Site icon Vistara News

Australian Open 2023: ಆಸ್ಟ್ರೇಲಿಯನ್‌ ಓಪನ್‌ ಬ್ಯಾಡ್ಮಿಂಟನ್‌ನಲ್ಲಿ ಅಚ್ಚರಿಯ ಗೆಲುವು ಸಾಧಿಸಿದ ಕನ್ನಡಿಗ ಮಂಜುನಾಥ್

Mithun Manjunath in action during Australian Open 2023

ಸಿಡ್ನಿ: ಇಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯನ್‌ ಓಪನ್‌ ಸೂಪರ್‌-500 ಬ್ಯಾಡ್ಮಿಂಟನ್‌(Australian Open 2023 Badminton) ಪಂದ್ಯಾವಳಿಯಲ್ಲಿ ಕನ್ನಡಿಗ ಮಿಥುನ್ ಮಂಜುನಾಥ್(Mithun Manjunath) ಅಚ್ಚರಿಯ ಗೆಲುವೊಂದನ್ನು ದಾಖಲಿಸಿದ್ದಾರೆ. ಟೂರ್ನಿಯ 4ನೇ ಹಾಗೂ ವಿಶ್ವದ 7ನೇ ಶ್ರೇಯಾಂಕದ ಕೀನ್ ಯೀವ್ ಲೊಹ್‌ರನ್ನು ಮೊದಲ ಸುತ್ತಿನಲ್ಲಿ ಸೋಲಿಸಿ ದ್ವಿತೀಯ ಸುತ್ತು ಪ್ರವೇಶಿಸಿದ್ದಾರೆ. ಇವರ ಜತೆಗೆ ಸಿಂಧು(pv sindhu), ಲಕ್ಷ್ಯಸೇನ್​ ಮತ್ತು ಕಿಡಂಬಿ ಶ್ರೀಕಾಂತ್ ಕೂಡ ಶುಭಾರಂಭ ಕಂಡಿದ್ದಾರೆ.

ಬುಧವಾರ ನಡೆದ ಪುರುಷರ ಸಿಂಗಲ್ಸ್​ನ ಮೊದಲ ಸುತ್ತಿನ ಪಂದ್ಯದಲ್ಲಿ ವಿಶ್ವ ಶ್ರೇಯಾಂಕದಲ್ಲಿ 50ನೇ ಸ್ಥಾನದಲ್ಲಿರುವ ಕನ್ನಡಿಗ ಮಿಥುನ್ ಮಂಜುನಾಥ್​ ಯಾರು ಊಹಿಸದ ರೀತಿಯಲ್ಲಿ ಶ್ರೇಷ್ಠ ಪ್ರದರ್ಶನ ತೋರುವ ಮೂಲಕ ಗೆಲುವಿನ ನಗೆ ಬೀರಿದ್ದಾರೆ. ಸಿಂಗಾಪುರದ ಕೀವ್ ಯೀವ್‌ ಅವರನ್ನು 21-19, 21-19 ನೇರ ಗೇಮ್‌ಗಳಿಂದ ಮಣಿಸಿ ಅಧಿಕಾರಯುತ ಗೆಲುವು ಸಾಧಿಸಿದ್ದಾರೆ. ಅನಾನುಭವಿಯಾಗಿದ್ದರೂ ಅವರ ಆಟ ಅತ್ಯಂತ ಶ್ರೇಷ್ಠ ಮಟ್ಟದಿಂದ ಕೂಡಿತ್ತು. ಅದರಲ್ಲೂ ವಿಶ್ವದ 7ನೇ ಶ್ರೇಯಾಂಕಿತನಿಗೆ ಸೋಲುಣಿಸುವುದೆಂದರೆ ಸಾಮಾನ್ಯದ ಮಾತಲ್ಲ. 40 ನಿಮಿಷಗಳಲ್ಲಿ ಉಭಯ ಆಟಗಾರರ ಹೋರಾಟ ಅಂತ್ಯ. ಕಂಡಿತು.

ದಿನದ ಮತ್ತೊಂದು ಪುರುಷರ ಸಿಂಗಲ್ಸ್​ನಲ್ಲಿ ಕಿಡಂಬಿ ಶ್ರೀಕಾಂತ್ ಜಪಾನಿನ ಬಲಿಷ್ಠ ಆಟಗಾರ ಕೆಂಟಾ ನಿಶಿಮೊಟೊ ಅವರನ್ನು 21-18, 21-7 ಅಂತರದಿಂದ ಮಣಿಸಿ ಪ್ರಾಬಲ್ಯ ಮೆರೆದರು. ಮಹಿಳಾ ಸಿಂಗಲ್ಸ್​ನಲ್ಲಿ ಈ ಋತುವಿನಲ್ಲಿ ಹಲವು ಟೂರ್ನಿಗಳಲ್ಲಿ ಕಳಪೆ ಪ್ರದರ್ಶನ ತೋರಿದ 5ನೇ ಶ್ರೇಯಾಂಕದ ಸಿಂಧು ಭಾರತದವರೇ ಆದ ಅಶ್ಮಿತಾ ಚಲಿಹಾ ವಿರುದ್ಧ 21-18, 21-13 ಗೇಮ್‌ಗಳ ಅಂತರದಿಂದ ಜಯ ಸಾಧಿಸಿದರು. ಈ ಪಂದ್ಯ ಕೇವಲ 36 ನಿಮಿಷಗಳಿಗೆ ಅಂತ್ಯ ಕಂಡಿತು.

ಇದನ್ನೂ ಓದಿ Japan Open 2023; ಸೆಮಿಫೈನಲ್​ನಲ್ಲಿ ಎಡವಿದ ಲಕ್ಷ್ಯ ಸೇನ್‌

ಎಚ್.ಎಸ್. ಪ್ರಣಯ್ ಹಾಂಕಾಂಗ್‌ನ ಚೆವುಕ್ ಯೀವ್ ಲೀ ವಿರುದ್ಧ ಕಠಿಣ ಹೋರಾಟ ನಡೆಸಿ 21-18, 16-21,21-15 ಗೇಮ್‌ಗಳ ಅಂತರದಿಂದ ಜಯ ಸಾಧಿಸಿದರು. ಮುಂದಿನ ಸುತ್ತಿನಲ್ಲಿ ಚೈನೀಸ್ ತೈಪೆಯ ಯು ಜೆನ್ ಚಿ ಅವರನ್ನು ಎದುರಿಸಲಿದ್ದಾರೆ. ಲಕ್ಷ್ಯ ಸೇನ್ ಅವರು ತನ್ನದೇ ದೇಶದ ಕಿರಣ್ ಜಾರ್ಜ್ ಗಾಯಗೊಂಡು ಹಿಂದೆ ಸರಿದ ಕಾರಣ ಗೆಲುವು ಸಾಧಿಸಿದರು. ಪ್ರಿಯಾಂಶು ರಾಜಾವತ್ ಕೂಡ ಗೆಲುವು ಸಾಧಿಸಿ ಮುಂದಿನ ಹಂತಕ್ಕೇರಿದ್ದಾರೆ.

Exit mobile version