ಪ್ಯಾರಿಸ್ ಒಲಿಂಪಿಕ್ಸ್ನ(Paris Olympics) ಶೂಟಿಂಗ್ ವಿಭಾಗದಲ್ಲಿ ಅವಳಿ ಕಂಚಿನ ಪದಕ ಗೆದ್ದ ಮನು ಭಾಕರ್(Manu Bhaker) ಅವರ ಜಾಹೀರಾತು ಮೌಲ್ಯದಲ್ಲಿ ಇದೀಗ ಭಾರೀ ಏರಿಕೆ ಕಂಡಿದೆ. ಅಲ್ಲದೆ 40ಕ್ಕೂ ಹೆಚ್ಚು ಬ್ರಾಂಡ್‌ಗಳು ಮನು ಅವರನ್ನು ತಮ್ಮ ಕಂಪನಿಗೆ ರಾಯಭಾರಿಯಾಗಿ ಬಳಸಿಕೊಳ್ಳಲು ತೀವ್ರ ಪೈಪೋಟಿಗೆ ಬಿದ್ದಿದೆ ಎಂದು ವರದಿಯಾಗಿದೆ.
ಒಲಿಂಪಿಕ್ಸ್ ಪದಕ ಗೆಲ್ಲುವ ಮೊದಲು ಮನು ಪ್ರತಿ ಒಪ್ಪಂದವನ್ನು 20-25 ಲಕ್ಷ ರೂ.ಗೆ ಮಾಡಿಕೊಳ್ಳುತ್ತಿದ್ದರು. ಆದರೆ, ಈಗ ಈ ಶುಲ್ಕವು ಆರರಿಂದ ಏಳು ಪಟ್ಟು ಹೆಚ್ಚಾಗಿದ್ದು, ಒಂದು ಒಪ್ಪಂದವು ಸುಮಾರು 1.5 ಕೋಟಿ ರೂ. ಎಂದು ಹೇಳಲಾಗುತ್ತಿದೆ. ಸದ್ಯ ಮನು ಪಾಮ್ಯಾಕ್ಸ್ ಆಕ್ಟಿವ್ವೇರ್ಗೆ ಮಾತ್ರ ಪ್ರಚಾರ ರಾಯಭಾರಿಯಾಗಿದ್ದಾರೆ.
12 ಕಂಪನಿಗಳ ವಿರುದ್ಧ ಕಾನೂನು ಕ್ರಮ
ಕೆಲವು ದಿನಗಳ ಹಿಂದಷ್ಟೇ ಮನು ಭಾಕರ್ ಅವರು 12 ಕಂಪನಿಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲು ಮುಂದಾಗಿದ್ದರು. ಪದಕ ಸಾಧನೆಯ ಬಳಿಕ ತನ್ನ ಚಿತ್ರಗಳನ್ನು ಬಳಸಿ, ತನಗೆ ಅಭಿನಂದನೆ ಸಲ್ಲಿಸುವ ಜಾಹೀರಾತುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅನಧಿಕೃತವಾಗಿ ಪ್ರಕಟಿಸಿದ್ದು ಇದಕ್ಕೆ ಕಾರಣ. ಬ್ರ್ಯಾಂಡ್ಗಳು ತನಗೆ ಪ್ರಾಯೋಜಕತ್ವ ನೀಡಿರದಿದ್ದರೂ ಮತ್ತು ತನ್ನನ್ನು ಪ್ರಚಾರ ರಾಯಭಾರಿಯಾಗಿ ನೇಮಿಸಿಕೊಳ್ಳದಿದ್ದರೂ, ಇದೀಗ ತನ್ನ ಯಶಸ್ಸಿನಲ್ಲಿ ಪಾಲು ಪಡೆಯಲು ಮುಂದಾಗುವ ಮೂಲಕ ಉಚಿತ ಮಾರ್ಕೆಟಿಂಗ್ ಮಾಡಿವೆ ಎಂದು ಮನು ಅವರ ವ್ಯವಹಾರಗಳನ್ನು ನೋಡಿಕೊಳ್ಳುವ ತಂಡ ಆರೋಪಿಸಿ ಕಾನೂನು ನೋಟಿಸ್ ಕಳುಹಿಸಲು ಸಿದ್ಧತೆ ನಡೆಸಿದೆ ಎನ್ನಲಾಗಿದೆ. ವ್ಯಕ್ತಿಯೊಬ್ಬರಿಗೆ ಪ್ರಾಯೋಜಕತ್ವ ಒಪ್ಪಂದ ನೀಡದೆ ಅವರ ಚಿತ್ರಗಳ ಹಕ್ಕು ಪಡೆದುಕೊಳ್ಳುವಂತಿಲ್ಲ. ಇದು ಭಾರತದಲ್ಲಿ ಕಾನೂನುಬಾಹಿರ ಎನಿಸಿದೆ.
ಇದನ್ನೂ ಓದಿ Paris Olympics 2024 : ಚಿನ್ನ ಪದಕ ಗೆದ್ದ ಖುಷಿಗೆ ಸಹ ಆಟಗಾರ್ತಿಗೆ ಮದುವೆ ಪ್ರಪೋಸ್ ಮಾಡಿದ ಚೀನಾದ ಷಟ್ಲರ್!
ಹ್ಯಾಟ್ರಿಕ್ ಪದಕ ಜಸ್ಟ್ ಮಿಸ್…
ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ(Paris Olympics) ಹ್ಯಾಟ್ರಿಕ್ ಪದಕ ನಿರೀಕ್ಷೆಯಲ್ಲಿದ್ದ ಮನು ಭಾಕರ್ಗೆ(manu bhaker) ನಿರಾಸೆಯಾಗಿದೆ. ಇಂದು(ಶನಿವಾರ) ನಡೆದ 25 ಮೀ. ಪಿಸ್ತೂಲ್ ಶೂಟಿಂಗ್ ಫೈನಲ್ ಪಂದ್ಯದಲ್ಲಿ ನಾಲ್ಕನೇ ಸ್ಥಾನ ಪಡೆಯುವ ಮೂಲಕ ಅವರು ಐತಿಹಾಸಿಕ ಪದಕ ಗೆಲ್ಲುವ ಅವಕಾಶವೊಂದನ್ನು ಕಳೆದುಕೊಂಡರು. ಪದಕ ಗೆಲ್ಲುತ್ತಿದ್ದರೆ ವೈಯಕ್ತಿಕವಾಗಿ ಒಂದೇ ಆವೃತ್ತಿಯಲ್ಲಿ ಹಾಗೂ ಒಟ್ಟಾರೆಯಾಗಿ 3 ಒಲಿಂಪಿಕ್ಸ್ ಪದಕ ಗೆದ್ದ ಮೊದಲ ಭಾರತೀಯ ಕ್ರೀಡಾಪಟು ಎಂಬ ಐತಿಹಾಸಿಕ ದಾಖಲೆ ಬರೆಯಬಹುದಿತ್ತು.
ಫೈನಲ್ ಹಂತದ ಮೊದಲ ಸುತ್ತಿನಲ್ಲಿ 6 ಅಂಕ ಗಳಿಸಿ 4ನೇ ಸ್ಥಾನಿಯಾದ ಭಾಕರ್ ಆ ಬಳಿಕದ ಸುತ್ತಿನಲ್ಲಿ ಪ್ರಗತಿ ಸಾಧಿಸಿ 2ನೇ ಸ್ಥಾನದೊಂದಿಗೆ ಈ ಸುತ್ತು ಮುಗಿಸಿದರು. 2ನೇ ಸುತ್ತಿನಲ್ಲಿ ಒಮ್ಮೆ 6ನೇ ಸ್ಥಾನಕ್ಕೆ ಕುಸಿದರೂ ಕೂಡ ತಕ್ಷಣ ಎಚ್ಚೆತ್ತುಕೊಂಡು ಮತ್ತೆ ಯಶಸ್ಸು ಸಾಧಿಸಿದರು. ಆದರೆ ಅಂತಿಮ ಹಂತದಲ್ಲಿ 28 ಅಂಕ ಪಡೆದು ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟರು. ಕೊರಿಯಾದ ಯಾಂಗ್ ಜಿನ್ ಚಿನ್ನದ ಪದಕ ಗೆದ್ದರು. ಆತಿಥೇಯ ದೇಶದ ಕ್ಯಾಮಿಲ್ಲೆ ಬೆಳ್ಳಿ, ಹಂಗೇರಿಯ ಕಂಚು ಗೆದ್ದರು.