Site icon Vistara News

ತಲೆಗೆ ಚೆಂಡು ಬಡಿದು ವ್ಯಕ್ತಿ ಸಾವು; ಹೃದಯಾಘಾತದಿಂದ ಪಿಚ್​ನಲ್ಲೇ ಬಿದ್ದು ಮೃತಪಟ್ಟ ಟೆಕ್ಕಿ

ಮುಂಬಯಿ: ಕ್ರಿಕೆಟ್ ಪಂದ್ಯದ ವೇಳೆ ತಲೆಗೆ ಚೆಂಡು ಬಡಿದು 52 ವರ್ಷದ ಕ್ರಿಕೆಟಿಗ ಮೃತಪಟ್ಟ ಘಟನೆ ಮುಂಬೈನಲ್ಲಿ ಸಂಭವಿಸಿದೆ. ಒಂದೇ ಮೈದಾನದಲ್ಲಿ ಎರಡು ಪಂದ್ಯಗಳು ನಡೆಯುತ್ತಿದ್ದ ವೇಳೆ ಮತ್ತೊಂದು ಪಂದ್ಯದ ಕ್ರಿಕೆಟ್ ಚೆಂಡು ತಲೆಗೆ ಬಡಿದು ಕ್ರಿಕೆಟಿಗ ಮೃತಪಟ್ಟಿದ್ದಾರೆ. ಮೃತರನ್ನು ಉದ್ಯಮಿ ಜಯೇಶ್ ಚುನ್ನಿಲಾಲ್ ಸಾವ್ಲಾ ಎಂದು ಗುರುತಿಸಲಾಗಿದೆ.

ಮಾಟುಂಗಾದ ದಾಡ್ಕರ್ ಮೈದಾನದಲ್ಲಿ ನಡೆಯುತ್ತಿದ್ದ ಕಚ್ಚಿ ವೀಸಾ ಓಸ್ವಾಲ್ ವಿಕಾಸ್ ಹಿರಿಯರ ಲೆಜೆಂಡ್ ಕಪ್ ಟಿ20 ಪಂದ್ಯಾವಳಿಯಲ್ಲಿ ಈ ಘಟನೆ ನಡೆದಿದೆ. ಸ್ಥಳಾವಕಾಶದ ಕೊರತೆ ಮತ್ತು ಸಮಯದ ಅಭಾವದಿಂದಾಗಿ ಒಂದೇ ಮೈದಾನದಲ್ಲಿ ಎರಡು ಪಂದ್ಯಗಳನ್ನು ಏಕಕಾಲದಲ್ಲಿ ಆಯೋಜಿಸಲಾಗಿತ್ತು. ಪಕ್ಕದ ಪಿಚ್‌ ನಿಂದ ಬಂದ ಚೆಂಡು ವ್ಯಕ್ತಿಯ ತಲೆಗೆ ಬಡಿದಿದೆ. ಮೃತ ವ್ಯಕ್ತಿ ಪಕ್ಕದ ಪಿಚ್​ನಲ್ಲಿ ಆಡುತ್ತಿದ್ದ ಬ್ಯಾಟರ್​ನ ಕಡೆಗೆ ಬೆನ್ನು ಹಾಕಿ ಫೀಲ್ಡಿಂಗ್ ಮಾಡುತ್ತಿದ್ದರು, ಆದ್ದರಿಂದ ಚೆಂಡು ಅವರ ಕಡೆಗೆ ಬರುವುದನ್ನು ನೋಡಲು ಸಾಧ್ಯವಾಗಲಿಲ್ಲ. ನೇರವಾಗಿ ಬಂದ ಚೆಂಡು ಸಾವ್ಲಾ ತಲೆಗೆ ಬಡಿದಿದೆ ಎಂದು ವರದಿಯಾಗಿದೆ.


ಹೃದಯಾಘಾತದಿಂದ ಮೈದಾನದಲ್ಲೇ ಮೃತಪಟ್ಟ ಇಂಜಿನಿಯರ್


ಕ್ರಿಕೆಟ್ ಆಡುವಾಗಲೇ ಹೃದಯಾಘಾತಕ್ಕೆ ಒಳಗಾಗಿ ಸಾಫ್ಟ್ ವೇರ್ ಇಂಜಿನಿಯರ್ ಮೈದಾನದಲ್ಲೇ ಕುಸಿದುಬಿದ್ದು ಮೃತಪಟ್ಟ ಘಟನೆ ನೋಯ್ಡಾದಲ್ಲಿ ಸಂಭವಿಸಿದೆ. ಮೃತರನ್ನು ವಿಕಾಸ್ ನೇಗಿ ಎಂದು ಗುರುತಿಸಲಾಗಿದೆ. ನಾನ್​ಸ್ಟ್ರೇಕ್​ನಲ್ಲಿದ್ದ​ ವಿಕಾಸ್ ಅವರು ಸ್ಟ್ರೈಕ್​ನಲ್ಲಿದ್ದ ಸಹ ಬ್ಯಾಟರ್​ ಜತೆ ಮಾತುಕತೆ ನಡೆಸಿ ಹಿಂದಿರುಗುವ ವೇಳೆ ಹಠಾತ್​ ಆಗಿ ಪಿಚ್​ನಲ್ಲೇ ಕುಸಿದು ಬಿದ್ದಿದ್ದಾರೆ.

ಇದನ್ನೂ ಓದಿ Heart Attack: ‌ಪಾಠ ಮಾಡಿ ಬಂದು ಕಚೇರಿಯಲ್ಲಿ ಕುಳಿತಲ್ಲೇ ಹೃದಯಾಘಾತ; ಶಿಕ್ಷಕ ಸಾವು

ವಿಕಾಸ್ ನೇಗಿ ಪಿಚ್​ನಲ್ಲಿ ಕುಸಿದು ಬೀಳುತ್ತಿದ್ದಂತೆ ವಿಕೆಟ್ ಕೀಪರ್ ಓಡಿ ಬಂದು ಆರೈಕೆ ಮಾಡಿದ್ದಾರೆ. ಬಳಿಕ ಅವರನ್ನು ಆಸ್ಪತ್ರೆಗೆ ಸೇರಿಸಿದರೂ ಅವರು ಮೊದಲೇ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ. ಶವವನ್ನು ಪೊಲೀಸರು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಮರಣೋತ್ತರ ಪರೀಕ್ಷೆಯಲ್ಲಿ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ.

Exit mobile version