ದುಬೈ : ICC Test Ranking ಪಟ್ಟಿಯಲ್ಲಿ ಪ್ರಮಾದವೊಂದು ಘಟಿಸಿದ್ದು ಹೆಚ್ಚು ರೇಟಿಂಗ್ ಪಾಯಿಂಟ್ಗಳನ್ನು ಪಡೆದಿರುವ ಆಸ್ಟ್ರೇಲಿಯಾ ತಂಡವನ್ನು ಎರಡನೇ ಸ್ಥಾನಕ್ಕೆ ತಳ್ಳಿ, ಕಡಿಮೆ ರೇಟಿಂಗ್ ಅಂಕಗಳನ್ನು ಹೊಂದಿರುವ ಭಾರತವನ್ನು ನಂಬರ್ ಒನ್ ಸ್ಥಾನಕ್ಕೇರಿಸಿದ ಪ್ರಸಂಗ ನಡೆದಿದೆ. ತಪ್ಪು ಗೊತ್ತಾಗುತ್ತಿದ್ದಂತೆ ಪಟ್ಟಿಯನ್ನು ಸರಿಪಡಿಸಲಾಗಿದೆ. ಹಾಲಿ ವೆಬ್ಸೈಟ್ನಲ್ಲಿ ಸರಿಯಾದ ಮಾಹಿತಿ ಲಭ್ಯವಿದೆ. ಆದರೆ ಭಾರತ ತಂಡ ನಂಬರ್ ಒನ್ ಸ್ಥಾನ ಪಡೆಯಿತು ಎಂದು ತಿಳಿದುಕೊಂಡ ಕ್ರಿಕೆಟ್ ಅಭಿಮಾನಿಗಳು ಸಂಭ್ರಮಾಚರಣೆ ಮಾಡಿದ್ದಾರೆ.
ಐಸಿಸಿ ಟೆಸ್ಟ್ ರ್ಯಾಂಕ್ ಪಟ್ಟಿಯಲ್ಲಿ ಒಟ್ಟು 126 ರೇಟಿಂಗ್ ಅಂಕಗಳನ್ನು ಪಡೆದಿರುವ ಆಸ್ಟ್ರೇಲಿಯಾ ತಂಡ ಮೊದಲ ಸ್ಥಾನ ಪಡೆದುಕೊಂಡಿದೆ. ಭಾರತ 115 ರೇಟಿಂಗ್ ಅಂಕಗಳನ್ನು ಪಡೆದುಕೊಂಡಿದ್ದು ಎರಡನೇ ಸ್ಥಾನದಲ್ಲಿದೆ. ಆದರೆ, ರ್ಯಾಂಕ್ ಪಟ್ಟಿ ಪರಿಷ್ಕೃತಗೊಳಿಸುವ ಸಂದರ್ಭದಲ್ಲಿ ಆಸ್ಟ್ರೇಲಿಯಾ ತಂಡಕ್ಕೆ 111 ರೇಟಿಂಗ್ ಅಂಕಗಳನ್ನು ನೀಡಲಾಗಿದೆ. ಹೀಗಾಗಿ 115 ರೇಟಿಂಗ್ ಅಂಕಗಳನ್ನು ಹೊಂದಿದ್ದ ಭಾರತ ಮೊದಲ ಸ್ಥಾನಕ್ಕೆ ಬಂದಿದೆ. ವಿಷಯ ಗೊತ್ತಾಗುತ್ತಿದ್ದಂತೆ ಮತ್ತೆ ಆಸ್ಟ್ರೇಲಿಯಾ ತಂಡಕ್ಕೆ ಅಂಕಗಳನ್ನು ಸರಿಪಡಿಸಿದ್ದಾರೆ.
ಐಸಿಸಿ ತಪ್ಪು ಎಸಗಿದ್ದೇನೋ ಸರಿ. ಆದರೆ, ಭಾರತಕ್ಕೂ ನಂಬರ್ ಒನ್ ಸ್ಥಾನ ಪಡೆಯುವ ಎಲ್ಲ ಅವಕಾಶಗಳೂ ಇವೆ. ಆಸ್ಟ್ರೇಲಿಯಾ ತಂಡದ ಭಾರತಕ್ಕೆ ಟೆಸ್ಟ್ ಸರಣಿಗಾಗಿ ಪ್ರವಾಸ ಬರಲಿದೆ. ಈ ಸರಣಿಯಲ್ಲಿ ಭಾರತ ಗೆಲುವು ಸಾಧಿಸಿದರೆ ನಂಬರ್ ಒನ್ ಸ್ಥಾನವನ್ನು ಅಲಂಕರಿಸಲಿದೆ.
ಇದನ್ನೂ ಓದಿ | Test Ranking | ಕಳೆದ ಏಳು ವರ್ಷಾಂತ್ಯಕ್ಕೆ ಟೀಮ್ ಇಂಡಿಯಾದ ಟೆಸ್ಟ್ ರ್ಯಾಂಕಿಂಗ್ ಈ ರೀತಿ ಇತ್ತು