ಮುಂಬಯಿ: ಸೆಪ್ಟೆಂಬರ್ 19ರಂದು ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ SA20 ಆಟಗಾರರ ಹರಾಜಿಗೆ ಮುಂಚಿತವಾಗಿ ರಿಲಯನ್ಸ್ ಸಂಸ್ಥೆಯ ಒಡೆತನದ ಎಮ್‌ಐ ಕೇಪ್ ಟೌನ್ ತಂಡ ತನ್ನ ತಮ್ಮ ಕೋಚಿಂಗ್ ವಿಭಾಗವನ್ನು ಘೋಷಿಸಿದೆ. ಆಸ್ಟ್ರೇಲಿಯಾದ ಮಾಜಿ ಬ್ಯಾಟ್ಸ್‌ಮನ್ ಸೈಮನ್ ಕ್ಯಾಟಿಚ್ ಮುಖ್ಯ ಕೋಚ್ ಆಗಿ ನೇಮಕಗೊಂಡಿದ್ದು, ದಕ್ಷಿಣ ಆಫ್ರಿಕಾದ ಮಾಜಿ ಬ್ಯಾಟರ್ ಹಾಶಿಮ್ ಆಮ್ಲಾ ಬ್ಯಾಟಿಂಗ್ ಕೋಚ್ ಆಗಿ ತಂಡವನ್ನು ಸೇರಿಕೊಳ್ಳಲಿದ್ದಾರೆ.
ನ್ಯೂಜಿಲೆಂಡ್‌ನ ಮಾಜಿ ಬ್ಯಾಟ್ಸ್‌ಮನ್ ಜೇಮ್ಸ್ ಪಮೆಂಟ್ ಫೀಲ್ಡಿಂಗ್ ಕೋಚ್ ಆಗಿ ತಂಡ ಸೇರಿಕೊಳ್ಳಲಿದ್ದರೆ, ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಮತ್ತು ಕೋಚ್ ರಾಬಿನ್ ಪೀಟರ್ಸನ್ ತಂಡದ ಜನರಲ್ ಮ್ಯಾನೇಜರ್ ಆಗಿರುತ್ತಾರೆ. ಅವರಿಬ್ಬರೂ ಎಂಐ ಜೊತೆ ಬಹಳ ಹಿಂದಿನಿಂದಲೂ ಸಂಬಂಧ ಹೊಂದಿದ್ದಾರೆ. ಪ್ರಸ್ತುತ ಪಮೆಂಟ್ ಮುಂಬೈ ಇಂಡಿಯನ್ಸ್ ತಂಡದ ಫೀಲ್ಡಿಂಗ್ ಕೋಚ್ ಆಗಿದ್ದಾರೆ. ಪೀಟರ್ಸನ್ ಈ ಹಿಂದೆ ಮುಂಬೈ ಇಂಡಿಯನ್ಸ್ ಪರ ಆಡಿದ್ದರು.
ರಿಲಯನ್ಸ್ ಜಿಯೋ ಇನ್ಫೋಕಾಮ್ ಮುಖ್ಯಸ್ಥರು ಹಾಗೂ ಮುಂಬಯಿ ಇಂಡಿಯನ್ಸ್ ತಂಡದ ಮಾಲೀಕರಾಗಿರುವ ಆಕಾಶ್ ಎಂ. ಅಂಬಾನಿ ಕೋಚ್‌ಗಳ ನೇಮಕ ಕುರಿತು ಮಾತನಾಡಿ “ಸೈಮನ್ ಮತ್ತು ಹಾಶಿಮ್ ಅವರನ್ನು ಎಂಐ ಕೇಪ್ ಟೌನ್ ಕೋಚಿಂಗ್ ತಂಡಕ್ಕೆ ಸ್ವಾಗತಿಸಲು ನನಗೆ ಸಂತೋಷವಾಗುತ್ತಿದೆ. ಅಂತೆಯೇಜೇಮ್ಸ್ ಮತ್ತು ರಾಬಿನ್ ಅವರೊಂದಿಗೆ ನಾವು ದಕ್ಷಿಣ ಆಫ್ರಿಕಾದಲ್ಲಿ ಅತ್ಯುತ್ತಮ ತಂಡ ಕಟ್ಟಲಿದ್ದೇವೆ,” ಎಂದು ಹೇಳಿದರು.
“ಎಂಐ ಕೇಪ್ ಟೌನ್‌ನ ಮುಖ್ಯ ತರಬೇತುದಾರರಾಗಿರುವುದು ಗೌರವದ ಸಂಗತಿ. ಹೊಸ ತಂಡವನ್ನು ಒಟ್ಟುಗೂಡಿಸುವುದು, ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲಾಗುವುದು. ಎಂಐ ಕೇಪ್ ಟೌನ್ ಸ್ಥಳೀಯ ಪ್ರತಿಭೆಗಳಿಗೆ ಹೆಚ್ಚಿನ ಅವಕಾಶ ಕಲ್ಪಿಸಲಿದೆ,” ಎಂದು ಸೈಮನ್ ಕ್ಯಾಟಿಚ್ ಹೇಳಿದರು.
“ಎಂಐ ಕೇಪ್ ಟೌನ್ ತಂಡ ಸೇರಿರುವುದಕ್ಕೆ ಸಂತಸವಾಗುತ್ತಿದೆ. ಎಂಐ ಕೇಪ್ ಟೌನ್ ಆಟಗಾರರು ಉತ್ತಮ ಪ್ರದರ್ಶನ ನೀಡಲು ಬದ್ಧವಾಗಿದೆ,” ಎಂದು ಹಾಶಿಮ್ ಆಮ್ಲಾ ಹೇಳಿದ್ದಾರೆ.
ಎಂಐ ಕೇಪ್ ಟೌನ್ ಈಗಾಗಲೇ 5 ಆಟಗಾರರ ಜೊತೆ ಒಪ್ಪಂದ ಮಾಡಿಕೊಂಡಿದೆ. ಅವರೆಂದರೆ ಕಗಿಸೊ ರಬಾಡ, ಡೀವಾಲ್ಡ್ ಬ್ರೆವಿಸ್, ರಶೀದ್ ಖಾನ್, ಸ್ಯಾಮ್ ಕರ್ರನ್ ಮತ್ತು ಲಿಯಾಮ್ ಲಿವಿಂಗ್‌ಸ್ಟನ್.