ಲಂಡನ್: ಖ್ಯಾತ ಫುಟ್ಬಾಲಿಗ ಕ್ರಿಸ್ಟಿಯಾನೊ ರೊನಾಲ್ಡೊ ತಂಡ ತೊರೆದ ಕೆಲವೇ ಗಂಟೆಗಳಲ್ಲಿ ಮ್ಯಾಂಚೆಸ್ಟರ್ ಯುನೈಟೆಡ್(Manchester United) ಫುಟ್ಬಾಲ್ ಕ್ಲಬ್ ಮಾರಾಟಕ್ಕೆ ಇಡಲಾಗಿದೆ. ಈ ಕುರಿತು ಸತಃ ಅಮೆರಿಕ ಮೂಲದ ಮಾಲೀಕರು ಮಾಹಿತಿ ನೀಡಿದ್ದಾರೆ. ಇದರೊಂದಿಗೆ ಮ್ಯಾಂಚೆಸ್ಟರ್ ಯುನೈಟೆಡ್ ಮಾಲೀಕರಾಗಿರುವ ಅಮೆರಿಕದ ಗ್ಲೇಜರ್ ಕುಟುಂಬದ 17 ವರ್ಷಗಳ ಅಧಿಪತ್ಯಕ್ಕೆ ತೆರೆ ಬೀಳುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಬುಧವಾರ ಪೋರ್ಚುಗಲ್ ಫುಟ್ಬಾಲ್ ಆಟಗಾರ ರೊನಾಲ್ಡೊ ಅವರು ಮ್ಯಾಂಚೆಸ್ಟರ್ ಯುನೈಟೆಡ್ ಕ್ಲಬ್ಗೆ ಗುಡ್ಬೈ ಹೇಳಿದ್ದರು. ಇದರ ಬೆನ್ನಲ್ಲೇ ಮ್ಯಾಂಚೆಸ್ಟರ್ ಯುನೈಟೆಡ್ ಮಾರಾಟಕ್ಕಿರುವ ವಿಚಾರ ಬೆಳಕಿಗೆ ಬಂದಿದೆ. ಹೊಸ ಹೂಡಿಕೆ, ಮಾರಾಟ ಅಥವಾ ಇತರೆ ವಹಿವಾಟು ಸೇರಿದಂತೆ ಎಲ್ಲ ರೀತಿಯ ಪರ್ಯಾಯ ಕಾರ್ಯತಂತ್ರವನ್ನು ಕ್ಲಬ್ ಪರಿಗಣಿಸುತ್ತದೆ ಎಂದು ಮ್ಯಾಂಚೆಸ್ಟರ್ ಯುನೈಟೆಡ್ ಪ್ರಕಟಣೆ ತಿಳಿಸಿದೆ.
ಇಂಗ್ಲೆಂಡ್‌ನ ಒಲ್ಡ್ ಟ್ರಾಫರ್ಡ್ನಲ್ಲಿರುವ ಮ್ಯಾಂಚೆಸ್ಟರ್ ಯುನೈಟೆಡ್ ಕ್ಲಬ್ 2005ರಲ್ಲಿ ಅಮೆರಿಕದ ಗ್ಲೇಜರ್ ಕುಟುಂಬ ಸ್ವಾಧೀನಪಡಿಸಿಕೊಂಡಿತ್ತು. ಕ್ಲಬ್‌ನ ಮ್ಯಾನೇಜರ್ ಅಲೆಕ್ಸ್ ಫರ್ಗ್ಯೂಸನ್ ನಿವೃತ್ತಿಯ ಬಳಿಕ ಕಳೆದ ಒಂಬತ್ತು ವರ್ಷಗಳಲ್ಲಿ ತಂಡ ಕಳಪೆ ಪ್ರದರ್ಶನ ತೋರಿತ್ತು. ಈ ಕಾರಣದಿಂದ ತಂಡದ ಆರ್ಥಿಕ ವರಮಾನವೂ ಕುಸಿತ ಕಂಡಿತ್ತು. ಇದೀಗ ಪ್ರತಿಷ್ಠಿತ ಆಟಗಾರ ರೊನಾಲ್ಡೊ ಕೂಡ ತಂಡ ತೊರೆದಿರುವುದರಿಂದ ಮತ್ತಷ್ಟು ಆರ್ಥಿಕ ಕುಸಿತ ಸಂಭವಿಸುವ ಸಾಧ್ಯತೆ ಇದೆ. ಇದರಿಂದ ಕ್ಲಬ್ ಈ ನಿರ್ಧಾರಕ್ಕೆ ಮುಂದಾಗಿದೆ ಎಂದು ವರದಿಯೊಂದು ತಿಳಿಸಿದೆ.
ಇದನ್ನೂ ಓದಿ | FIFA World Cup Qatar 2022 | ಫಿಫಾ ವಿಶ್ವಕಪ್ ಪಂದ್ಯಗಳು ನಡೆಯುವ ಟಾಪ್ 5 ಸ್ಟೇಡಿಯಂ