ಮುಂಬಯಿ : ಸಂಜೀವ್ ಗುಪ್ತಾ ಎಂಬುವರು ಮಧ್ಯಪ್ರದೇಶ ಕ್ರಿಕೆಟ್ ಸಂಸ್ಥೆಯ ಆಜೀವ ಸದಸ್ಯ. ಅವರು ವಿರಾಟ್ ಕೊಹ್ಲಿ, ಮಹೇಂದ್ರ ಸಿಂಗ್ ಧೋನಿ ಸೇರಿದಂತೆ ಕ್ರಿಕೆಟ್ ಕ್ಷೇತ್ರದ ಪ್ರಮುಖರ ಮೇಲೆ ಒಟ್ಟು ೨೧ ಹಿತಾಸಕ್ತಿ ಸಂಘರ್ಷ (conflict of interest) ದೂರುಗಳನ್ನು ಬಿಸಿಸಿಐ ನೈತಿಕ ಅಧಿಕಾರಿಗೆ (ethics officer) ದಾಖಲಿಸಿದ್ದರು. ಅವರ ಕೊನೇ ದೂರು ಮುಂಬಯಿ ಇಂಡಿಯನ್ಸ್ ತಂಡದ ಮಾಲೀಕರಾದ ನೀತಾ ಅಂಬಾನಿ ವಿರುದ್ಧ. ಆ ದೂರು ಕೊಟ್ಟು ೧೫ ದಿನಗಳಾಗಿವೆ. ಆದರೀಗ ತಾವು ಕೊಟ್ಟಿರುವ ಎಲ್ಲ ೨೧ ದೂರುಗಳನ್ನು ವಾಪಸ್ ಪಡೆದುಕೊಂಡು ಅಚ್ಚರಿ ಮೂಡಿಸಿದ್ದಾರೆ.
ಸಂಜೀವ್ ಗುಪ್ತಾ ಅವರು ದೂರು ನೀಡಿರುವವರ ಪಟ್ಟಿಯಲ್ಲಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಬಿಸಿಸಿಐ ಕಾರ್ಯದರ್ಶಿ ಅರುಣ್ ಧುಮಾಲ್, ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಅವರೂ ಇದ್ದಾರೆ. ಇದೀಗ ಸಂಜೀವ್ ಗುಪ್ತಾ ಅವರು ಬಿಸಿಸಿಐ ನೈತಿಕ ಅಧಿಕಾರಿ ಹಾಗೂ ಬಿಸಿಸಿಐ ಒಂಬುಡ್ಸ್‌ಮನ್ ಹಾಗೂ ಮಾಧ್ಯಮಗಳಿಗೆ ಇ-ಮೇಲ್ ಸಂದೇಶ ರವಾನಿಸಿದ್ದು, ವಿಚಾರಣೆಗೆ ಬಾಕಿ ಇದ್ದ ತಮ್ಮೆಲ್ಲ ದೂರುಗಳನ್ನು ವಾಪಸ್ ಪಡೆಯುವುದಾಗಿ ಹೇಳಿದ್ದಾರೆ. ಅಲ್ಲದೆ, ಇದು ತಮ್ಮ ಕೊನೇ ಮೇಲ್ ಎಂಬುದಾಗಿ ಹೇಳಿದ್ದಾರೆ.
ಆಗಸ್ಟ್ ೨೦ರಂದು ಸಂಜೀವ್ ಗುಪ್ತಾ ಇ-ಮೇಲ್ ರವಾನೆ ಮಾಡಿದ್ದು, ನನ್ನ ಆರೋಗ್ಯ ಹಾಗೂ ಜೀವ ಉಳಿಸಿಕೊಳ್ಳುವುದಕ್ಕೆ ದೂರುಗಳನ್ನು ವಾಪಸ್ ಪಡೆದುಕೊಂಡಿದ್ದೇನೆ ಎಂದು ಬರೆದುಕೊಂಡಿದ್ದಾರೆ.
ಸಂಜೀವ್ ಗುಪ್ತಾ ಅವರು ೨೦೨೦ರ ಜುಲೈನಿಂದ ಆರಂಭಿಸಿ ಒಟ್ಟು ೨೧ ಹಿತಾಸಕ್ತಿ ಸಂಘರ್ಷ ದೂರು ದಾಖಲಿಸಿದ್ದರು. ಬಿಸಿಸಿಐ ಹೊಸ ಸಂವಿಧಾನದ ಪ್ರಕಾರ ಬಿಸಿಸಿಐಗೆ ಸಂಬಂಧಿಸಿದ ವ್ಯಕ್ತಿಯೊಬ್ಬರು ಬೇರೆ ಯಾವುದೇ ಸಂಸ್ಥೆಗಳಲ್ಲಿ ಪ್ರಮುಖ ಹುದ್ದೆಗಳನ್ನು ಹೊಂದುವಂತಿಲ್ಲ. ಕೊಹ್ಲಿ, ಧೋನಿ ಜಾಹೀರಾತು ಸಂಸ್ಥೆಗಳ ಜತೆ ಒಪ್ಪಂದ ಮಾಡಿಕೊಂಡಿದ್ದಾರೆ ಎಂಬುದಾಗಿ, ನೀತಾ ಅಂಬಾನಿ ಅವರ ಐಪಿಎಲ್ ತಂಡವೊಂದರ ಮಾಲೀಕರಾಗಿದ್ದರೂ, ತಮ್ಮದೇ ಕಂಪನಿಗೆ ಸೇರಿದ ವಯಾಕಾಮ್ ಮೂಲಕ ಐಪಿಎಲ್ ನೇರ ಪ್ರಸಾರದ ಹಕ್ಕು ಸಂಪಾದಿಸಿದ್ದಾರೆ ಎಂಬುದಾಗಿ ಸಂಜೀವ್ ಗುಪ್ತಾ ದೂರು ದಾಖಲಿಸಿದ್ದರು.
ಇದನ್ನೂ ಓದಿ | T20 World Cup | ಸೆಪ್ಟೆಂಬರ್ 15ರಂದು ವಿಶ್ವ ಕಪ್‌ಗೆ ಭಾರತ ತಂಡ ಪ್ರಕಟಿಸಲಿರುವ ಬಿಸಿಸಿಐ