ನೊಯ್ಡಾ: ಇತ್ತೀಚೆಗೆ ಹೃದಯಾಘಾತಕ್ಕೀಡಾಗಿ, ಮೃತಪಡುತ್ತಿರುವವರ ಸಂಖ್ಯೆ ಜಾಸ್ತಿಯಾದ ಕಾರಣ ಜನರ ಬದುಕು ಮತ್ತಷ್ಟು ಅನಿಶ್ಚಿತತೆಯಿಂದ ಕೂಡಿದೆ. ನಮ್ಮೆದುರು ಚೆನ್ನಾಗಿ ಇರುವವರು ಕೆಲವೇ ಗಂಟೆಯಲ್ಲಿ ಹೃದಯಾಘಾತದಿಂದ ಸಾವಿಗೀಡಾಗುತ್ತಿರುವುದು ಭೀತಿ ಹುಟ್ಟಿಸಿದೆ. ಇದಕ್ಕೆ ನಿದರ್ಶನ ಎಂಬಂತೆ, ಉತ್ತರ ಪ್ರದೇಶದ ನೊಯ್ಡಾದಲ್ಲಿ ಬ್ಯಾಡ್ಮಿಂಟನ್ ಆಡುತ್ತಿರುವಾಗಲೇ ಹೃದಯಾಘಾತದಿಂದ (Heart Attack) ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.
ಸೆಕ್ಟರ್ 21 ಎನಲ್ಲಿರುವ ನೊಯ್ಡಾ ಸ್ಟೇಡಿಯಂನಲ್ಲಿ 52 ವರ್ಷದ ಮಹೇಂದ್ರ ಶರ್ಮಾ ಅವರು ಬ್ಯಾಡ್ಮಿಂಟನ್ ಆಡುತ್ತಿದ್ದರು. ಬ್ಯಾಡ್ಮಿಂಟನ್ ಆಡುತ್ತಿರುವಾಗಲೇ ಅವರು ಕುಸಿದುಬಿದ್ದಿದ್ದಾರೆ. ಅವರು ಕುಸಿದು ಬೀಳುತ್ತಲೇ ಸ್ಟೇಡಿಯಂನಲ್ಲಿದ್ದ ತುರ್ತು ವೈದ್ಯಕೀಯ ತಂಡ ಆಗಮಿಸಿ ತಪಾಸಣೆ ಮಾಡಿದೆ. ವೈದ್ಯರು ಮಹೇಂದ್ರ ಶರ್ಮಾ ಅವರ ಎದೆ ಒತ್ತಿ, ತಿಕ್ಕಿದ್ದಾರೆ. ಆದರೂ, ಮಹೇಂದ್ರ ಶರ್ಮಾ ಅವರು ಸುಧಾರಿಸಿಕೊಳ್ಳದ ಕಾರಣ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಹೇಂದ್ರ ಶರ್ಮಾ ಅವರನ್ನು ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ, ಅಷ್ಟೊತ್ತಿಗಾಗಲೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. “ಶನಿವಾರ ಬೆಳಗ್ಗೆ 7.30ರ ಸುಮಾರಿಗೆ ಮಹೇಂದ್ರ ಶರ್ಮಾ ಅವರು ಬ್ಯಾಡ್ಮಿಂಟನ್ ಆಡುತ್ತಿರುವಾಗಲೇ ಕುಸಿದು ಬಿದ್ದಿದ್ದಾರೆ. ಕೂಡಲೇ ಆಂಬ್ಯುಲೆನ್ಸ್‌ನಲ್ಲಿ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅಷ್ಟೊತ್ತಿಗಾಗಲೇ ಅವರು ಮೃತಪಟ್ಟಿದ್ದರು” ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Heart attack: 16,000 ಹೃದ್ರೋಗಿಗಳಿಗೆ ಚಿಕಿತ್ಸೆ ನೀಡಿದ್ದ ವೈದ್ಯ ಹೃದಯಾಘಾತಕ್ಕೆ ಬಲಿ
ಸೆಕ್ಟರ್ 11ನೇ ನಿವಾಸಿಯಾಗಿರುವ ಮಹೇಂದ್ರ ಶರ್ಮಾ ಅವರು ಕಳೆದ ಐದು ವರ್ಷದಿಂದ ಬ್ಯಾಡ್ಮಿಂಟನ್ ಆಡುತ್ತಿದ್ದರು. ಅಷ್ಟರಮಟ್ಟಿಗೆ ಅವರು ಆರೋಗ್ಯದ ಕಡೆ ಗಮನ ಹರಿಸುತ್ತಿದ್ದರು. ಆದರೆ, ಏಕಾಏಕಿ ಹಾರ್ಟ್ ಅಟಾಕ್ ಆಗಿ ಅವರು ಮೃತಪಟ್ಟಿರುವುದು ದುಃಖದ ವಿಚಾರ ಎಂದು ಮಹೇಂದ್ರ ಶರ್ಮಾ ಗೆಳೆಯರು ವಿಷಾದ ವ್ಯಕ್ತಪಡಿಸಿದ್ದಾರೆ. ಆದಾಗ್ಯೂ, ಇತ್ತೀಚೆಗೆ ಹೃದಯಾಘಾತದಿಂದ ಮೃತಪಡುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಅದರಲ್ಲೂ, ಕಡಿಮೆ ವಯಸ್ಸಿನವರು ಹೃದಯಾಘಾತಕ್ಕೆ ಬಲಿಯಾಗುತ್ತಿರುವುದು ಆತಂಕ ಮೂಡಿಸಿದೆ.