ಬೆಂಗಳೂರು: ಐಸಿಸಿ ವಿಶ್ವಕಪ್ನಲ್ಲಿ ಸತತ 5 ಗೆಲುವುಗಳನ್ನು ಸಾಧಿಸಿದ ಭಾರತ ಕ್ರಿಕೆಟ್ ತಂಡವು (Team India) ಇಂಗ್ಲೆಂಡ್ ವಿರುದ್ಧ ಆಡುವ ಮುಂದಿನ ಪಂದ್ಯದ ನಡುವೆ ಏಳು ದಿನಗಳ ವಿರಾಮ ಪಡೆಯುತ್ತದೆ. ಅದರಲ್ಲಿ ಮೊದಲೆರಡು ದಿನಗಳು ಆಟಗಾರರಿಗೆ ಸಂಪೂರ್ಣ ಫ್ರೀ. ತರಬೇತಿ ಮತ್ತು ಅಭ್ಯಾಸ ಶಿಬಿರಗಳು ಇಲ್ಲ. ಈ ಅವಧಿಯಲ್ಲಿ ಮಾನಸಿಕ ಒತ್ತಡವನ್ನು ನಿವಾರಿಸುವ ಕಡೆಗೆ ಆಟಗಾರರು ಗಮನ ಕೊಡಬೇಕಾಗಿದೆ. ಆದರೆ, ಬ್ರೇಕ್ ಕೊಡುವ ಮೊದಲು ಟೀಮ್ ಮ್ಯಾನೇಜ್ಮೆಂಟ್ ಆಟಗಾರರಿಗೆ ಖಡಕ್ ಎಚ್ಚರಿಕೆಯೊಂದನ್ನು ಕೊಟ್ಟಿದೆ. ಅದರ ಪ್ರಕಾರ ರಜೆ ಸಿಕ್ಕಿದೆ ಎಂದು ಯಾವ ಆಟಗಾರನೂ ಆ ಅವಧಿಯನ್ನು ತಮ್ಮ ವಿನೋದಕ್ಕೆ ಬಳಸುವಂತಿಲ್ಲ. ಅಂದರೆ ಟ್ರೆಕ್ಕಿಂಗ್, ಹೈಕಿಂಗ್ನಂಥ ಕಾರ್ಯಕ್ರಮಗಳನ್ನು ನಿಷೇಧಿಸಲಾಗಿದೆ. ಪ್ರಮುಖವಾಗಿ ಹಿಮಾಚಲ ಪ್ರದೇಶದ ಧರ್ಮಶಾಲಾ ಟ್ರೆಕ್ಕಿಂಗ್ಗೆ ಫೇಮಸ್. ಹೀಗಾಗಿ ಯಾರೂ ಆ ರೀತಿಯ ಕೆಲಸ ಮಾಡಬಾರದು ಎಂದು ಹೇಳಿದೆ. ಆದರೆ ಆಟಗಾರರು ಸುಂದರವಾದ ಧರ್ಮಶಾಲಾದಲ್ಲಿ ದೃಶ್ಯವೀಕ್ಷಣೆಗೆ ಹೋಗಬಹುದು.
ಇಂಗ್ಲೆಂಡ್ ವಿರುದ್ಧದ ತಯಾರಿಯನ್ನು ಪ್ರಾರಂಭಿಸಲು ತಂಡದ ನಿಯೋಗವು ಲಕ್ನೋಗೆ ಪ್ರಯಾಣಿಸುವ ಮೊದಲು ಆಟಗಾರರಿಗೆ 2 ದಿನಗಳ ವಿಶ್ರಾಂತಿ ಅವಧಿಯನ್ನು ನೀಡಲು ಟೀಮ್ ಮ್ಯಾನೇಜ್ಮೆಂಟ್ ನಿರ್ಧರಿಸಿತ್ತು. ತಂಡವು ಅಕ್ಟೋಬರ್ 25ರಂದು ಲಕ್ನೋಗೆ ಪ್ರಯಾಣಿಸುವ ನಿರೀಕ್ಷೆಯಿದೆ. ಈ ಮಧ್ಯೆ, ಬೆಟ್ಟಗಳಲ್ಲಿರುವ ಪಟ್ಟಣದ ರಮಣೀಯ ಸೌಂದರ್ಯವನ್ನು ಆನಂದಿಸಲು ಆಟಗಾರರಿಗೆ ಅವಕಾಶ ನೀಡಲಾಗಿದೆ. ಆದರೆ ಯಾರೂ ಅಪಾಯಕಾರಿ ಸಾಹಸಗಳನ್ನು ಮಾಡಬಾರದು ಎಂದು ಹೇಳಿದೆ.
“ಆಟಗಾರರು ಟ್ರೆಕಿಂಗ್ ಹೋಗಲು ಸಾಧ್ಯವಿಲ್ಲ, ಹೊರಗೆ ಹೋಗಬಹುದು ಎಂದು ತಂಡದ ಮ್ಯಾನೇಜ್ಮೆಂಟ್ ಆಟಗಾರರಿಗೆ ತಿಳಿಸಿದೆ. ಅದೇ ಸಮಯದಲ್ಲಿ ಸರಣಿಯ ಸಮಯದಲ್ಲಿ ಯಾವುದೇ ಭಾರತೀಯ ಆಟಗಾರನು ಪ್ಯಾರಾಗ್ಲೈಡಿಂಗ್ ಮಾಡಬಾರದು ಎಂದು ಹೇಳಿದೆ. ಏಕೆಂದರೆ ಅದು ಆಟಗಾರರ ಒಪ್ಪಂದಕ್ಕೆ ವಿರುದ್ಧವಾಗಿದೆ “ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ : ICC World Cup 2023 : ಟಿಬೆಟಿಯನ್ ಧರ್ಮಗುರುವಿನ ಆಶೀರ್ವಾದ ಪಡೆದ ನ್ಯೂಜಿಲ್ಯಾಂಡ್ ಕ್ರಿಕೆಟಿಗರು
ಚಾರಣದಲ್ಲಿ ತೊಡಗಿರುವ ಮಂದಿಗೆ ಮತ್ತು ಪ್ರವಾಸಿಗರಿಗೆ ಧರ್ಮಶಾಲಾ ಒಂದು ಹಾಟ್ ಸ್ಪಾಟ್ ಆಗಿದೆ. ಆಟಗಾರರು ಸಹ ಉತ್ಸುಕರಾಗಿದ್ದರು ಮತ್ತು ಚಾರಣ ಮಾಡಲು ಬಯಸಿದ್ದರು. ಆದಾಗ್ಯೂ, ಮ್ಯಾನೇಜ್ಮೆಂಟ್ ಯಾವುದೇ ಆಟಗಾರನನ್ನು ಟ್ರೆಕ್ಕಿಂಗ್ ಮಾಡುವುದಕ್ಕೆ ಅವಕಾಶ ನೀಡಿಲ್ಲ. ವಿಶೇಷವಾಗಿ ವಿಶ್ವಕಪ್ ಸಮಯದಲ್ಲಿ ಟ್ರೆಕಿಂಗ್ ಹೋಗಿ ಗಾಯಗೊಂಡರೆ ಆಗುವ ಸಮಸ್ಯೆಯನ್ನು ಮನಗಂಡು ಅವಕಾಶ ನಿಷೇಧಿಸಲಾಗಿದೆ.
ದೊಡ್ಡ ಪಂದ್ಯಾವಳಿ ನಡೆಯುತ್ತಿರುವುದರಿಂದ, ಯಾವುದೇ ಆಟಗಾರ ಗಾಯಗೊಳ್ಳಲು ಮಂಡಳಿ ಮತ್ತು ಮ್ಯಾನೇಜ್ಮೆಂಟ್ ಸ್ವಲ್ಪವೂ ಅಪಾಯವನ್ನು ತೆಗೆದುಕೊಳ್ಳಲು ಸಿದ್ಧರಿಲ್ಲ. ಟ್ರೆಕ್ಕಿಂಗ್ ಮಾಡದಿರಲು ಆಟಗಾರರ ಸುರಕ್ಷತೆಯೂ ಒಂದು ದೊಡ್ಡ ಅಂಶವಾಗಿದೆ ಎಂದು ಹೇಳಲಾಗಿದೆ.
ಆಶ್ರಮಕ್ಕೆ ತೆರಳಿದ ವಿರಾಟ್ ಕೊಹ್ಲಿ
ಪ್ರಸ್ತುತ ನಡೆಯುತ್ತಿರುವ ಏಕದಿನ ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ಅದ್ಭುತ ಫಾರ್ಮ್ನಲ್ಲಿದೆ. ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ಪ್ರಸ್ತುತ ಟೂರ್ನಿಯಲ್ಲಿ ಅಜೇಯವಾಗಿದ್ದು, ಐದು ಪಂದ್ಯಗಳನ್ನು ಆಡಿದೆ ಮತ್ತು ಪ್ರತಿ ಪಂದ್ಯವನ್ನು ಗೆದ್ದಿದೆ. ಹೀಗಾಗಿ ಅಂಕಪಟ್ಟಿಯಲ್ಲಿ ಒಟ್ಟು 10 ಅಂಕಗಳೊಂದಿಗೆ ಅಗ್ರಸ್ಥಾನವನ್ನು ಅಲಂಕರಿಸಿದೆ.
ಇತ್ತೀಚೆಗೆ, ಧರ್ಮಶಾಲಾದ ಎಚ್ಪಿಸಿಎ ಕ್ರೀಡಾಂಗಣದಲ್ಲಿ ನಡೆದ 2023 ರ ವಿಶ್ವಕಪ್ನ 21 ನೇ ಪಂದ್ಯದಲ್ಲಿ ಭಾರತ ತಂಡವು ಟಾಮ್ ಲಾಥಮ್ ನೇತೃತ್ವದ ನ್ಯೂಜಿಲೆಂಡ್ ತಂಡವನ್ನು ಎದುರಿಸಿತು. ಅದ್ಭುತ ಪ್ರದರ್ಶನದ ನಂತರ ಮೆನ್ ಇನ್ ಬ್ಲೂ ಬ್ಲ್ಯಾಕ್ ಕ್ಯಾಪ್ಸ್ ತಂಡವನ್ನು ಮಣಿಸಿತು. ಈ ಮೂಲಕ ವಿಶ್ವ ಕಪನ್ ಗೆಲುವಿನ ಓಟವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ 95 ರನ್ ಬಾರಿಸುವ ಮೂಲಕ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.