ನವದೆಹಲಿ: ಯಾವುದೇ ದುರುದ್ದೇಶವಿಲ್ಲದೆ ಮಹಿಳೆಯನ್ನು ತಬ್ಬಿಕೊಳ್ಳುವುದು ಅಥವಾ ಮುಟ್ಟುವುದು ಲೈಂಗಿಕ ಅಪರಾಧವಲ್ಲ ಎಂದು ಲೈಂಗಿಕ ಕಿರುಕುಳದ ಆರೋಪ ಹೊತ್ತಿರುವ ಭಾರತೀಯ ಕುಸ್ತಿ ಒಕ್ಕೂಟದ ನಿರ್ಗಮಿತ ಅಧ್ಯಕ್ಷ, ಬಿಜೆಪಿ ಸಂಸದ ಬ್ರಿಜ್‌ಭೂಷಣ್ ಶರಣ್ ಸಿಂಗ್(BJP MP Brij Bhushan Sharan Singh) ಹೇಳಿದ್ದಾರೆ. ಬುಧವಾರ ವಿಜಾರಣಗೆ ಹಾಜರಾದ ವೇಳೆ ನ್ಯಾಯಾಲಯದ ಮುಂದೆ ಅವರು ಈ ಹೇಳಿಕೆ ನೀಡಿದ್ದಾರೆ.
ಕುಸ್ತಿಪಟುಗಳು ಮಾಡಿರುವ ಲೈಂಗಿಕ ಕಿರುಕಳದ ಪ್ರಕರಣಕ್ಕೆ ಸಂಬಂಧಿಸಿ ಬುಧವಾರ ದೆಹಲಿಯ ರೂಸ್ ಅವೆನ್ಯೂ ನ್ಯಾಯಾಲಯಕ್ಕೆ ಹಾಜರಾದ ಬ್ರಿಜ್ ಭೂಷಣ್ ತಮ್ಮ ವಿರುದ್ಧ ಮಾಡಿರುವ ಎಲ್ಲ ಆರೋಪಗಳನ್ನು ವಿರೋಧಿಸಿ ವಕೀಲರ ಮೂಲಕ ವಾದವನ್ನು ಮಂಡಿಸಿದ್ದಾರೆ. ಬ್ರಿಜ್ ಭೂಷಣ್ ಪರ ವಕೀಲ ರಾಜೀವ್ ಮೋಹನ್ ವಕಾಲತ್ತು ವಹಿಸಿದ್ದರು. ವಾದ-ಪ್ರತಿವಾದವನ್ನೂ ಸುಧೀರ್ಘವಾಗಿ ಆಲಿಸಿದ ನ್ಯಾಯಾಲಯವೂ ವಿವಾರಣೆಯನ್ನೂ ಇಂದು (ಗುರುವಾರ) ನಡೆಸಲಿದೆ.
ಬ್ರಿಜ್ ಭೂಷಣ್ಗೆ ಬೆಂಬಲ ಸೂಚಿಸಿದ ವಕೀಲ
ಬ್ರಿಜ್ ಭೂಷಣ್ಗೆ ಬೆಂಬಲ ಸೂಚಿಸಿ ಹೇಳಿಕೆ ನೀಡಿರುವ ಅವರ ವಕೀಲರು, “ಕುಸ್ತಿ ಕ್ರೀಡೆಗಳಲ್ಲಿ ಹೆಚ್ಚಾಗಿ ಪುರುಷ ತರಬೇತುದಾರರೇ ಹೆಚ್ಚಾಗಿರುತ್ತಾರೆ. ವಿಶ್ವ ಮಟ್ಟದ ಬಹುತೇಹ ಎಲ್ಲ ಮಹಿಳಾ ಕುಸ್ತಿಪಟುಗಳಿಗೂ ಪುರುಷ ಕೋಚ್ ಇರುತ್ತಾರೆ. ಪಂದ್ಯ ಗೆದ್ದಾಗ ಅಥವಾ ಅವರನ್ನು ಹುರಿದುಂಬಿಸುವ ಸಲುವಾಗಿ ಪುರುಷ ಕೋಚ್ಗಳು ತಬ್ಬಿಕೊಳ್ಳುವುದು ಸಹಜ ಇದನ್ನು ಲೈಂಗಿಕ ಕಿರುಕುಳ ಎನ್ನುವುದು ಸರಿಯಲ್ಲ” ಎಂದು ಹೇಳುವ ಮೂಲಕ ಬಿಜ್ ಭೂಷಣ್ ಪರ ಬ್ಯಾಟ್ ಬೀಸಿದ್ದಾರೆ.
ಷರತ್ತು ವಿಧಿಸಿದ ಕೋರ್ಟ್
ಜಾಮೀನು ನೀಡುವ ಸಂದರ್ಭದಲ್ಲಿ ದೆಹಲಿ ನ್ಯಾಯಾಲಯ ತನ್ನ ಪೂರ್ವಾನುಮತಿ ಇಲ್ಲದೆ ದೇಶವನ್ನು ತೊರೆಯದಂತೆ ಬ್ರಿಜ್‌ಭೂಷಣ್ ಮತ್ತು ವಿನೋದ್ ತೋಮರ್ಗೆ ನಿರ್ದೇಶನ ನೀಡಿದೆ. ಪ್ರಕರಣದ ಸಾಕ್ಷಿಗಳಿಗೆ ಯಾವುದೇ ಪ್ರಚೋದನೆ ನೀಡದಂತೆಯೂ ಸೂಚಿಸಿದೆ.
ಹಲವು ಕೇಸ್ ದಾಖಲು
ಬ್ರಿಜ್ ಭೂಷಣ್ ಹಾಗೂ ತೋಮರ್ ವಿರುದ್ಧ ವಿನೇಶ್ ಫೋಗಾಟ್(Vinesh Phogat), ಸಾಕ್ಷಿ ಮಲಿಕ್(sakshi malik) ಸೇರಿದಂತೆ ಕೆಲವು ಕುಸ್ತಿಪಟುಗಳು ದೂರು ನೀಡಿದ್ದರು. ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 354 (ಮಹಿಳೆಯ ಘನತೆಗೆ ಧಕ್ಕೆ ತರುವ ಉದ್ದೇಶದಿಂದ ಹಲ್ಲೆ ಅಥವಾ ಕ್ರಿಮಿನಲ್ ಬಲಪ್ರಯೋಗ), 354 ಎ (ಲೈಂಗಿಕ ಕಿರುಕುಳ), 354 ಡಿ (ಹಿಂಬಾಲಿಸುವುದು) ಮತ್ತು 506 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಮಹಿಳಾ ಕುಸ್ತಿಪಟುಗಳು ಸಲ್ಲಿಸಿದ ದೂರಿನ ಮೇರೆಗೆ ದೆಹಲಿ ಪೊಲೀಸರು ಜೂನ್ 15ರಂದು ಬ್ರಿಜ್ ಭೂಷಣ್ ಅವರ ವಿರುದ್ಧ ಕೋರ್ಟ್ಗೆ ಚಾರ್ಜ್ ಶೀಟ್ ಸಲ್ಲಿಸಿದರು.
ಬಿಜೆಪಿ ಸಂಸದ ಬ್ರಿಜ್‌ಭೂಷಣ್ ವಿರುದ್ಧ ಎರಡು ಎಫ್ಐಆರ್ಗಳನ್ನು ದಾಖಲಿಸಲಾಗಿತ್ತು. ಅದರಲ್ಲೊಂದು ಅಪ್ರಾಪ್ತ ಕುಸ್ತಿಪಟುವಿನ ಪ್ರಕರಣದಲ್ಲಿ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ದಾಖಲಾದ ದೂರು ಆಗಿತ್ತು. ಬಳಿಕ ದೂರುದಾರರು ತಮ್ಮ ಹೇಳಿಕೆಗಳನ್ನು ಬದಲಾಯಿಸಿದ್ದರು. ಈ ಪ್ರಕರಣ ವಾಪಸ್ ಪಡೆಯಲಾಗಿದೆ. ಎರಡನೇ ಪ್ರಕರಣ ಉಳಿದ ಮಹಿಳಾ ಕುಸ್ತಿಪಟುಗಳು ನೀಡಿದ ದೂರಾಗಿದೆ.
ಇದನ್ನೂ ಓದಿ Brij Bhushan: ಜಾಮೀನು ಪಡೆದ ಬ್ರಿಜ್‌ಭೂಷಣ್; ದೇಶ ತೊರೆಯದಂತೆ ಸೂಚನೆ
ಸಾಕ್ಷಿ ಮಲಿಕ್, ಬಜರಂಗ್ ಪುನಿಯಾ(bajrang punia) ಮತ್ತು ವಿನೇಶ್ ಫೋಗಟ್ ಸೇರಿದಂತೆ ಭಾರತದ ಉನ್ನತ ಕುಸ್ತಿಪಟುಗಳು ದೆಹಲಿಯ ಜಂತರ್ ಮಂತರ್ನಲ್ಲಿ ಸಿಂಗ್ ಅವರನ್ನು ಭಾರತೀಯ ಕುಸ್ತಿ ಒಕ್ಕೂಟದ ಉನ್ನತ ಸ್ಥಾನದಿಂದ ತೆಗೆಯುವಂತೆ ಒತ್ತಾಯಿಸಿ 38 ದಿನಗಳ ಕಾಲ ಪ್ರತಿಭಟನೆ ನಡೆಸಿದ್ದರು.