Site icon Vistara News

Mirabai Chanu: ಮಣಿಪುರದಲ್ಲಿ ಶಾಂತಿ ನೆಲೆಸುವಂತೆ ಮಾಡಿ; ಮೋದಿಗೆ ಕೈ ಮುಗಿದು ಮನವಿ ಮಾಡಿದ ​ಮೀರಾಬಾಯಿ ಚಾನು​

mirabai chanu meet pm modi

ನವದೆಹಲಿ: ಟೋಕಿಯೊ ಒಲಿಂಪಿಕ್ಸ್​ನ ಮಹಿಳೆಯರ ವಿಭಾಗದ ವೇಟ್ ಲಿಫ್ಟಿಂಗ್​ನಲ್ಲಿ ಬೆಳ್ಳಿ ಪದಕ ಗೆದ್ದ ಮೀರಾಬಾಯಿ ಚಾನು(Mirabai Chanu) ಅವರು ಮಣಿಪುರದಲ್ಲಿ(Manipur) ನಡೆಯುತ್ತಿರುವ ಹಿಂಸಾಚಾರವನ್ನು ಆದಷ್ಟು ಬೇಗ ಕೊನೆಗೊಳಿಸುವಂತೆ ಒತ್ತಾಯಿಸಿ ಪ್ರಧಾನಿ ನರೇಂದ್ರ ಮೋದಿ(Prime Minister Narendra Modi) ಅವರಿಗೆ ವಿಡಿಯೊ ಮೂಲಕ ಮನವಿ ಮಾಡಿದ್ದಾರೆ.

“ವಿಶ್ವ ಚಾಂಪಿಯನ್‌ಶಿಪ್ ಮತ್ತು ಏಷ್ಯನ್ ಗೇಮ್ಸ್‌ ತಯಾರಿಗೆ ನಾನು ಪ್ರಸ್ತುತ ಅಮೆರಿಕದಲ್ಲಿ ತರಬೇತಿ ಪಡೆಯುತ್ತಿದ್ದೇನೆ. ಮಣಿಪುರ ನನ್ನ ತವರು ರಾಜ್ಯ. ಈ ಸಂಘರ್ಷ ಯಾವಾಗ ಕೊನೆಗೊಳ್ಳುತ್ತದೆ ಎಂದು ಯಾವಾಗಲೂ ಚಿಂತಿಸುತ್ತಿದ್ದೇನೆ. ಹಿಂಸಾಚಾರಗಳಿಂದಾಗಿ ಈಶಾನ್ಯ ರಾಜ್ಯದ ಕ್ರೀಡಾಪಟುಗಳಿಗೆ ತರಬೇತಿ ಪಡೆದುಕೊಳ್ಳಲು ಮತ್ತು ಇಲ್ಲನ ಜನಸಾಮನ್ಯರಿಗೂ ಜೀವನ ನಡೆಸಲು ತೊಂದರೆಯಾಗುತ್ತಿದೆ. ದಯವಿಟ್ಟು ಈ ಸಮಸ್ಯೆಯನ್ನು ಬಗೆಹರಿಸಬೇಕು. ಸಂಘರ್ಷ ಆರಂಭವಾಗಿ ಮೂರು ತಿಂಗಳು ಕಳೆದಿದೆ. ಆದರೂ ಇಲ್ಲಿ ಶಾಂತಿ ನೆಲೆಸಿಲ್ಲ. ಅನೇಕರು ಜೀವ ಕಳೆದುಕೊಂಡಿದ್ದಾರೆ. ನನ್ನ ರಾಜ್ಯದಲ್ಲಿ ಹಿಂದಿನಂತೆ ಶಾಂತಿ ನೆಲೆಸುವಂತೆ ಮಾಡಿ” ಎಂದು ಪ್ರಧಾನಿ ಮತ್ತು ಗೃಹ ಸಚಿವ ಅಮಿತ್​ ಶಾ(Home Minister Amit Shah) ಮೀರಾಬಾಯಿ ಚಾನು ವಿಡಿಯೊ ಮೂಲಕ ಮನವಿ ಮಾಡಿದ್ದಾರೆ.

ಕಳೆದ ಮೇ 3ರಿಂದ ಮಣಿಪುರದಲ್ಲಿ ಎರಡು ಸಮುದಾಯಗಳಾದ ಮೈಥೇಯಿ ಮತ್ತು ಕುಕಿಗಳ ನಡುವೆ ಜನಾಂಗೀಯ ಘರ್ಷಣೆ ನಡೆಯುತ್ತಿದೆ. ಈಗಾಗಲೇ ಈ ಸಂಘರ್ಷದಿಂದ ಇಲ್ಲಿ 150ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಪರಿಶಿಷ್ಟ ಪಂಗಡ (ಎಸ್‌ಟಿ) ಸ್ಥಾನಮಾನಕ್ಕಾಗಿ ಮೈಥೇಯಿ ಸಮುದಾಯ ಬೇಡಿಕೆಯಿಟ್ಟು ಬೆಟ್ಟದ ಜಿಲ್ಲೆಗಳಲ್ಲಿ ‘ಬುಡಕಟ್ಟು ಒಗ್ಗಟ್ಟಿನ ಮೆರವಣಿಗೆ’ ಆಯೋಜಿಸಿತ್ತು. ಇಲ್ಲಿಂದ ಆರಂಭವಾದ ಗಲಭೆ ಇಡೀ ಮಣಿಪುರದಾದ್ಯಂತ ಹಬ್ಬಿ ಗಲಭೆಗೆ ಕಾರಣವಾಯಿತು. ಸದ್ಯ ಈಗಲೂ ಇಲ್ಲಿ ಪರಿಸ್ಥಿತಿ ತಣ್ಣಗಾಗಿಲ್ಲ.

ಇದನ್ನೂ ಓದಿ Mirabai Chanu | ವೇಟ್​ ಲಿಫ್ಟಿಂಗ್ ವಿಶ್ವ ಚಾಂಪಿಯನ್​ಶಿಪ್​; ಬೆಳ್ಳಿ ಗೆದ್ದ ಮೀರಾಬಾಯಿ ಚಾನು

ಮೈತೆಯಿ ಬಾವುಟ ಪ್ರದರ್ಶಿಸಿದ್ದ ಜೀಕ್ಸನ್ ಸಿಂಗ್

ಸ್ಯಾಫ್ ಫುಟ್‌ಬಾಲ್ ಚಾಂಪಿಯನ್‌ಶಿಪ್​ ಫೈನಲ್‌ ಬಳಿಕ ಭಾರತದ ತಂಡದ ಆಟಗಾರ ಜೀಕ್ಸನ್ ಸಿಂಗ್ ಅವರು ಮೈತೆಯಿ ಬಾವುಟವನ್ನು ತಮ್ಮ ಹೆಗಲಿಗೆ ಸುತ್ತಿಕೊಂಡು ವಿಜಯವೇದಿಕೆಗೆ ಬಂದಿದ್ದರು. ಫೈನಲ್‌ನಲ್ಲಿ ಕುವೈತ್ ತಂಡದ ವಿರುದ್ಧ ಭಾರತ ತಂಡವು ಪೆನಾಲ್ಟಿ ಶೂಟೌಟ್‌ನಲ್ಲಿ ಜಯಿಸಿತ್ತು. ಅದರ ನಂತರ ವೈಯಕ್ತಿಕ ಪದಕ ಗಳಿಸಲು ಬಂದ ಜೀಕ್ಸನ್ ಸಿಂಗ್ ಈ ಬಾವುಟ ಸುತ್ತಿಕೊಂಡಿದ್ದರು. ಇದು ಬಾರಿ ಚರ್ಚೆಗೆ ಕಾರಣವಾಗಿತ್ತು. ಇದೇ ವಿಚಾರವಾಗಿ ಮಾತನಾಡಿದ್ದ ಜೀಕ್ಸನ್ ಸಿಂಗ್, ‘ಪ್ರಿಯ ಅಭಿಮಾನಿಗಳೇ. ಈ ಬಾವುಟದಲ್ಲಿ ಸಂಭ್ರಮಾಚರಣೆ ಮಾಡುವ ಮೂಲಕ ಯಾರ ಮನಸ್ಸಿಗೂ ನೋವುಂಟುಮಾಡುವ ಉದ್ದೇಶ ನನ್ನದಲ್ಲ. ನನ್ನ ತವರು ಮಣಿಪುರವು ಪ್ರಸ್ತುತ ಎದುರಿಸುತ್ತಿರುವ ಪರಿಸ್ಥಿತಿಯನ್ನು ಎಲ್ಲರ ಗಮನಕ್ಕೆ ತರುವುದಷ್ಟೇ ನನ್ನ ಗುರಿ. ಆದಷ್ಟೂ ಬೇಗ ನನ್ನ ಮಣಿಪುರದಲ್ಲಿ ಶಾಂತಿ ನೆಲೆಸಲಿ” ಎಂದು ಮನವಿ ಮಾಡಿದ್ದರು.

Exit mobile version