Site icon Vistara News

Mayank Agarwal: ಚೆನ್ನೈ ವಿರುದ್ಧದ ಪಂದ್ಯಕ್ಕೆ ಮಾಯಾಂಕ್​ ಅಗರ್ವಾಲ್?

Mayank Agarwal

ಬೆಂಗಳೂರು: ಮೂರು ದಿನಗಳ ಹಿಂದೆ ಅಗರ್ತಲಾದಿಂದ ಸೂರತ್‌ಗೆ ತೆರಳುವ ವಿಮಾನದಲ್ಲಿ ನೀರು ಎಂದು ಭಾವಿಸಿ ರಾಸಾಯನಿಕ ದ್ರಾವಣವೊಂದನ್ನು ಸೇವಿಸಿ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದ ಕ್ರಿಕೆಟಿಗ​ ಮಾಯಾಂಕ್​ ಅಗರ್ವಾಲ್(Mayank Agarwal)​ ಸದ್ಯ ಉತ್ತಮ ಚೇತರಿಕೆ(mayank agarwal health update) ಕಂಡಿದ್ದಾರೆ. ಮೂಲಗಳ ಪ್ರಕಾರ ಅವರು ಚೆನ್ನೈನಲ್ಲಿ ಇದೇ 9ರಿಂದ ತಮಿಳುನಾಡು ವಿರುದ್ಧ ನಡೆಯಲಿರುವ ರಣಜಿ ಕ್ರಿಕೆಟ್ ಪಂದ್ಯದಲ್ಲಿ ಕಣಕ್ಕಿಳಿಯುವ ನಿರೀಕ್ಷೆ ಇದೆ.

ಮಂಗಳವಾರ ಅಗರ್ತಲಾದಿಂದ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಮಾಯಾಂಕ್‌ ಅಗರ್ವಾಲ್‌ ದಿಢೀರ್‌ ಅಸ್ವಸ್ಥರಾಗಿದ್ದರು. ತಮ್ಮ ಸೀಟಿನ ಮುಂಭಾಗದಲ್ಲಿದ್ದ ಬಾಟಲಿಯೊಂದನ್ನು ತೆಗೆದು, ಅದರಲ್ಲಿದ್ದ ಪಾನೀಯವನ್ನು ನೀರು ಎಂದು ಭಾವಿಸಿ ಕುಡಿದಿದ್ದರು. ಅದು ಶೌಚಾಲಯವನ್ನು ಸ್ವತ್ಛಗೊಳಿಸುವ ದ್ರಾವಣವಾಗಿತ್ತು. ವಿಮಾನ ಟೇಕ್‌ ಆಫ್ ಆಗದ ಕಾರಣ ಅಗರ್ವಾಲ್‌ ಅವರನ್ನು ತುರ್ತಾಗಿ ಆಸ್ಪತ್ರೆಗೆ ದಾಖಲಿಸಲು ಸಾಧ್ಯವಾಗಿತ್ತು. ಆರಂಭದಲ್ಲಿ ಅಗರ್ವಾಲ್​ಗೆ ವಿಶಪ್ರಾಶನ ಮಾಡಲಾಗಿದೆ ಎಂದು ವರದಿಯಾಗಿತ್ತು. ಬಳಿಕ ಸತ್ಯಾಂಶ ಬೆಳಕಿಗೆ ಬಂದಿತ್ತು.

ಇದನ್ನೂ ಓದಿ Mayank Agarwal : ಮಯಾಂಕ್ ಅಗರ್ವಾಲ್ ನಾಳೆ ಆಸ್ಪತ್ರೆಯಿಂದ ಡಿಸ್ಚಾರ್ಜ್

ಬುಧವಾರ ಅವರು ಬೆಂಗಳೂರಿಗೆ ಮರಳಿದ್ದು ಸದ್ಯ ತಮ್ಮ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ವೈದ್ಯರ ಸಲಹೆ ಮೇರೆಗೆ ಔಷಧೋಪಚಾರ ಪಡೆಯುತ್ತಿದ್ದಾರೆ. ಬಾಯಿಯಲ್ಲಿ ಗುಳ್ಳೆಯಾದ ಕಾರಣ ದ್ರವಾಹಾರವನ್ನೂ ಸೇವಿಸುತ್ತಿದ್ದಾರೆ. ನಾಲ್ಕೈದು ದಿನಗಳಲ್ಲಿ ಸಂಪೂರ್ಣ ಗುಣಮುಖರಾಗುವ ಭರವಸೆ ಇದ್ದು ಚೆನ್ನೈನಲ್ಲಿ ನಡೆಯುವ ಪಂದ್ಯದಲ್ಲಿ ಆಡಲು ಅವರು ಸಿದ್ಧರಾಗುವುದು ಬಹುತೇಕ ಖಚಿತ ಎನ್ನಲಾಗಿದೆ. ಆದರೆ, ಈ ಬಗ್ಗೆ ಅಗರ್ವಾಲ್​ ಹಾಗೂ ಕರ್ನಾಟಕ ರಣಜಿ ತಂಡ ಇದುವರೆಗೆ ಯಾವುದೇ ಅಧಿಕೃತ ಮಾಹಿ ನೀಡಿಲ್ಲ.

ಮಾಯಾಂಕ್‌ ಅಗರ್ವಾಲ್‌ ತಮ್ಮ ಎಕ್ಸ್‌ ಖಾತೆಯಲ್ಲಿ ನಾನೀಗ ಆರೋಗ್ಯವಾಗಿದ್ದೇನೆ ಎಂಬುದಾಗಿ ಹೇಳುವ ಮೂಲಕ ಆರೋಗ್ಯದ ಬಗೆಗಿನ ಕಳವಳ, ಆತಂಕವನ್ನು ದೂರ ಮಾಡಿದ್ದರು.

“ನನ್ನ ಆರೋಗ್ಯದಲ್ಲಿ ಚೇತರಿಕೆ ಆಗುತ್ತಿದೆ. ಮತ್ತೆ ಕ್ರಿಕೆಟ್​ಗೆ ಮರಳಲು ಸಜ್ಜಾಗುತ್ತಿದ್ದೇನೆ. ನಿಮ್ಮೆಲ್ಲರ ಪ್ರಾರ್ಥನೆ, ಪ್ರೀತಿ ಮತ್ತು ಬೆಂಬಲಕ್ಕೆ ಧನ್ಯವಾದಗಳು” ಎಂಬುದಾಗಿ ಅಗರ್ವಾಲ್‌ ಆಸ್ಪತ್ರೆಯಲ್ಲಿರುವ ತಮ್ಮ ಚಿತ್ರಗಳನ್ನು ಪೋಸ್ಟ್‌ ಮಾಡಿದ್ದರು.

ಘಟನೆಗೆ ಸಂಬಂಧಿಸಿದಂತೆ ಅಗರ್ವಾಲ್‌ ತಮ್ಮ ಮ್ಯಾನೇ ಜರ್‌ ಮೂಲಕ ಎನ್‌ಸಿಸಿಪಿಎಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಕುರಿತು ನಾವು ತನಿಖೆ ಕೈಗೆತ್ತಿ ಕೊಳ್ಳ ಲಿದ್ದೇವೆ ಎಂದು ಪಶ್ಚಿಮ ತ್ರಿಪುರ ಎಸ್‌ಪಿ ಕಿರಣ್‌ ಕುಮಾರ್‌ ತಿಳಿಸಿದ್ದಾರೆ.

ಅಗರ್ವಾಲ್​ ಅನುಪಸ್ಥಿತಿಯಲ್ಲಿ ಇಂದು ಆರಂಭಗೊಂಡ ರೈಲ್ವೇಸ್‌ ವಿರುದ್ಧದ ಪಂದ್ಯದಲ್ಲಿ ಉಪನಾಯಕ ನಿಕಿನ್‌ ಜೋಸ್‌ ತಂಡವನ್ನು ಮುನ್ನಡೆಸುತ್ತಿದ್ದಾರೆ. ಸದ್ಯ ಕರ್ನಾಟಕ 6 ವಿಕೆಟ್​ಗೆ 90 ರನ್​ ಬಾರಿಸಿ ಇನ್ನೂ 65 ರನ್​ ಹಿನ್ನಡೆಯಲ್ಲಿದೆ. ಮೊದಲು ಬ್ಯಾಟಿಂಗ್​ ಮಾಡಿದ ರೈಲ್ವೇಸ್​ 155 ಆಲೌಟ್​ ಆಗಿತ್ತು.

Exit mobile version