Site icon Vistara News

England Tour: ರೋಹಿತ್ ಶರ್ಮ ಆಡದಿದ್ದರೆ ಮಯಾಂಕ್‌ಗೆ ಸಿಗಲಿದೆ ಇನಿಂಗ್ಸ್‌ ಆರಂಭಿಸುವ ಅವಕಾಶ

covid-19

ಲೀಸೆಸ್ಟರ್‌: ಟೀಮ್‌ ಇಂಡಿಯಾದ ನಾಯಕ ರೋಹಿತ್‌ ಶರ್ಮ ಅವರು ಕೋವಿಡ್‌- 19 ಸೋಂಕಿಗೆ ಒಳಗಾದ ಹಿನ್ನೆಲೆಯಲ್ಲಿ ಅವರು ಜುಲೈ ೧ರಂದು ಆರಂಭವಾಗಲಿರುವ ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಪಂದ್ಯಕ್ಕೆ ಲಭ್ಯರಾಗುವುದು ಅನುಮಾನ ಎನಿಸಿದೆ. ಹೀಗಾಗಿ ಕನ್ನಡಿಗ ಮಯಾಂಕ್‌ ಅಗರ್ವಾಲ್‌ಗೆ ಬುಲಾವ್‌ ಬಂದಿದ್ದು, ಇಂಗ್ಲೆಂಡ್ ವಿಮಾನ ಏರಿದ್ದಾರೆ.

ಹಿಟ್ಟರ್‌ ರೋಹಿತ್‌ ಶರ್ಮ ಅವರು ಲೀಸೆಸ್ಟರ್‌ಶೈರ್‌ ತಂಡದ ವಿರುದ್ಧದ ಅಭ್ಯಾಸ ಪಂದ್ಯದ ನಡುವೆ ಕೋವಿಡ್‌- ೧೯ ಸೋಂಕಿಗೆ ಒಳಗಾಗಿದ್ದರು. ಮೂರನೇ ದಿನದಿಂದ ಅವರು ಐಸೋಲೇಷನ್‌ನಲ್ಲಿ ಇದ್ದಾರೆ. ಅವರ ಆರೋಗ್ಯದ ಮೇಲೆ ಟೀಮ್‌ ಇಂಡಿಯಾದ ವೈದ್ಯಕೀಯ ತಂಡ ನಿಗಾ ವಹಿಸಿದೆ. ಒಂದು ವೇಳೆ ಅವರು ಸಂಪೂರ್ಣ ಗುಣಮುಖರಾಗಿ ತಂಡ ಸೇರಿಕೊಳ್ಳದಿದ್ದರೆ ಎಂಬ ಕಾರಣಕ್ಕೆ ಮಯಾಂಕ್‌ ಅಗರ್ವಾಲ್ ಅವರನ್ನು ಟೀಮ್‌ ಇಂಡಿಯಾ ಮ್ಯಾನೇಜ್ಮೆಂಟ್‌ ಕರೆಸಿಕೊಂಡಿದೆ.

ಬುಮ್ರಾ ಕ್ಯಾಪ್ಟನ್‌

ಹಿಟ್ಟರ್‌ ರೋಹಿತ್‌ ಶರ್ಮ ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಪಂದ್ಯದಲ್ಲಿ ನಾಯಕತ್ವ ವಹಿಸಿಕೊಂಡಿದ್ದರೆ ವಿದೇಶಿ ನೆಲದಲ್ಲಿ ಮೊದಲ ಬಾರಿ ನಾಯಕತ್ವ ವಹಿಸಿಕೊಂಡಂತಾಗುತ್ತಿತ್ತು. ಆದರೆ, ಕೊರೊನಾ ಕಾರಣಕ್ಕೆ ಪಂದ್ಯದಲ್ಲಿ ಆಡಲು ಸಾಧ್ಯವಾಗದಿದ್ದರೆ ಇನ್ನಷ್ಟು ದಿನಗಳು ಕಾಯಬೇಕಾಗುತ್ತದೆ. ಹೀಗಾಗಿ ಉಪನಾಯಕ ಜಸ್‌ಪ್ರೀತ್‌ ಬುಮ್ರಾಗೆ ನಾಯಕತ್ವ ವಹಿಸಿಕೊಡುವ ಸಾಧ್ಯತೆಗಳಿವೆ. ಆದರೆ, ಬಿಸಿಸಿಐ ಈ ಬಗ್ಗೆ ಸ್ಪಷ್ಟತೆ ನೀಡಿಲ್ಲ.

ಮಯಾಂಕ್‌ ಅಗರ್ವಾಲ್‌ ಇಂಗ್ಲೆಂಡ್‌ ಟೆಸ್ಟ್‌ಗೆ ಆಯ್ಕೆಯಾಗಿದ್ದ ೧೫ ಸದಸ್ಯರ ತಂಡದಲ್ಲಿ ಸ್ಥಾನ ಪಡೆದಿರಲಿಲ್ಲ. ಆದರೆ, ದಕ್ಷಿಣ ಆಫ್ರಿಕಾ ವಿರುದ್ಧ ಟಿ೨೦ ಸರಣಿಯ ಮೊದಲು ಕನ್ನಡಿಗ ಕೆ.ಎಲ್‌. ರಾಹುಲ್ ಅವರು ಗಾಯದ ಸಮಸ್ಯೆಗೆ ಒಳಗಾದ ಕಾರಣ ಅವರು ಆ ಸರಣಿ ಹಾಗೂ ಇಂಗ್ಲೆಂಡ್‌ ಪ್ರವಾಸ ಅವಕಾಶವನ್ನೂ ಕಳೆದಕೊಂಡರು. ಇದೀಗ ರೋಹಿತ್‌ ಅಲಭ್ಯರಾಗುವ ಸಾಧ್ಯತೆಗಳಿರುವ ಕಾರಣ ಮಯಾಂಕ್‌ಗೆ ಬ್ಯಾಕ್ಅಪ್‌ ಆಟಗಾರನ ಸ್ಥಾನ ನೀಡಿ ಇಂಗ್ಲೆಂಡ್‌ಗೆ ಕರೆಸಿಕೊಳ್ಳಲಾಗಿದೆ. ರೋಹಿತ್‌ ಏನಾದರೂ ಪಂದ್ಯ ಆರಂಭದ ದಿನ ಸುಧಾರಿಕೊಳ್ಳಲಿದ್ದರೆ ಮಯಾಂಕ್‌ಗೆ ಬ್ಯಾಟಿಂಗ್‌ ಮಾಡುವ ಚಾನ್ಸ್‌ ಸಿಗಬಹುದು.

ಮಯಾಂಕ್‌ ಇಂಗ್ಲೆಂಡ್‌ಗೆ ತೆರಳಿರುವ ಹೊರತಾಗಿಯೂ ಅವರನ್ನು ಕಣಕ್ಕೆ ಇಳಿಸುವ ಬಗ್ಗೆ ಖಾತರಿ ಇಲ್ಲ. ಅಭ್ಯಾಸ ಪಂದ್ಯದಲ್ಲಿ ಆರಂಭಿಕರಾಗಿ ಬ್ಯಾಟಿಂಗ್‌ ಮಾಡಿರುವ ಶುಬ್ಮನ್‌ ಗಿಲ್‌ ಹಾಗೂ ಕೆ. ಎಸ್ ಭರತ್‌ ಉತ್ತಮ ಪ್ರದರ್ಶನ ನೀಡಿದ್ದಾರೆ. ಹೀಗಾಗಿ ಅವರಿಬ್ಬರನೇ ಆರಂಭಿಕರಾಗಿ ಇಳಿಸಬಹುದು ಎಂದು ಹೇಳಲಾಗುತ್ತಿದೆ.

ಬೆನ್‌ ಫೋಕ್ಸ್‌ಗೂ ಸೋಂಕು

ಭಾರತ ತಂಡದಂತೆ ಇಂಗ್ಲೆಂಡ್‌ ಬಳಗದಲ್ಲೂ ಕೋವಿಡ್‌-೧೯ ಸೋಂಕು ಕಾಣಿಸಿಕೊಂಡಿದೆ. ಇಂಗ್ಲೆಂಡ್‌ನ ವಿಕೆಟ್‌ಕೀಪರ್‌ ಬ್ಯಾಟ್ಸ್‌ಮನ್‌ ಬೆನ್‌ಫೋಕ್ಸ್‌ ಅವರಿಗೂ ಕೊರೊನಾ ತಗುಲಿರುವುದು ವರದಿಯಲ್ಲಿ ಗೊತ್ತಾಗಿದೆ.

ಇದನ್ನೂ ಓದಿ: Team India ನಾಯಕ ರೋಹಿತ್‌ ಶರ್ಮಗೆ ಕೊರೊನ

Exit mobile version