ಮೆಲ್ಬೋರ್ನ್: ಭಾರತ ಪ್ರವಾಸದಲ್ಲಿರುವ (Matthew Hayden) ಆಸ್ಟ್ರೇಲಿಯಾ ತಂಡ ಭಾರತದ ಸ್ಪಿನ್ ಬೌಲಿಂಗ್ ದಾಳಿಗೆ ಪತರಗುಟ್ಟಿ ಹೋಗಿದೆ. ರವೀಂದ್ರ ಜಡೇಜಾ ಹಾಗೂ ರವಿಚಂದ್ರನ್ ಅಶ್ವಿನ್ ಅವರ ಸ್ಪಿನ್ ಮೋಡಿಗೆ ಆಸೀಸ್ ಪಡೆಯ ಬ್ಯಾಟರ್ಗಳು ತಲೆಯಲ್ಲಾಡಿಸುತ್ತಾ ಔಟಾಗುತ್ತಿದ್ದಾರೆ. ನಾಲ್ಕು ಪಂದ್ಯಗಳ ಸರಣಿಯಲ್ಲಿ ಎರಡು ಹಣಾಹಣಿಗಳು ಮುಕ್ತಾಯಗೊಂಡಿದ್ದು ಭಾರತ 2-0 ಮುನ್ನಡೆ ಪಡೆದುಕೊಂಡಿದೆ. ಇನ್ನೆರಡು ಪಂದ್ಯಗಳು ಬಾಕಿ ಉಳಿದಿದ್ದು ಹೇಗಾದರೂ ಮಾಡಿ ಗೆದ್ದು ಮರ್ಯಾದೆ ಉಳಿಸಿಕೊಳ್ಳುವುದಕ್ಕೆ ಮುಂದಾಗಿದೆ. ಆದರೆ, ಭಾರತದ ಸ್ಪಿನ್ನರ್ಗಳನ್ನು ಹೇಗೆ ಎದುರಿಸುವುದು ಎಂಬುದೇ ಅವರ ಮುಂದಿರುವ ಸವಾಲು. ಅದಕ್ಕಾಗಿ ಹಗಲು- ರಾತ್ರಿ ಹೆಣಗಾಡುತ್ತಿದೆ. ಏತನ್ಮಧ್ಯೆ, ತಮ್ಮ ದೇಶದ ತಂಡದ ಸಂಕಷ್ಟ ನೋಡಲಾಗದ ಮಾಜಿ ಆರಂಭಿಕ ಬ್ಯಾಟರ್ ಮ್ಯಾಥ್ಯೂ ಹೇಡನ್ ಬ್ಯಾಟರ್ಗಳ ನೆರವಿಗೆ ನಾನು ರೆಡಿ ಎಂಬುದಾಗಿ ಹೇಳಿಕೆ ನೀಡಿದ್ದಾರೆ.
ಸಿಡ್ನಿ ಮಾರ್ನಿಂಗ್ ಹೆರಾಲ್ಡ್ ಪತ್ರಿಕೆ ಜತೆ ಮಾತನಾಡಿದ ಅವರು, ನೂರಕ್ಕೆ ನೂರು ಪ್ರತಿಶತ ನಾನು ತಂಡದ ನೆರವಿಗೆ ಹೋಗಲಿದ್ದೇನೆ. ಯಾವುದೇ ಸಮಯಕ್ಕೆ ಕರೆದರೂ ಸ್ಪಿನ್ ಬೌಲಿಂಗ್ ಎದುರಿಸುವ ತಂತ್ರವನ್ನು ಹೇಳಿಕೊಡುವೆ. ಭಾರತಕ್ಕೆ ಹೋಗಿರುವ ಆಟಗಾರರು ಸ್ಪಿನ್ ಬೌಲಿಂಗ್ ತಂತ್ರದ ಬಗ್ಗೆ ಕೇಳಿದರೆ ನೆರವು ನೀಡುವೆ ಎಂಬುದಾಗಿ ಅವರು ಹೇಳಿದ್ದಾರೆ.
ಇದನ್ನೂ ಓದಿ : R Ashwin | ಟೀಮ್ ಇಂಡಿಯಾದ ಸ್ಪಿನ್ ಬೌಲರ್ ಆರ್ ಅಶ್ವಿನ್ ಅವರ ಟೆಸ್ಟ್ ಬೌಲಿಂಗ್ ಸಾಧನೆ ಈ ರೀತಿ ಇದೆ
ಇದೇ ವೇಳೆ ಅವರು ಚುಟುಕು ಮಾದರಿಯ ಕ್ರಿಕೆಟ್ನಲ್ಲಿ ಆಡಿದ ತಕ್ಷಣವೇ ಟೆಸ್ಟ್ ಪ್ರವಾಸ ಮಾಡಿರುವುದು ತಪ್ಪು ಎಂಬುದಾಗಿಯೂ ಹೇಳಿಕೊಂಡಿದ್ದಾರೆ. ಬಿಗ್ ಬ್ಯಾಷ್ ಲೀಗ್ನಲ್ಲಿ ಆಡಿದ ತಕ್ಷಣವೇ ಆಟಗಾರರು ಭಾರತ ಪ್ರವಾಸ ಮಾಡಿದ್ದಾರೆ. ಹೀಗಾಗಿ ಅವರಿಗೆ ದೀರ್ಘ ಅವಧಿಯ ಕ್ರಿಕೆಟ್ನ ಲಯ ತಪ್ಪಿದೆ ಎಂಬುದಾಗಿ ಅವರು ಹೇಳಿದ್ದಾರೆ.