ನವದೆಹಲಿ: ಒಂದೇ ಒಲಿಂಪಿಕ್ಸ್ ಅಭಿಯಾನದಲ್ಲಿ ಎರಡು ಶೂಟಿಂಗ್ ಪದಕಗಳನ್ನು ಗೆದ್ದ ಏಕೈಕ ಭಾರತೀಯ ಎಂಬ ಇತಿಹಾಸವನ್ನು ಬರೆದಿರುವ ಮನು ಭಾಕರ್(Manu Bhaker) ಅವರು ಕೆಲ ದಿನಗಳ ಹಿಂದೆ ಮುಂದಿನ 3 ತಿಂಗಳು ಶೂಟಿಂಗ್ನಿಂದ ಸಂಪೂರ್ಣ ದೂರ ಉಳಿಯಲಿದ್ದೇನೆ ಎಂದು ಹೇಳಿದ್ದರು. ಆದರೆ, ಅವರ ಈ ವಿಶ್ರಾಂತಿಗೆ ಕಾರಣ ಏನೆಂಬುದು ತಿಳಿಸಿರಲಿಲ್ಲ. ಇದೀಗ ತಮ್ಮ ಈ ರಜೆಯ ಹಿಂದಿರುವ ಕಾರಣವನ್ನು ಸ್ವತಃ ಅವರೇ ರಿವೀಲ್ ಮಾಡಿದ್ದಾರೆ. 3 ತಿಂಗಳ ವಿಶ್ರಾಂತಿಯಿಂದ ಅಕ್ಟೋಬರ್ನಲ್ಲಿ ನವದೆಹಲಿಯಲ್ಲಿ ನಡೆಯಲಿರುವ ಶೂಟಿಂಗ್ ವಿಶ್ವಕಪ್ ಫೈನಲ್ಗೆ ಅಲಭ್ಯರಾಗಲಿದ್ದಾರೆ.
ಹೌದು, ಮುಂದಿನ ಮೂರು ತಿಂಗಳ ಕಾಲ 22 ವರ್ಷದ ಮನು ಭಾಕರ್ ತಮ್ಮ ನೆಚ್ಚಿನ ಭರತನಾಟ್ಯ(Manu Bhaker Bharatnatyam), ಕುದುರೆ ಸವಾರಿ, ವಯೋಲಿನ್ ನುಡಿಸುವುದು, ಮಾರ್ಷಿಯಲ್ ಆರ್ಟ್ಸ್ ಮತ್ತು ಸ್ಕೇಟಿಂಗ್ನಂಥ ಹವ್ಯಾಸಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಈ ವಿವಾರವನ್ನು ಮನು ಸಂದರ್ಶನವೊಂದಲ್ಲಿ ತಿಳಿಸಿದ್ದಾರೆ.
‘ನಾನು ಭರತನಾಟ್ಯವನ್ನು ಕಲಿಯುತ್ತಿರುವೆ. ಅದು ನನಗಿಷ್ಟ. ಫ್ರಾನ್ಸ್ನಲ್ಲಿ ಶೂಟಿಂಗ್ ಅಭ್ಯಾಸದಲ್ಲಿ ತೊಡಗಿಕೊಂಡಿದ್ದಾಗ, ಭರತನಾಟ್ಯ ಕ್ಲಾಸ್ನಲ್ಲಿ ಪಾಲ್ಗೊಳ್ಳಲು ಸಮಯ ಸಿಕ್ಕಿರಲಿಲ್ಲ. ನೃತ್ಯ ಎಂದರೆ ನನಗಿಷ್ಟ. ಇದುವರೆಗೂ ತಮಿಳುನಾಡಿನ ಶಿಕ್ಷಕರೊಬ್ಬರ ಸಹಾಶಯದಿಂದ ಆನ್ಲೈನ್ನಲ್ಲಿಯೇ ಭರತನಾಟ್ಯವನ್ನು ಅಭ್ಯಾಸ ಮಾಡುತ್ತಿದ್ದೆ. ಇದೀಗ ನೇರವಾಗಿ ಹಾಜರಾಗಿ ನೃತ್ಯ ಕಲಿಯುವೆ. ಜತೆಗೆ ವಯೋಲಿನ್ ಕಲಿಕೆ ಮುಂದುವರಿಸುವೆ. ಶೂಟಿಂಗ್ಗೆ ಮುನ್ನ ಕರಾಟೆ ಕಲಿತಿದ್ದೆ. ಮತ್ತೆ ಅದರಲ್ಲಿ ತೊಡಗಿಸಿಕೊಳ್ಳುವೆ’ ಎಂದರು.
ಇದನ್ನೂ ಓದಿ Manu Bhaker-Neeraj Chopra: ನೀರಜ್ ಚೋಪ್ರಾ ಜತೆ ಮದುವೆ ವದಂತಿ; ಸ್ಪಷ್ಟನೆ ನೀಡಿದ ಮನು ಭಾಕರ್ ತಂದೆ
ಕುದುರೆ ಸವಾರಿಯೂ ನನಗಿಷ್ಟ
ಕುದುರೆ ಸವಾರಿ ಕೂಡ ಇಷ್ಟ. ಕೆಲವು ವರ್ಷಗಳಿಂದ ಕುದುರೆ ಸವಾರಿ ಕಲಿಯತ್ತಿರುವೆ. ಜತೆಗೆ ಸ್ಕೇಟಿಂಗ್ ಕೂಟ ಕಲಿಯುತ್ತಿರುವೆ. ಸ್ಕೂಬಾ ಡೈವಿಂಗ್ ಬಗ್ಗೆಯೂ ಆಸಕ್ತಿ ಇದೆ. ಆದರೆ ಇದುವರೆಗೂ ಸ್ಕೂಬಾ ಡೈವಿಂಗ್ ಮಾಡಿಲ್ಲ. ಇದನ್ನೂ ಕೂಡ ಶೀಘ್ರದಲ್ಲೇ ಮಾಡುವೆ ಎಂದು ಎಂದು ಮನು ಭಾಕರ್ ಸುದ್ದಿಸಂಸ್ಥೆ ಜತೆಗಿನ ಸಂದರ್ಶನದಲ್ಲಿ ಹೇಳಿದ್ದಾರೆ. ಕೆಲ ದಿನಗಳ ಹಿಂದೆ ಮನು ಭಾಕರ್ ಅವರು ಸ್ವಿಮ್ಮಿಂಗ್ ಪೂಲ್ ಬಳಿ ಕುಳಿತು ವಯೋಲಿನ್ ಮೂಲಕ ರಾಷ್ಟ್ರಗೀತೆ ಜನ ಗಣ ಮನವನ್ನು ಬಹಳ ಇಂಪಾಗಿ ನುಡಿಸಿದ್ದ ವಿಡಿಯೊ ವೈರಲ್ ಆಗಿತ್ತು.
ಪ್ಯಾರಿಸ್ನಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಮೊದಲ ಮಹಿಳಾ ಶೂಟರ್ ಎಂಬ ಹೆಗ್ಗಳಿಕೆಗೆ ಮನು ಭಾಕರ್ ಪಾತ್ರರಾಗಿದ್ದರು. ಜತೆಗೆ 12 ವರ್ಷಗಳ ಬಳಿಕ ಒಲಿಂಪಿಕ್ ಶೂಟಿಂಗ್ನಲ್ಲಿ ದೇಶಕ್ಕೆ ಪದಕ ಗೆದ್ದ ಸಾಧನೆ ಮಾಡಿದ್ದರು.
ಭಾಕರ್(Manu Bhaker) ಅವರ ಜಾಹೀರಾತು ಮೌಲ್ಯದಲ್ಲಿ ಇದೀಗ ಭಾರೀ ಏರಿಕೆ ಕಂಡಿದೆ. ಮನು ಅವರ ಬ್ರ್ಯಾಂಡ್ ಮೌಲ್ಯ ಈಗ 1.5 ರೂ. ಆಗಿದೆ. ಅವರು ಪ್ರತಿ ಡಿಜಿಟಲ್ ಜಾಹೀರಾತಿಗೂ 30 ಲಕ್ಷ ರೂ. ಸಂಭಾವನೆ ಪಡೆಯಲಿದ್ದಾರೆ ಎನ್ನಲಾಗಿದೆ.
ಪ್ರಮುಖವಾಗಿ ತಂಪು ಪಾನೀಯ, ಸ್ಕಿನ್ ಕೇರ್, ನ್ಯೂಟ್ರೀಷಿಯನ್ ಕಂಪನಿಗಳು ಮನು ಅವರನ್ನು ಸಂಪರ್ಕಿಸಿವೆ ಎಂದು ತಿಳಿದುಬಂದಿದೆ. ಕೆಲ ದಿನಗಳ ಹಿಂದೆ 40 ಕಂಪನಿಗಳು(40 brands chasing Manu Bhaker) ಮನು ಅವರನ್ನು ಸಂಪರ್ಕಿಸಿದ್ದವು ಎಂದು ವರದಿಯಾಗಿತ್ತು. ಭಾರತ ತಂಡದ ಸ್ಟಾರ್ ಕ್ರಿಕೆಟಿಗರು ಜಾಹೀರಾತು ಒಪ್ಪಂದಗಳಿಗೆ ವಾರ್ಷಿಕ 3 ರಿಂದ 6 ಕೋಟಿ ರೂ. ಪಡೆಯುತ್ತಾರೆ. ಬ್ಯಾಡ್ಮಿಂಟನ್ ಆಟಗಾರ್ತಿ ಪಿ,ವಿ ಸಿಂಧು 2022ರಲ್ಲಿ 2.21 ಕೋಟಿ ರೂ. ಮೊತ್ತದ ಒಪ್ಪಂದ ಪಡೆದಿದ್ದೇ ಭಾರತದಲ್ಲಿ ಕ್ರಿಕೆಟಿಗರ ಹೊರತಾಗಿ ಇತರ ಕ್ರೀಡಾಪಟುಗಳು ಪಡೆದ ಇದುವರೆಗಿನ ಗರಿಷ್ಠ ಮೊತ್ತವಾಗಿದೆ. ಒಲಿಂಪಿಕ್ಸ್ ಪದಕ ಗೆಲ್ಲುವ ಮೊದಲು ಮನು ಪ್ರತಿ ಒಪ್ಪಂದವನ್ನು 20-25 ಲಕ್ಷ ರೂ.ಗೆ ಮಾಡಿಕೊಳ್ಳುತ್ತಿದ್ದರು. ಸದ್ಯ ಮನು ಪಾಮ್ಯಾಕ್ಸ್ ಆಕ್ಟಿವ್ವೇರ್ಗೆ ಮಾತ್ರ ಪ್ರಚಾರ ರಾಯಭಾರಿಯಾಗಿದ್ದಾರೆ.