ಮುಂಬಯಿ: ಮುಂದಿನ ಅಕ್ಟೋಬರ್ನಿಂದ ಭಾರತದ ಆತಿಥ್ಯದಲ್ಲಿ ಏಕ ದಿನ ವಿಶ್ವ ಕಪ್ ನಡೆಯಲಿರುವ ಕಾರಣ ಭಾರತ ತಂಡದ ಆಟಗಾರರಿಗೆ ಸವಾಲು ಎದುರಾಗಿದೆ. ಐಪಿಎಲ್ನಲ್ಲಿ ಫ್ರಾಂಚೈಸಿಗಳಿಂದ ಹಣ ಪಡೆದುಕೊಳ್ಳಲಿರುವ ಈ ಆಟಗಾರರು ಉತ್ತಮ ಪ್ರದರ್ಶನ ನೀಡಿ ಅವರನ್ನು ಮೆಚ್ಚಿಸಲು ಮುಂದಾಗಿರುವಾಗಲೇ ಹೆಚ್ಚು ಪಂದ್ಯಗಳನ್ನು ಆಡಿ ಸುಸ್ತು ಮಾಡಿಕೊಳ್ಳಬೇಡಿ ಎಂದು ನಾಯಕ ರೋಹಿತ್ ಶರ್ಮಾ ಎಚ್ಚರಿಕೆ ಕೊಟ್ಟಿದ್ದಾರೆ. ಮುಂದಿನ ಏಕದಿನ ವಿಶ್ವ ಕಪ್ನಲ್ಲಿ ಆಡಬೇಕಾಗಿರುವ ಕಾರಣ ಎಲ್ಲರೂ ಫಿಟ್ ಆಗಿರುವಂತೆ ನೋಡಿಕೊಳ್ಳಬೇಕು. ಅದಕ್ಕಾಗಿ ವರ್ಕ್ಲೋಡ್ ಮ್ಯಾನೇಜ್ ಮಾಡಿಕೊಳ್ಳಬೇಕು ಎಂದು ಕ್ಯಾಪ್ಟನ್ ಸಲಹೆ ಕೊಟ್ಟಿದ್ದಾರೆ.
ಶ್ರೇಯಸ್ ಅಯ್ಯರ್ ಗಾಯಗೊಂಡ ಕಾರಣ ಅವರು ಆಸ್ಟ್ರೇಲಿಯಾ ವಿರುದ್ಧದ ಏಕ ದಿನ ಸರಣಿಯಲ್ಲಿ ಆಡಿರಲಿಲ್ಲ. ಹೀಗಾಗಿ ಭಾರತ ತಂಡದ ಮಧ್ಯಮ ಕ್ರಮಾಂಕ ಕುಸಿತಕಂಡಿತ್ತು. ಹೀಗಾಗಿ ಟೀಮ್ ಇಂಡಿಯಾ ಸರಣಿಯಲ್ಲಿ 2-1 ಅಂತರದಿಂದ ಹಿನ್ನಡೆ ಕಂಡಿತ್ತು. ಅದೇ ರೀತಿ ಜಸ್ಪ್ರಿತ್ ಬುಮ್ರಾ ಅವರು ಎಂಟು ತಿಂಗಳಿಂದ ಟೀಮ್ ಇಂಡಿಯಾದ ಪರ ಆಡುತ್ತಿಲ್ಲ. ಅವರಿಗೂ ಗಾಯದ ಸಮಸ್ಯೆ ಎದುರಾಗಿದೆ. ಹೀಗಾಗಿ ವಿಶ್ವ ಕಪ್ಗೆ ಪ್ರಮುಖ ಆಟಗಾರರು ಲಭ್ಯರಾಗುವಂತೆ ನೋಡಿಕೊಳ್ಳುವುದು ಟೀಮ್ ಮ್ಯಾನೇಜ್ಮೆಂಟ್ ಹೊಣೆಗಾರಿಕೆಯಾಗಿದೆ. ಹೀಗಾಗಿ ಎಲ್ಲರೂ ಒತ್ತಡ ನಿರ್ವಹಣೆ ಮಾಡಿಕೊಳ್ಳಬೇಕು ಎಂದು ರೋಹಿತ್ ಶರ್ಮಾ ಸಲಹೆ ಕೊಟ್ಟಿದ್ದಾರೆ.
ಬುಧವಾರ ನಡೆದ ಆಸ್ಟ್ರೇಲಿಯಾ ವಿರುದ್ಧದ ಏಕ ದಿನ ಸರಣಿಯ ಕೊನೇ ಪಂದ್ಯದಲ್ಲಿ ಭಾರತ ತಂಡ ಸೋಲುವ ಮೂಲಕ ಸರಣಿಯನ್ನು 1-2 ಅಂತರದಿಂದ ಕಳೆದುಕೊಂಡಿತ್ತು. ಆ ಬಳಿಕ ಮಾತನಾಡಿದ ನಾಯಕ ರೋಹಿತ್ ಶರ್ಮಾ, ಆಟಗಾರರು ಒತ್ತಡ ನಿರ್ವಹಣೆ ಮಾಡಿಕೊಳ್ಳಬೇಕಾಗಿದೆ. ಆದರೆ, ಫ್ರಾಂಚೈಸಿ ಓನರ್ಗಳು ಈ ಬಗ್ಗೆ ತೀರ್ಮಾನ ಕೈಗೊಳ್ಳುತ್ತಾರೆ ಎಂಬುದಾಗಿ ರೋಹಿತ್ ಶರ್ಮಾ ಹೇಳಿದ್ದಾರೆ.
ಆಟಗಾರರಿಗೆ ಸೂಚನೆ ಕೊಟ್ಟಿದ್ದೇವೆ
ನಮ್ಮ ತಂಡದ ಎಲ್ಲ ಸದಸ್ಯರಿಗೆ ಒತ್ತಡ ನಿರ್ವಹಣೆ ಮಾಡಿಕೊಳ್ಳುವಂತೆ ಹಾಗೂ ಏಕ ದಿನ ವಿಶ್ವ ಕಪ್ಗೆ ಮೊದಲ ಫಿಟ್ ಆಗಿರುವಂತೆ ಸೂಚನೆ ಕೊಟ್ಟಿದ್ದೇವೆ. ಆದರೆ, ಎಲ್ಲವೂ ಆಟಗಾರರು ಹಾಗೂ ಫ್ರಾಂಚೈಸಿಗಳ ನಿರ್ಧಾರಗಳ ಮೇಲೆ ನಿಂದಿದೆ. ಆಟಗಾರರೆಲ್ಲರೂ ತಮಗೆ ಬೇಕಾದ್ದನ್ನು ನಿರ್ಧರಿಸಲು ಶಕ್ತರಾಗಿದ್ದಾರೆ. ಯಾರಿಗಾದರೂ ಆಟ ಹೆಚ್ಚಾಯಿತು ಎಂದು ಅನಿಸಿದರೆ ಆ ತಂಡದ ಜತೆ ಮಾತನಾಡಿ ಕೆಲವೊಂದ ಪಂದ್ಯಗಳಿಂದ ಬ್ರೇಕ್ ಪಡೆದುಕೊಳ್ಳಬಹುದು ಎಂಬುದಾಗಿ ರೋಹಿತ್ ಶರ್ಮಾ ಹೇಳಿದ್ದಾರೆ.
ಇದೇ ವೇಳೆ ಅವರು ಸೂರ್ಯಕುಮಾರ್ ಯಾದವ್ ಅವರ ಫಾರ್ಮ್ ಬಗ್ಗೆಯೂ ಮಾತನಾಡಿದರು. ಆದರೆ, ಅವರು ಮೂರು ಪಂದ್ಯಗಳಲ್ಲಿ ಸೊನ್ನೆಗೆ ಔಟಾಗಿರುವದು ದುರದೃಷ್ಟ ಎಂಬುದಾಗಿಯೂ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸೂರ್ಯಕುಮಾರ್ ಯಾದವ್ ಸರಣಿಯ ಮೂರು ಪಂದ್ಯಗಳಲ್ಲಿ ಅತ್ಯಂತ ಕಷ್ಟಕರವಾದ ಎಸೆತಗಳನ್ನು ಎದುರಿಸಿ ಔಟಾಗಿದ್ದಾರೆ. ಹಾಗೆಂದು ಮೂರನೇ ಪಂದ್ಯದಲ್ಲಿ ಅವರು ಕೆಟ್ಟ ಹೊಡೆತವನ್ನು ಹೊಡೆಯಲು ಮುಂದಾಗಿ ಔಟಾಗಿದ್ದಾರೆ. ಆಸ್ಟನ್ ಅಗರ್ ಎಸೆತ ಅಷ್ಟೊಂದು ಉತ್ತಮವಾಗಿತ್ತು ಎಂದು ಹೇಳುವುದೂ ಕಷ್ಟ ಎಂದು ರೋಹಿತ್ ಶರ್ಮಾ ಅಭಿಪ್ರಾಯಪಟ್ಟಿದ್ದಾರೆ.
ಸೂರ್ಯಕುಮಾರ್ ಯಾದವ್ ಅವರನ್ನು ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬೇಕಾಗಿತ್ತು. ಆದರೆ, ಅವರು ಸ್ಪಿನ್ ಬೌಲಿಂಗ್ಗೆ ಚೆನ್ನಾಗಿ ಆಡುತ್ತಾರೆ ಎಂಬ ಕಾರಣಕ್ಕೆ ಏಳನೇ ಕ್ರಮಾಂಕದಲ್ಲಿ ಆಡಿಸಲಾಯಿತು. ಅವರು ಇಡೀ ಸರಣಿಯಲ್ಲಿ ಕೇವಲ ಮೂರು ಎಸೆತಗಳನ್ನು ಮಾತ್ರ ಎದುರಿಸಿದ್ದು ದುರದೃಷ್ಟ. ಇಂಥ ಸಂದರ್ಭವನ್ನು ಎಲ್ಲರೂ ಎದುರಿಸುತ್ತಾರೆ. ಅವರು ತಮ್ಮ ಕಳಪೆ ಫಾರ್ಮ್ನಿಂದ ಹೊರ ಬರಲಿದ್ದಾರೆ ಎಂದು ರೋಹಿತ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸುಧಾರಿಸಿಕೊಳ್ಳುವುದಕ್ಕೆ ಅವರಿಗೆ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಸಾಕಷ್ಟು ಅವಕಾಶ ಕೂಡ ನೀಡುತ್ತದೆ ಎಂದು ಹೇಳಿದ್ದಾರೆ.