Site icon Vistara News

Miami Open Final: ಚೊಚ್ಚಲ ಪ್ರಶಸ್ತಿ ನಿರೀಕ್ಷೆಯಲ್ಲಿ ಬೋಪಣ್ಣ-ಎಬ್ಡೆನ್‌ ಜೋಡಿ; ಇಂದು ಫೈನಲ್​

Rohan Bopanna-Matthew Ebden

ಫ್ಲೋರಿಡಾ(ಅಮೆರಿಕ): ಇಂದು(ಶನಿವಾರ) ನಡೆಯುವ ಮಿಯಾಮಿ ಓಪನ್‌(Miami Open Final) ಎಟಿಪಿ 1000 ಟೆನಿಸ್‌ ಟೂರ್ನಿ ಫೈನಲ್‌ ಪಂದ್ಯದಲ್ಲಿ ಭಾರತದ ಹಿರಿಯ ಟೆನಿಸಿಗ ರೋಹನ್‌ ಬೋಪಣ್ಣ(Rohan Bopanna) ಹಾಗೂ ಅವರ ಜತೆಗಾರ ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್‌(Matthew Ebden) ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ.

ಮಿಯಾಮಿ ಓಪನ್‌ ಎಟಿಪಿ 1000 ಟೆನಿಸ್‌(Miami Open 2024) ಟೂರ್ನಿಯ ಫೈನಲ್‌ ಪ್ರವೇಶಿಸಿಸುವ ಮೂಲಕ ಎಲ್ಲಾ 9 ಎಟಿಪಿ ಮಾಸ್ಟರ್ಸ್‌ ಟೂರ್ನಿಗಳಲ್ಲಿ ಫೈನಲ್‌ಗೇರಿದ 2ನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಬೋಪಣ್ಣ ಚೊಚ್ಚಲ ಮಿಯಾಮಿ ಓಪನ್‌ನಲ್ಲಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಳ್ಳಲಿ ಎನ್ನುವುದು ಭಾರತೀಯರ ಹಾರೈಕೆ. ಫೈನಲ್​ನಲ್ಲಿ ಇಂಡೋ-ಆಸೀಸ್​ ಜೋಡಿ ಕ್ರೊವೇಷಿಯಾದ ಇವಾನ್‌ ಡೊಡಿಗ್‌-ಅಮೆರಿಕದ ಆಸ್ಟಿನ್‌ ಕ್ರಾಜಿಕೆಕ್‌ ವಿರುದ್ಧ ಸೆಣಸಲಿದ್ದಾರೆ.

ಸೆಮಿಫೈನಲ್‌ನಲ್ಲಿ ಅಗ್ರ ಶ್ರೇಯಾಂಕಿತ ಇಂಡೋ-ಆಸೀಸ್‌ ಜೋಡಿ, ಸ್ಪೇನ್‌ನ ಗ್ರಾನೊಲೆರ್ಸ್‌ ಹಾಗೂ ಅರ್ಜೆಂಟೀನಾದ ಜೆಬಲ್ಲೊಸ್‌ ವಿರುದ್ಧ 6-1, 6-4 ಅಂತರದಲ್ಲಿ ಗೆಲುವು ಸಾಧಿಸಿತ್ತು. ಫೈನಲ್​ನಲ್ಲಿಯೂ​ ಇದೇ ಜೋಶ್​ನಲ್ಲಿ ಆಡುವ ಇರಾದೆಯಲ್ಲಿದೆ. ಇದೇ ವರ್ಷ ನಡೆದ ಆಸ್ಟ್ರೇಲಿಯಾ ಓಪನ್​ ಟೆನಿಸ್​ ಟೂರ್ನಿಯಲ್ಲಿ(Australian Open 2024) ಅಭೂತಪೂರ್ವ ಸಾಧನೆ ತೋರಿದ ಬೋಪಣ್ಣ ಜೋಡಿ ಪರುಷರ ಡಬಲ್ಸ್​ ಫೈನಲ್​ ಪಂದ್ಯದಲ್ಲಿ ಗೆದ್ದು ಚೊಚ್ಚಲ ಆಸ್ಟ್ರೇಲಿಯಾ ಓಪನ್​ ಪ್ರಶಸ್ತಿ ಎತ್ತಿ ಹಿಡಿದಿದ್ದರು. ಈ ಮೂಲಕ ಓಪನ್​ ಯುಗದಲ್ಲಿ ಗ್ರ್ಯಾನ್‌ ಸ್ಲಾಮ್‌ ಟ್ರೋಫಿ ಗೆದ್ದ ಅತಿ ಹಿರಿಯ ಟೆನಿಸಿಗ ಎನಿಸಿಕೊಂಡಿದ್ದರು.

ಇದನ್ನೂ ಓದಿ Australian Open 2024 : ಚಾಂಪಿಯನ್​ ರೋಹನ್ ಬೋಪಣ್ಣ ಗಳಿಸಿದ ಬಹುಮಾನ ಮೊತ್ತವೆಷ್ಟು?

ಮೋದಿಗೆ ವಿಶೇಷ ಉಡುಗೊರೆ ನೀಡಿದ್ದ ಬೋಪಣ್ಣ


ಇತ್ತೀಚೆಗೆ ಆಸ್ಟ್ರೇಲಿಯನ್ ಓಪನ್‌ (Australian Open) ಟೆನಿಸ್‌ ಟೂರ್ನಿಯ ಪುರಷರ ಡಬಲ್ಸ್​ನಲ್ಲಿ ಚಾಂಪಿಯನ್​ ಪಟ್ಟ ಅಲಂರಿಸಿದ ಕನ್ನಡಿಗ ರೋಹನ್ ಬೋಪಣ್ಣ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು (Narendra Modi) ಭೇಟಿಯಾಗಿದ್ದರು. ಭೇಟಿ ವೇಳೆ ಮೋದಿಗೆ ವಿಶೇಷ ಉಡುಗೊರೆಯನ್ನು ಕೂಡ ನೀಡಿದ್ದರು.

ಫೆಬ್ರವರಿ 2ರಂದು ನವದೆಹಲಿಯ ಪ್ರಧಾನಿ ನಿವಾಸದಲ್ಲಿ ಮೋದಿ ಅವರನ್ನು ಭೇಟಿಯಾಗಿದ್ದ ಬೋಪಣ್ಣ ತಮ್ಮ ಟೆನಿಸ್ ಮತ್ತು ಫಿಟ್​ನೆಸ್​​ ಅನುಭವದ ಬಗ್ಗೆ ಕೆಲ ಕಾಲ ಮೋದಿ ಜತೆ ಕುಶಲೋಪರಿ ಹಂಚಿಕೊಂಡಿದ್ದರು. ಬಳಿಕ ಟ್ವೀಟ್​ ಮಾಡಿದ ಬೋಪಣ್ಣ “ಗೌರವಾನ್ವಿತ ಪ್ರಧಾನಿ ಮೋದಿ ಜಿ ಅವರನ್ನು ಭೇಟಿ ಮಾಡುವ ಸೌಭಾಗ್ಯ ನನಗೆ ಸಿಕ್ಕಿದೆ. ಇದೊಂದು ತುಂಬಾ ವಿನಮ್ರವಾದ ಭೇಟಿ. ನಾನು ವಿಶ್ವದ ನಂ.1 ಆಟಗಾರ ಮತ್ತು ಆಸ್ಟ್ರೇಲಿಯನ್‌ ಓಪನ್ ಗ್ರ್ಯಾಂಡ್ ಸ್ಲಾಮ್ ಚಾಂಪಿಯನ್ ಆಗಲು ಕಾರಣವಾದ ಟೆನಿಸ್‌ ರಾಕೆಟ್ ಅನ್ನು ಮೋದಿ ಅವರಿಗೆ ನೀಡುವುದು ನನ್ನ ಪಾಲಿಗೆ ಗೌರವವಾಗಿದೆ. ನಿಮ್ಮ ಹಾರೈಕೆಯು ನನಗೆ ಸ್ಫೂರ್ತಿ ಮತ್ತು ಪ್ರೋತ್ಸಾಹವನ್ನು ತುಂಬಿದೆ” ಎಂದು ಬರೆದುಕೊಂಡಿದ್ದರು.

Exit mobile version