ಕೋಲ್ಕತ್ತಾ: 5 ದಿನಗಳ ಹಿಂದೆ ಎಲ್ಲ ಮಾದರಿಯ ಕ್ರಿಕೆಟ್ಗೆ ವಿದಾಯ ಹೇಳಿದ್ದ ಟೀಮ್ ಇಂಡಿಯಾದ ಆಟಗಾರ ಮನೋಜ್ ತಿವಾರಿ(Manoj Tiwary) ಇದೀಗ ತಮ್ಮ ನಿವೃತ್ತಿಯಿಂದ ಹಿಂದೆಸರಿಯಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ. ನಿವೃತ್ತಿ ವಾಪಸ್ ಪಡೆದು ತಕ್ಷಣ ಜಾರಿಗೆ ಬರುವಂತೆ ಬಂಗಾಳ ಪರ ಪ್ರಥಮ ದರ್ಜೆ(first-class cricket for Bengal) ಆಡಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ.
ಬಂಗಾಳದ ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಮನೋಜ್ ತಿವಾರಿ ಅವರು ಕ್ರಿಕೆಟ್ ಅಸೋಸಿಯೇಷನ್ ಆಫ್ ಬೆಂಗಾಲ್ (ಸಿಎಬಿ) ಅಧ್ಯಕ್ಷ ಸ್ನೇಹಾಶಿಶ್ ಗಂಗೂಲಿ ಅವರನ್ನು ಭೇಟಿಯಾದ ಬಳಿಕ ನಿವೃತ್ತಿ ನಿರ್ಧಾರವನ್ನು ಬದಲಿಸಲು ಮನಸ್ಸು ಮಾಡಿದ್ದಾರೆ ಎಂದು ತಿಳಿಸಿವೆ. ಆದರೆ ಮನೋಜ್ ತಿವಾರಿ ಅವರು ತಮ್ಮ ನಿವೃತ್ತಿ ವಾಪಸ್ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಪ್ರಕಟಿಸಿಲ್ಲ.
ನಿವೃತ್ತಿಯಿಂದ ತಂಡಕ್ಕೆ ಹಿನ್ನಡೆ
ಅನುಭವಿ ಕ್ರಿಕೆಟಿಗನ ನಿರ್ಗಮನದಿಂದ ಬಂಗಾಳ ತಂಡದ ಮಧ್ಯಮ ಕ್ರಮಾಂಕದಲ್ಲಿ ದೊಡ್ಡ ಹೊಡೆತ ಬೀಳಲಿದೆ. ತಿವಾರಿ ನಾಯಕತ್ವದಲ್ಲಿ ಕಳೆದ ವರ್ಷ ರಣಜಿ ಟ್ರೋಫಿಯಲ್ಲಿ ಬೆಂಗಾಳ ತಂಡ ಫೈನಲ್ ತಲುಪಿತ್ತು ಅವರ ವಾಪಸಾತಿ ತಂಡಕ್ಕೆ ದೊಡ್ಡ ರಿಲೀಫ್ ಆಗಲಿದೆ ಎಂದು ಸ್ನೇಹಾಶಿಶ್ ಗಂಗೂಲಿ ಹೇಳಿರುವುದಾಗಿ ಮಾಧ್ಯಮಗಳು ವರದಿ ಮಾಡಿದೆ.
ಆಗಸ್ಟ್ 3ಕ್ಕೆ ನಿವೃತ್ತಿ ಹೇಳಿದ್ದ ತಿವಾರಿ
ಆಗಸ್ಟ್ 3 ಗುರುವಾರದಂದು ಮನೋಜ್ ತಿವಾರಿ ಅವರು ಟ್ವಿಟರ್ನಲ್ಲಿ ‘ಧನ್ಯವಾದಗಳು’ ಎಂದು ಪೋಸ್ಟ್ ಮಾಡುವ ಮೂಲಕ ತಮ್ಮ ಕ್ರಿಕೆಟ್ ವಿದಾಯವನ್ನು ಘೋಷಿಸಿದ್ದರು. “ತಮ್ಮ ವೃತ್ತಿಜೀವನದಲ್ಲಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳು. ಈ ಆಟ ನನಗೆ ಎಲ್ಲವನ್ನೂ ನೀಡಿದೆ, ನಾನು ಕನಸು ಕಾಣದ ಪ್ರತಿಯೊಂದು ವಿಷಯವನ್ನೂ ಈ ಆಟದ ಮೂಲಕ ಅರ್ಥೈಸಿಕೊಂಡಿದ್ದೇನೆ. ನನ್ನ ಕ್ರಿಕೆಟ್ ಜೀವನದ ಹಾಗೆ ಯಾವ ಕ್ರಿಕೆಟಿಗನು ಏರಿಳಿತಗಳನ್ನು ಕಂಡರಲು ಸಾಧ್ಯವಿಲ್ಲ” ಎಂದು ಹೇಳಿ ಕ್ರಿಕೆಟ್ಗೆ ಗುಡ್ ಬೈ ಹೇಳಿದ್ದರು. ಇದೀಗ ತಮ್ಮ ನಿವೃತ್ತಿ ನಿರ್ಧಾರವನ್ನು ಬದಲಿಸಲು ಮುಂದಾಗಿದ್ದಾರೆ.
ಬಂಗಾಳದ ಕ್ರೀಡಾ ಸಚಿವ
ಕ್ರಿಕೆಟ್ ಜತೆಗೆ ರಾಜಕೀಯದಲ್ಲೂ ಸಿಕ್ರಿಯವಾಗಿದ್ದ ಮನೋಜ್ ತಿವಾರಿ(Minister of State for Youth Services and Sports of West Bengal) ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ(mamata banerjee) ಅವರ ಸರ್ಕಾರದಲ್ಲಿ ಕ್ರೀಡಾ ಸಚಿವರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ತೋರುವ ಯುವ ಜನತೆಗೆ ಅನೇಕ ಯೋಜನೆಗಳನ್ನು ಕೂಡ ಅವರು ಜಾರಿಗೆ ತಂದಿದ್ದಾರೆ.
🚨 BREAKING: Manoj Tiwary is all set to take his retirement back and resume cricket for Bengal. @tiwarymanoj pic.twitter.com/BExb6uIom1
— RevSportz (@RevSportz) August 8, 2023
ಪ್ರಥಮ ದರ್ಜೆಯಲ್ಲಿ ಶ್ರೇಷ್ಠ ಸಾಧನೆ
2004ರಲ್ಲಿ ಪ್ರಥಮ ದರ್ಜೆಗೆ ಪದಾರ್ಪಣೆ ಮಾಡಿದ ಮನೋಜ್ ತಿವಾರಿ ಅವರು 141 ಪಂದ್ಯಗಳಲ್ಲಿ 48.56 ಸರಾಸರಿಯಲ್ಲಿ 29 ಶತಕಗಳು ಮತ್ತು 45 ಅರ್ಧಶತಕಗಳೊಂದಿಗೆ 9908 ರನ್ ಗಳಿಸಿದ್ದಾರೆ. 10,000 ರನ್ ಗಡಿ ತಲುಪಲು ಕೇವಲ 92 ರನ್‌ಗಳ ಅಂತರದಲ್ಲಿದ್ದಾರೆ. ಆಕ್ರಮಣಕಾರಿ ಆಟಕ್ಕೆ ಹೆಸರುವಾಸಿಯಾಗಿರುವ ಅವರು 2006-07 ರ ರಣಜಿ ಟ್ರೋಫಿಯಲ್ಲಿ 99.50 ರ ಸರಾಸರಿಯಲ್ಲಿ 796 ರನ್ ಗಳಿಸಿ ಮಿಂಚಿದ್ದರು. ಅವರ ಈ ಪ್ರದರ್ಶನ ಕಂಡು ಭಾರತ ತಂಡದಲ್ಲಿ ಅವಕಾಶ ನೀಡಲಾಗಿತ್ತು. ಆದರೆ ಭಾರತ ತಂಡದಲ್ಲಿ ಅವರಿಗೆ ಸರಿಯಾದ ಅವಕಾಶ ಲಭಿಸಿದೆ ಈ ಪ್ರತಿಭೆ ಬೆಳಕಿಗೆ ಬಾರದೆ ಹೋದದ್ದು ವಿಪರ್ಯಾಸ.
ಇದನ್ನೂ ಓದಿ Manoj Tiwary: ಎಲ್ಲ ಮಾದರಿಯ ಕ್ರಿಕೆಟ್ಗೆ ವಿದಾಯ ಹೇಳಿದ ಪಶ್ಚಿಮ ಬಂಗಾಳ ಕ್ರೀಡಾ ಸಚಿವ
ಭಾರತಕ್ಕೆ ಸ್ಮರಣೀಯ ಗೆಲುವು ತಂದುಕೊಟ್ಟಿದ್ದ ತಿವಾರಿ
2008ರಲ್ಲಿ ಟೀಮ್ ಇಂಡಿಯಾ ಏಕದಿನ ತಂಡಕ್ಕೆ ಪದಾರ್ಪಣೆ ಮಾಡಿದ ಮನೋಜ್ ತಿವಾರಿ, ಒಂದು ಪಂದ್ಯದಲ್ಲಿ ಶತಕ ಸಿಡಿಸಿ, ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರೂ, ಮುಂದಿನ ಪಂದ್ಯದಲ್ಲೇ ತಂಡದಿಂದ ಹೊರಬಿದ್ದರು. 2011ರ ಚೆನ್ನೈ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಮ್ಯಾಚ್ ವಿನ್ನಿಂಗ್ ಶತಕ ಬಾರಿಸಿದ್ದರು. ಪಂದ್ಯವನ್ನು ಗೆಲ್ಲಿಸಿದ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿಯೂ ಲಭಿಸಿತ್ತು. ಆದರೆ ಮುಂದಿನ ಪಂದ್ಯದಲ್ಲಿ ಪ್ಲೇಯಿಂಗ್ ಇಲೆವೆನ್ನಲ್ಲಿ ತಿವಾರಿ ಇರಲಿಲ್ಲ. ಬಳಿಕ ಅವರಿಗೆ ಅವಕಾಶ ಸಿಕ್ಕಿದ್ದು 14 ಪಂದ್ಯಗಳ ನಂತರ.
15 ವರ್ಷಗಳ ಕ್ರಿಕೆಟ್ನಲ್ಲಿ ಆಡಿದ್ದು ಕೇವಲ 12 ಪಂದ್ಯ
15 ವರ್ಷದ ಟೀಮ್ ಇಂಡಿಯಾ ಜರ್ನಿಯಲ್ಲಿ ತಿವಾರಿ ಆಡಿದ್ದು ಕೇವಲ 12 ಏಕದಿನ ಪಂದ್ಯಗಳನ್ನು ಮಾತ್ರ. ಇದರಲ್ಲಿ ತಲಾ ಒಂದು ಶತಕ ಮತ್ತು ಅರ್ಧಶಕ ಒಳಗೊಂಡಿದೆ. ಬೌಲಿಂಗ್ನಲ್ಲಿಯೂ ಮಿಂಚಿದ್ದ ಅವರು 5 ವಿಕೆಟ್ ಉರುಳಿಸಿದ್ದಾರೆ. ಮೂರು ಟಿ20 ಪಂದ್ಯಗಳನ್ನು ಆಡಿದ್ದಾರೆ. 98 ಐಪಿಎಲ್ ಪಂದ್ಯ ಆಡಿ 1695 ರನ್ ಕಲೆಹಾಕಿದ್ದಾರೆ.