ನಾಗ್ಪುರ: ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ ಟೆಸ್ಟ್ ಸರಣಿಯ ಮೊದಲ ಪಂದ್ಯ ಸಣ್ಣಪುಟ್ಟ ವಿವಾದಗಳಿಂದಲೇ ಹೆಸರು ಮಾಡುತ್ತಿದೆ. ಅದರೆ, ಹಣಾಹಣಿ ಮಾತ್ರ ರೋಚಕವಾಗಿ ನಡೆಯುತ್ತಿದೆ. ಜಡೇಜಾ (Ravindra Jadeja) ತಮ್ಮ ಕೈಗೆ ಮುಲಾಮು ಹಚ್ಚಿಕೊಂಡಿದ್ದ ವಿಚಾರವನ್ನು ಮ್ಯಾಚ್ ರೆಫರಿ ಆ್ಯಂಡಿ ಪಿಕ್ರಾಫ್ಟ್ ಅಲ್ಲಿಗೆ ಇತ್ಯರ್ಥಗೊಳಿಸಿದ್ದಾರೆ. ರವೀಂದ್ರ ಜಡೇಜಾ ಹಾಗೂ ನಾಯಕ ರೋಹಿತ್ ಶರ್ಮಾ ಅವರನ್ನು ಕರೆಸಿ ಜಡೇಜಾ ಬೌಲಿಂಗ್ ಮಾಡುವ ವೇಳೆ ಕೈಗೆ ಹಚ್ಚಿಕೊಂಡಿರುವುದು ನೋವು ನಿವಾರಕ ಎಂಬುದನ್ನು ಖಾತರಿಪಡಿಸಿ ಪ್ರಕರಣಕ್ಕೆ ತೆರೆ ಎಳೆದಿದ್ದಾರೆ. ಆದರೆ, ಆಸ್ಟ್ರೇಲಿಯಾ ತಂಡದ ಮಾಜಿ ಆಟಗಾರರು ವಿಷಯವನ್ನು ದೊಡ್ಡದಾಗಿಸಲು ನಾನಾ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಇದೀಗ ಆಸೀಸ್ ತಂಡದ ಮಾಜಿ ನಾಯಕ ಮೈಕೆಲ್ ಕ್ಲಾರ್ಕ್ ಸರದಿ. ಜಡೇಜಾ ಮಾಡಿದ್ದು ತಪ್ಪು ಎಂಬುದಾಗಿ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬಿಗ್ ಸ್ಪೋರ್ಟ್ಸ್ ಬ್ರೇಕ್ಫಾಸ್ಟ್ ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ನಾಯಕ ಮೈಕೆಲ್ ಕ್ಲಾರ್ಕ್, ಜಡೇಜಾ ಅವರು ಉತ್ತಮವಾಗಿ ಬೌಲಿಂಗ್ ಮಾಡಿದ್ದಾರೆ. ಈ ವೇಳೆ ಅವರ ಬೆರಳಿಗೆ ಗಾಯವಾಗಿರುವ ಸಾಧ್ಯತೆಗಳಿವೆ. ಅದಕ್ಕಾಗಿ ಅವರು ಮುಲಾಮು ಹಚ್ಚಿಕೊಂಡಿರುವುದು ತಪ್ಪೇನು ಅಲ್ಲ. ಆದರೆ, ನೋವು ನಿವಾರಕವನ್ನು ಬೆರಳಿಗೆ ಹಚ್ಚಿಕೊಳ್ಳುವ ವೇಳೆ ಚೆಂಡನ್ನು ಅಂಪೈರ್ ಕೈಗೆ ಕೊಡಬೇಕಾಗಿತ್ತು. ತಾವೇ ಕೈಯಲ್ಲಿ ಹಿಡಿದುಕೊಂಡು ಮುಲಾಮು ಹಚ್ಚಿಕೊಳ್ಳಬಾರದಿತ್ತು. ಅದರೂ ಅಲ್ಲದಿದ್ದರೆ ಅಂಪೈರ್ ಮುಂದೆಯೇ ನಿಂತು ಮುಲಾಮು ಹಚ್ಚಿಕೊಳ್ಳಬೇಕಾಗಿತ್ತು ಎಂಬುದಾಗಿ ಅವರು ಹೇಳಿದ್ದಾರೆ.
ಜಡೇಜಾ ಅವರು ತಪ್ಪು ಮಾಡಿದ್ದಾರೆ ಅಥವಾ ಮೋಸ ಮಾಡಿದ್ದಾರೆ ಎಂಬುದಾಗಿ ನಾನು ಹೇಳುತ್ತಿಲ್ಲ. ಆದರೆ, ಪ್ಲೇಯಿಂಗ್ ಕಂಡಿಷನ್ ಪ್ರಕಾರ ಆಟಗಾರರು ಔಷಧ ಸೇರಿದಂತೆ ಇನ್ಯಾವುದೇ ವಸ್ತುವನ್ನು ಮೈಗೆ ಹಚ್ಚಿಕೊಳ್ಳುವ ಮೊದಲು ಅಂಪೈರ್ಗೆ ಮಾಹಿತಿ ನೀಡಬೇಕು. ಅವರು ಪಡೆಯುವ ವಸ್ತುವಿನಿಂದ ಆಟಕ್ಕೆ ಯಾವುದೇ ತೊಂದರೆ ಆಗುವುದಿಲ್ಲ ಎಂಬುದನ್ನು ಖಾತರಿಪಡಿಸಿಕೊಳ್ಳಬೇಕು ಎಂದು ಕ್ಲಾರ್ಕ್ ಹೇಳಿದ್ದಾರೆ.
ಇದನ್ನೂ ಓದಿ : Ravindra Jadeja : ನಾಗ್ಪುರ ಪಿಚ್ ಹೆಚ್ಚು ತಿರುವು ಪಡೆಯುತ್ತಿರಲಿಲ್ಲ ಎಂದ ರವೀಂದ್ರ ಜಡೇಜಾ
ಆಸ್ಟ್ರೇಲಿಯಾ ತಂಡದ ಮಾಜಿ ಆಟಗಾರರು ಗುಲ್ಲೆಬ್ಬಿಸುತ್ತಿರುವ ಹೊರತಾಗಿಯೂ ಪ್ರಕರಣ ಅಲ್ಲಿಗೇ ಮುಕ್ತಾಯಗೊಳ್ಳುವ ಸೂಚನೆ ಇದೆ. ಬಿಸಿಸಿಐ ಕೂಡ ಈ ಬಗ್ಗೆ ಸ್ಪಷ್ಟನೆ ನೀಡಿದೆ. ಮ್ಯಾಚ್ ರೆಫರಿ ಕೂಡ ನಿರಾಳತೆ ಮೂಡಿಸಿದ್ದಾರೆ. ಆಸ್ಟ್ರೇಲಿಯಾ ತಂಡದ ಆಟಗಾರು ಕೂಡ ಈ ಬಗ್ಗೆ ಲಿಖಿತ ದೂರನ್ನು ಕೂಡ ದಾಖಲಿಸಿಲ್ಲ.