Site icon Vistara News

Ashes 2023 : ಮೊದಲ ದಿನ 13 ವಿಕೆಟ್​ ಪತನ; 195 ರನ್ ಹಿನ್ನೆಡೆಯಲ್ಲಿ ಇಂಗ್ಲೆಂಡ್​ ತಂಡ

Mark Wood

ಲೀಡ್ಸ್​: ಆ್ಯಶಸ್​ ಸರಣಿಯ ಮೂರನೇ ಪಂದ್ಯ ಲೀಡ್ಸ್​ ನ ಹೆಡಿಂಗ್ಲೆ ಕ್ರಿಕೆಟ್​ ಕ್ರೀಡಾಂಗಣದಲ್ಲಿ ಗುರುವಾರ ಆರಂಭವಾಗಿದ್ದು ಮೊದಲ ದಿನ 13 ವಿಕೆಟ್​ಗಳು ಪತನಗೊಂಡಿವೆ. ಟಾಸ್​ ಸೋತ ಆಸ್ಟ್ರೇಲಿಯಾ ತಂಡ ಮೊದಲು ಬ್ಯಾಟ್​ ಮಾಡಲು ಅಹ್ವಾನ ಪಡೆಯಿತು. ಮಿಚೆಲ್ ಮಾರ್ಷ್​ (118) ಅವರ ಶತಕದ ಹೊರತಾಗಿಯೂ 263 ರನ್​ಗಳಿಗೆ ಆಲ್ಔಟ್​ ಆಯಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಇಂಗ್ಲೆಂಡ್​ ದಿನದಾಟ ಅಂತ್ಯಗೊಂಡಾಗ 3 ವಿಕೆಟ್​ ನಷ್ಟಕ್ಕೆ 68 ರನ್​ ಬಾರಿಸಿದೆ. ಆತಿಥೇಯ ಇಂಗ್ಲೆಂಡ್​ ತಂಡ 195 ರನ್​ಗಳ ಹಿನ್ನಡೆಯಲ್ಲಿದೆ.

ಟಾಸ್​ ಸೋತು ಬ್ಯಾಟ್​ ಮಾಡಲು ಆರಂಭಿಸಿದ ಆಸ್ಟ್ರೇಲಿಯಾ ತಂಡ ಡೇವಿಡ್​ ವಾರ್ನರ್​ (4 ರನ್​) ವಿಕೆಟ್​ ಬೇಗನೆ ಕಳೆದುಕೊಳ್ಳುವ ಮೂಲಕ ಆರಂಭಿಕ ಹಿನ್ನಡೆಗೆ ಒಳಗಾಯಿತು. ಉಸ್ಮಾನ್​ ಖ್ವಾಜಾ 13 ರನ್​ಗಳಿಗೆ ಔಟಾದರೆ, ಮರ್ನಸ್​ ಲಾಬುಶೇನ್​ 21 ರನ್​ ಬಾರಿಸಿ ಔಟಾದರು. ಬಳಿಕ ಸ್ಟೀವ್​ ಸ್ಮಿತ್​ (22) ಹಾಗೂ ಟ್ರಾವಿಡ್​ ಹೆಡ್​ (39) ಸ್ವಲ್ಪ ಹೊತ್ತು ರನ್​ ಪೇರಿಸಿದರು.

ಮಾರ್ಷ್​ ಶತಕ:

ಒಂದು ಬದಿಯಲ್ಲಿ ವಿಕೆಟ್​ಗಳು ಉರುಳುತ್ತಿದ್ದರೂ ಮತ್ತೊಂದು ತುದಿಯಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ಆಸ್ಟ್ರೇಲಿಯಾ ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್​ ಮಿಚೆಲ್ ಮಾರ್ಷ್​ ಶತಕ ಬಾರಿಸಿದರು. ಕೇವಲ 2 ಗಂಟೆಗಳ ಕಾಲ ಕ್ರೀಸ್​ನಲ್ಲಿ ನಿಂತ ಅವರು 118 ಎಸೆತಗಳನ್ನು ಎದುರಿಸಿದ ಅಷ್ಟೇ ರನ್ ಬಾರಿಸಿದರು. ಫೋರ್​, ಸಿಕ್ಸರ್​ಗಳ ಮೂಲಕವೇ ಅವರು ದೊಡ್ಡ ಮೊತ್ತ ಪೇರಿಸಿದರು. ಅವರ ಇನಿಂಗ್ಸ್​​ನಲ್ಲಿ 17 ಫೋರ್​ ಹಾಗೂ 4 ಸಿಕ್ಸರ್​ಗಳಿವೆ. ಅವರು ಔಟಾದ ಬಳಿಕ ಮತ್ತೆ ಆಸೀಸ್​ ಬ್ಯಾಟಿಂಗ್​ ಪಡೆ ಪತನಗೊಂಡಿತು. ಅಲೆಕ್ಸ್​ ಕ್ಯೇರಿ 8 ರನ್​ ಬಾರಿಸಿದರೆ ಸ್ಟಾರ್ಕ್​ 2 ರನ್​ಗೆ ಸೀಮಿತಗೊಂಡರು. ಪ್ಯಾಟ್​ ಕಮಿನ್ಸ್​ ಶೂನ್ಯಕ್ಕೆ ಔಟಾದರು. ಇಂಗ್ಲೆಂಡ್ ತಂಡ ಪರ ಮಾರ್ಕ್​ ವುಡ್​ 34 ರನ್​ ನೀಡಿ 5 ವಿಕೆಟ್​ ಉರುಳಿಸಿದರೆ, ಕ್ರಿಸ್​ ವೋಕ್ಸ್​ 3 ವಿಕೆಟ್ ಪಡೆದರು. ಬ್ರಾಡ್​ ಉಳಿದೆರಡು ವಿಕೆಟ್​​ಗಳನ್ನು ತಮ್ಮದಾಗಿಸಿಕೊಂಡರು.

ಇದನ್ನೂ ಓದಿ : ನಾವಿಬ್ಬರು ಪ್ರತಿಸ್ಪರ್ಧಿಗಳು: sledging ಸಣ್ಣ ವಿಷಯ ಎಂದು ಜಾನಿ ಬೈರ್‌ಸ್ಟೋವ್‌

ಪ್ರತಿಯಾಗಿ ಬ್ಯಾಟ್​ಮಾಡಿದ ಇಂಗ್ಲೆಂಡ್ ತಂಡವೂ ಸತತವಾಗಿ ವಿಕೆಟ್​ಗಳನ್ನು ಕಳೆದುಕೊಂಡಿತು. ಜಾಕ್ ಕ್ರಾವ್ಲಿ 33 ರನ್ ಬಾರಿಸಿ ಔಟಾದರೆ, ಜೂ ರೂಟ್​ 19 ರನ್​ ಬಾರಿಸಿ ಆಟ ಮುಂದುವರಿಸಿದ್ದಾರೆ. ಆಸೀಸ್​ ಬೌಲಿಂಗ್ ವಿಭಾಗದಲ್ಲಿ ಪ್ಯಾಟ್​ ಕಮಿನ್ಸ್​ 2 ವಿಕೆಟ್​ ಉರುಳಿಸಿದ್ದಾರೆ.

Exit mobile version