಕ್ಟೋಬರ್ 14 ರಂದು ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯಕ್ಕೆ ಹಲವಾರು ಟಿಕೆಟ್ಗಳನ್ನು ತಲುಪಿಸುವ ಭರವಸೆ ನೀಡಿ ಕ್ರಿಕೆಟ್ ಅಭಿಮಾನಿಗೆ 2.68 ಲಕ್ಷ ರೂ.ಗಳನ್ನು ವಂಚಿಸಿದ ವ್ಯಕ್ತಿಯನ್ನು ಅಹಮದಾಬಾದ್ನಲ್ಲಿ ಬಂಧಿಸಲಾಗಿತ್ತು.
ಆರೋಪಿ ಜಯ್ ಶಾ, ಗುಜರಾತ್ ಕ್ರಿಕೆಟ್ ಅಸೋಸಿಯೇಷನ್ (ಜಿಸಿಎ) ಏಜೆಂಟ್ ಎಂದು ಹೇಳಿಕೊಂಡು ಭಾರತ ಮತ್ತು ಪಾಕಿಸ್ತಾನ ಪಂದ್ಯದ 41 ಟಿಕೆಟ್ಗಳನ್ನು ನೀಡುವ ಭರವಸೆ ಕೊಟ್ಟಿದ್ದ. ಆದರೆ, ಪಂದ್ಯದ ಟಿಕೆಟ್ಗಾಗಿ 1.5 ಲಕ್ಷ ರೂಪಾಯಿ ಪಾವತಿಸಿದ ನಂತರ ಯಾವುದೇ ಟಿಕೆಟ್ ನೀಡದೆ ವಂಚಿಸಿದ್ದ.
ಟೀಮ್ ಇಂಡಿಯಾದ ಅಭಿಯಾನದ ಬಗ್ಗೆ ಮಾತನಾಡುವುದಾದರೆ, ಮೆನ್ ಇನ್ ಬ್ಲೂ ತಂಡವು ಪಂದ್ಯಾವಳಿಯಲ್ಲಿ ಕನಸಿನ ಓಟವನ್ನು ನಡೆಸುತ್ತಿದೆ, ಅವರು ಇಲ್ಲಿಯವರೆಗೆ ಆಡಿದ ಎಲ್ಲಾ ಆರು ಪಂದ್ಯಗಳನ್ನು ಗೆದ್ದಿದ್ದಾರೆ. ರೋಹಿತ್ ಮತ್ತು ಬಳಗ ತಂಡವು ಪ್ರಸ್ತುತ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದು, ಸೆಮಿಫೈನಲ್ ಸ್ಥಾನವನ್ನು ಬಹುತೇಕ ಭದ್ರಪಡಿಸಿಕೊಂಡಿದೆ. ನವೆಂಬರ್ 2ರಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಭಾರತ ತಂಡ ಶ್ರೀಲಂಕಾ ವಿರುದ್ಧ ಸೆಣಸಲಿದೆ.
ಪಾಕ್ ವಿರುದ್ಧ ಆಡುವಾಗ ಕೊಹ್ಲಿ ಹಾಕಿದ್ದ ಗ್ಲವ್ಸ್ ಭಾರೀ ಮೊತ್ತಕ್ಕೆ ಹರಾಜು
ಕಳೆದ ವರ್ಷ ಆಸ್ಟ್ರೇಲಿಯಾ ಆತಿಥ್ಯದಲ್ಲಿ ನಡೆದಿದ್ದ 2022ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ(IND vs PAK) ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ(virat kohli) ಅವರು ಧರಿಸಿದ್ದ ಕೈಗವಸು (ಗ್ಲೌಸ್)ಗಳು ಭಾರಿ ಮೊತ್ತಕ್ಕೆ ಹರಾಜು ಮಾಡಲಾಗಿದೆ. ಕಳೆದ ತಿಂಗಳು ಸಿಡ್ನಿಯಲ್ಲಿ ನಡೆದ ಚಾಪೆಲ್ ಫೌಂಡೇಶನ್‌ನ(The Chappell Foundation) ಆರನೇ ವಾರ್ಷಿಕ ಭೋಜನಕೂಟದಲ್ಲಿ ಕೊಹ್ಲಿಯ ಗ್ಲೌಸ್ಗಳನ್ನು ಹರಾಜಿಗೆ ಇಡಲಾಗಿತ್ತು. ಇದೀಗ ಹಾರ್ವ್ ಕ್ಲೆರ್ ಅಂತಿಮವಾಗಿ 5,750 ಯುಎಸ್ ಡಾಲರ್ (3.2 ಲಕ್ಷ ರೂ) ಮೌಲ್ಯದ ಬಿಡ್ ಸಲ್ಲಿಸಿ ಈ ಗ್ಲೌಸ್ ತನ್ನದಾಗಿಸಿಕೊಂಡಿದೆ.
ಚಾಪೆಲ್ ಪ್ರತಿಷ್ಠಾನವು ಆಸ್ಟ್ರೇಲಿಯಾದಲ್ಲಿ ನಿರಾಶ್ರಿತ ಯುವಕರಿಗೆ ಹಣವನ್ನು ಸಂಗ್ರಹಿಸುವ ಕಾರ್ಯವನ್ನು ಮಾಡುತ್ತಿದೆ. ಈ ಫೌಂಡೇಶನನ್ನು ಗ್ರೆಗ್ ಚಾಪೆಲ್ ಮತ್ತು ಆಸ್ಟ್ರೇಲಿಯಾದ ಉದ್ಯಮಿ ದರ್ಶಕ್ ಮೆಹ್ತಾ ಅವರು ಸ್ಥಾಪಿಸಿದ್ದಾರೆ. ಆಸ್ಟ್ರೇಲಿಯಾದಲ್ಲಿ ನಿರಾಶ್ರಿತ ಯುವಕರಿಗೆ ಆಶ್ರಯ, ಆರೈಕೆ, ಶಿಕ್ಷಣ, ತರಬೇತಿ ಮತ್ತು ಉತ್ತಮ ಭವಿಷ್ಯವನ್ನು ಒದಗಿಸುವುದು ಇದರ ಮುಖ್ಯ ಗುರಿಯಾಗಿದೆ.
ಇದನ್ನೂ ಓದಿ : ICC World Cup 2023 : ಬಾಂಗ್ಲಾ ವಿರುದ್ಧ ಗೆದ್ದ ಪಾಕಿಸ್ತಾನಕ್ಕೆ ಎಷ್ಟನೇ ಸ್ಥಾನ? ಸೆಮೀಸ್ ಚಾನ್ಸ್ ಉಂಟಾ?
ಚಾಪೆಲ್ ಫೌಂಡೇಶನ್ 2017ರಿಂದ ಈವರೆಗೆ 5 ಮಿಲಿಯನ್ ಡಾಲರ್‌ಗಿಂತಲೂ ಹೆಚ್ಚಿನ ಹಣವನ್ನು ಸಂಗ್ರಹಿಸಿದೆ. ಮಾಜಿ ಆಸ್ಟ್ರೇಲಿಯಾದ ಕ್ರಿಕೆಟಿಗರಾದ ಬ್ರೆಟ್ ಲೀ, ಮೈಕೆಲ್ ಬೆವನ್, ಪೀಟರ್ ನೆವಿಲ್, ಫಿಲ್ ಎಮೆರಿ, ಜಿಯೋಫ್ ಲಾಸನ್, ಗ್ರೆಗ್ ಡೈಯರ್, ಟ್ರೆವರ್ ಮತ್ತು ಇಯಾನ್ ಚಾಪೆಲ್ ಅವರು ವಾರ್ಷಿಕ ಡಿನ್ನರ್‌ಗಾಗಿ ಸಿಡ್ನಿ ಕ್ರಿಕೆಟ್ ಗ್ರೌಂಡ್ ನಲ್ಲಿ ಉಪಸ್ಥಿತರಿದ್ದರು.
ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್‌ನಲ್ಲಿ ನಡೆದಿದ್ದ ಟಿ20 ವಿಶ್ವಕಪ್‌ನ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರು ಅಜೇಯ 82 ರನ್ ಬಾರಿಸಿ ಭಾರತ ತಂಡಕ್ಕೆ ಸ್ಮರಣೀಯ ಗೆಲುವು ತಂದು ಕೊಟ್ಟಿದ್ದರು. ಈ ವೇಳೆ ಅಕ್ಷರಶಃ ಗದ್ಗದಿತರಾದ ಕೊಹ್ಲಿ, ತನ್ನ ಕಣ್ಣಾಲಿಗಳಲ್ಲಿ ಆನಂದಬಾಷ್ಪ ತುಂಬಿಕೊಂಡು ಆಕಾಶದತ್ತ ಮುಖಮಾಡಿ ತಮ್ಮದೇ ಶೈಲಿಯಲ್ಲಿ ಸಂಭ್ರಮಾಚರಣೆ ಮಾಡಿದ್ದರು.
.