ಬ್ಯೂನಸ್ ಐರಿಸ್: ಕತಾರ್ ಫಿಫಾ ವಿಶ್ವ ಕಪ್ನಲ್ಲಿ ಅರ್ಜೆಂಟೀನಾ ತಂಡ ಚಾಂಪಿಯನ್ ಆದ ಬಳಿಕ ತಂಡದ ನಾಯಕ ಲಿಯೊನೆಲ್ ಮೆಸ್ಸಿಯ(Lionel Messi) ಖ್ಯಾತಿ ಮತ್ತಷ್ಟು ಹೆಚ್ಚಾಗಿದೆ. ವಿಶ್ವ ಕಪ್ ಆರಂಭಕ್ಕೂ ಮುನ್ನ ಅವರ ಅಭಿಮಾನಿಗಳು ನೆಚ್ಚಿನ ಆಟಗಾರ ಈ ಬಾರಿ ವಿಶ್ವ ಕಪ್ ಗೆಲ್ಲಬೇಕೆಂದು ಹಲವು ರೀತಿಯಲ್ಲಿ ಅಭಿಮಾನ ತೋರಿದ್ದರು. ಆಳ ಸಮುದ್ರದಲ್ಲಿ ಮೆಸ್ಸಿಯ ಕಟೌಟ್ ನಿಲ್ಲಿಸಿ ಸುದ್ದಿಯಾಗಿದ್ದರು. ಇದೀಗ ರೈತರೊಬ್ಬರು ವಿಶೇಷ ರೀತಿಯಲ್ಲಿ ಅಭಿಮಾನ ಮೆರೆಯುವ ಮೂಲಕ ಗಮನಸೆಳೆದಿದ್ದಾರೆ.
ಲಿಯೊನೆಲ್ ಮೆಸ್ಸಿಯ ಅಪ್ಪಟ ಅಭಿಮಾನಿಯಾದ ಮ್ಯಾಕ್ಸಿಮಿಲಿಯಾನೊ ಸ್ಪಿನಾಝ್ ಹೆಸರಿನ ರೈತ ತನ್ನ 124 ಎಕರೆ ಕೃಷಿ ಭೂಮಿಯಲ್ಲಿ ಮೆಸ್ಸಿ ಅವರ ಭಾವಚಿತ್ರವನ್ನು ಬಿಡಿಸುವ ಮೂಲಕ ಎಲ್ಲರನ್ನು ನಿಬ್ಬೆರಗಾಗುವಂತೆ ಮಾಡಿದ್ದಾರೆ. ಇದೀಗ ಸ್ಪಿನಾಝ್ ಅವರು ರಚಿಸಿದ ಈ ಚಿತ್ರದ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕತಾರ್‌ನಲ್ಲಿ ನಡೆದ ಫಿಫಾ ವಿಶ್ವ ಕಪ್ ಫುಟ್ಬಾಲ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಫ್ರಾನ್ಸ್ ವಿರುದ್ಧ ಅರ್ಜೆಂಟೀನಾ ತಂಡ ಶೂಟೌಟ್ನಲ್ಲಿ ಗೆಲುವು ದಾಖಲಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಈ ಮೂಲಕ ಬರೋಬ್ಬರಿ 36 ವರ್ಷಗಳ ಬಳಿಕ ವಿಶ್ವ ಕಪ್ ಜಯಿಸುವಲ್ಲಿ ಯಶಸ್ವಿಯಾಗಿತ್ತು. ಈ ಸ್ಮರಣೀಯ ಗೆಲುವಿಗೆ ಒಂದು ತಿಂಗಳು ಪೂರ್ತಿಗೊಂಡಿದೆ. ಈ ಸಂಭ್ರಮವನ್ನು ಆಚರಿಸುವ ಸಲುವಾಗಿ ಮ್ಯಾಕ್ಸಿಮಿಲಿಯಾನೊ ಸ್ಪಿನಾಝ್ ತಮ್ಮ ಕೃಷಿ ಭೂಮಿಯಲ್ಲಿ ತಂಡದ ನಾಯಕ ಲಿಯೊನೆಲ್ ಮೆಸ್ಸಿ ಅವರ ಭಾವಚಿತ್ರವನ್ನು ಅನಾವರಣಗೊಳಿಸಿದ್ದಾರೆ.
ವಿಶೇಷ ಎಂದರೆ ಮೆಸ್ಸಿಯ ರೂಪವನ್ನು ಅರಳಿಸುವುದಕ್ಕಾಗಿಯೇ ಅವರು ಜೋಳದ ಬೆಳೆಯನ್ನು ಬೆಳೆದಿದ್ದಾರೆ. 124 ಎಕರೆ ಭೂಮಿಯಲ್ಲಿ ಬೆಳೆ ಹಾಕಿ ಮೆಸ್ಸಿಯ ಈ ಕಲಾಕೃತಿ ನಿರ್ಮಿಸಿದ್ದು ನಿಜಕ್ಕೂ ಅದ್ಭುತ. ಅವರ ಪರಿಶ್ರಮಕ್ಕೆ ಸೈ ಎನ್ನಲೇ ಬೇಕು. ಬಾಹ್ಯಾಕಾಶದಿಂದ ಸುಂದರವಾಗಿ ಕಾಣುವ ಮೆಸ್ಸಿಯ ಈ ಕಲಾಕೃತಿ ನೋಡುಗರ ಕಣ್ಮನ ಸೆಳೆದಿದೆ.
ಇದನ್ನೂ ಓದಿ | Lionel Messi | ಕುಟುಂಬದ ಜತೆಗೆ ಹೊಸ ವರ್ಷವನ್ನು ಅದ್ಧೂರಿಯಾಗಿ ಆಚರಿಸಿದ ಲಿಯೋನೆಲ್ ಮೆಸ್ಸಿ