ಕೋಲ್ಕೊತಾ : ಮುಂಬರುವ ವಿಶ್ವ ಕಪ್‌ಗೆ ಬಿಸಿಸಿಐ ಸೆಪ್ಟೆಂಬರ್ ೧೨ರಂದು ಭಾರತ ತಂಡವನ್ನು ಪ್ರಕಟಿಸಿದೆ. ವೇಗದ ಬೌಲಿಂಗ್ ವಿಭಾಗದಲ್ಲಿ ಜಸ್‌ಪ್ರಿತ್ ಬುಮ್ರಾ, ಹರ್ಷಲ್ ಪಟೇಲ್, ಭುವನೇಶ್ವರ್ ಕುಮಾರ್ ಹಾಗೂ ಅರ್ಶ್‌ದೀಪ್ ಸಿಂಗ್ ಅವರನ್ನು ಆಯ್ಕೆ ಮಾಡಲಾಗಿದೆ. ಆದರೆ, ಆಸ್ಟ್ರೇಲಿಯಾ ತಂಡದ ಮಾಜಿ ವೇಗದ ಬೌಲರ್ ಮಿಚೆಲ್ ಜಾನ್ಸನ್ ಪ್ರಕಾರ, ವೇಗದ ಬೌಲರ್‌ಗಳ ವಿಚಾರದಲ್ಲಿ ಭಾರತ ಅಪಾಯ ತಂದುಕೊಂಡಿದೆ.
ಲೆಜೆಂಡ್ಸ್ ಕ್ರಿಕೆಟ್ ಲೀಗ್‌ನಲ್ಲಿ ಪಾಲ್ಗೊಳ್ಳುವುದಕ್ಕಾಗಿ ಮಿಚೆಲ್ ಜಾನ್ಸನ್ ಅವರು ಭಾರತಕ್ಕೆ ಪ್ರವಾಸ ಬಂದಿದ್ದಾರೆ. ಈ ವೇಳೆ ಮುಂದಿನ ವಿಶ್ವ ಕಪ್‌ನ ಪರಿಸ್ಥಿತಿಯ ಬಗ್ಗೆ ಮಾತನಾಡಿದ್ದಾರೆ. ಭಾರತ ತಂಡವನ್ನು ಉಲ್ಲೇಖಿಸಿ ವೇಗಿಗಳ ಆಯ್ಕೆ ವಿಚಾರದಲ್ಲಿ ಬಿಸಿಸಿಐ ಮಾಡಿರುವ ರಣತಂತ್ರ ಸರಿಯಾಗಿಲ್ಲ ಎಂಬುದಾಗಿ ಹೇಳಿದ್ದಾರೆ.
“ಭಾರತ ತಂಡದಲ್ಲಿ ನಾಲ್ವರು ಸ್ಪೆಷಲಿಸ್ಟ್ ಬೌಲರ್‌ಗಳು ಮಾತ್ರ ಇದ್ದಾರೆ. ಜತೆಗೆ ವೇಗದ ಬೌಲಿಂಗ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರನ್ನು ನೆಚ್ಚಿಕೊಳ್ಳಲಾಗಿದೆ. ಆದರೆ, ಆಸ್ಟ್ರೇಲಿಯಾದ ಕೆಲವು ಪಿಚ್‌ಗಳಿಗೆ ಐದು ಸ್ಪೆಷಲಿಸ್ಟ್ ಬೌಲರ್‌ಗಳು ಬೇಕಾಗುತ್ತದೆ. ಇದರಿಂದ ತಂಡದ ಸಂಯೋಜನೆ ರೂಪಿಸಲು ಟೀಮ್ ಮ್ಯಾನೇಜ್ಮೆಂಟ್‌ಗೆ ಅನನುಕೂಲವಾಗಬಹುದು. ಐವರು ವೇಗಿಗಳ ಜತೆ ಒಬ್ಬರು ಸ್ಪಿನ್ ಬೌಲರ್ ಹಾಗೂ ಇನ್ನೊಬ್ಬರು ಸ್ಪಿನ್ ಬೌಲಿಂಗ್ ಆಲ್‌ರೌಂಡರ್ ಬೇಕಾಗುತ್ತದೆ,” ಎಂದು ತಮ್ಮ ಹೇಳಿಕೆಗೆ ಸ್ಪಷ್ಟನೆ ಕೊಟ್ಟಿದ್ದಾರೆ.
“ಭಾರತ ತಂಡ ಇಬ್ಬರು ವೇಗದ ಬೌಲರ್‌ಗಳು, ಇಬ್ಬರು ಸ್ಪಿನ್ನರ್ ಹಾಗೂ ಒಬ್ಬರು ವೇಗದ ಬೌಲಿಂಗ್ ಆಲ್‌ರೌಂಡರ್ ಅನ್ನು ಕಣಕ್ಕೆ ಇಳಿಸುವ ಉದ್ದೇಶ ಹೊಂದಿದ್ದಾರೆ. ಇದು ಆಸ್ಟ್ರೇಲಿಯಾ ಪರಿಸ್ಥಿತಿಗೆ ಸೂಕ್ತ ಸಂಯೋಜನೆ ಎನಿಸದು,” ಎಂದು ಜಾನ್ಸನ್ ಹೇಳಿದರು.
ಇದೇ ವೇಳೆ ಅವರು ಎಲ್ಲ ಬೌಲರ್‌ಗಳು ೧೪೫ ಕಿ.ಮೀಗಿಂತ ಅಧಿಕ ವೇಗದಲ್ಲಿ ಬೌಲಿಂಗ್ ಮಾಡಬೇಕು ಎಂಬುದು ನಿರೀಕ್ಷೆ ಮಾಡುವುದು ಸರಿಯಲ್ಲ ಎಂದರು. ಮಧ್ಯಮ ವೇಗವೂ ಫಲ ಕೊಡುತ್ತದೆ ಎಂದು ಉದಾಹರಣೆ ಸಮೇತ ವಿವರಿಸಿದರು.
ಇದನ್ನೂ ಓದಿ | T20 World Cup | ಬುಮ್ರಾ, ಹರ್ಷಲ್ ವಾಪಸ್; ಟಿ20 ವಿಶ್ವ ಕಪ್‌ಗೆ 15 ಸದಸ್ಯರ ಟೀಮ್ ಇಂಡಿಯಾ ಪ್ರಕಟ