ಸಿಡ್ನಿ: ಪ್ರವಾಸಿ ಪಾಕಿಸ್ತಾನ ವಿರುದ್ಧದ ಟೆಸ್ಟ್ ಸರಣಿಯ ಬಳಿಕ ಆಸ್ಟ್ರೇಲಿಯಾದ ಹಿರಿಯ ಆಟಗಾರ ಡೇವಿಡ್ ವಾರ್ನರ್(David Warner) ಅವರು ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳುವುದು ಬಹುತೇಕ ಖಚಿತವಾಗಿದೆ. ಇದೇ ಕಾರಣಕ್ಕೆ ವಾರ್ನರ್ ಅವರನ್ನು ಮೊದಲ ಟೆಸ್ಟ್ ಪಂದ್ಯಕ್ಕೇ ಮಾತ್ರ ಆಯ್ಕೆ ಮಾಡಲಾಗಿದೆ. ಈ ಪಂದ್ಯ ಸಿಡ್ನಿಯಲ್ಲಿ ನಡೆಯಲಿದೆ.
2023ರಲ್ಲಿಯೇ ವಾರ್ನರ್ ಅವರು ಮುಂದಿನ ವರ್ಷ ತವರಿನಲ್ಲಿ ಕೊನೆಯ ಟೆಸ್ಟ್ ಆಡಬೇಕೆಂಬ ಬಯಕೆಯನ್ನು ವ್ಯಕ್ತಪಡಿಸಿದ್ದರು. ಅದರಂತೆ ಪಾಕ್ ವಿರುದ್ಧ ನಡೆಯುವ ಮೊದಲ ಟೆಸ್ಟ್ ಪಂದ್ಯ ಅವರಿಗೆ ಕೊನೆಯ ಪಂದ್ಯವಾಗುವ ಸಾಧ್ಯತೆ ಇದೆ. ವಾರ್ನರ್ ಅವರಿಗೆ ವಿದಾಯ ಪಂದ್ಯವನ್ನು ಏರ್ಪಡಿಸಲಾಗಿದೆ ಎನ್ನುವ ಸುದ್ದಿ ಹೊರಬಿದ್ದದ್ದೇ ತಡ ತನ್ನದೇ ದೇಶದ ಆಟಗಾರ ಮಿಚೆಲ್ ಜಾನ್ಸನ್ ಅವರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.
ಮೋಸದಾಟದಲ್ಲಿ ಭಾಗಿಯಾಗಿದ್ದ ವಾರ್ನರ್ ಅವರಿಗೆ ವಿದಾಯ ಪಂದ್ಯವೊಂದನ್ನು ಆಯೋಜಿಸುವುದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದ್ದಾರೆ. ಡೇವಿಡ್ ವಾರ್ನರ್ ಅವರು ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯ ವೇಳೆ ಸ್ಯಾಂಡ್‌ಪೇಪರ್ ಗೇಟ್ ಪ್ರಕರಣದಲ್ಲಿ ಸಿಕ್ಕಿಬಿದ್ದು ನಿಷೇಧಕ್ಕೊಳಗಾಗಿದ್ದರು. ಇದು ಆಸ್ಟ್ರೇಲಿಯಾದ ಕ್ರಿಕೆಟ್ ಇತಿಹಾಸ ದಲ್ಲೇ ಅತೀ ದೊಡ್ಡ ಹಗರಣ ಎಂಬ ಕುಖ್ಯಾತಿ ಪಡೆದಿತ್ತು. ಇದೇ ಕಾರಣಕ್ಕೆ ಮಿಚೆಲ್ ಜಾನ್ಸನ್ ಅವರು ಮೋಸಗಾರನಿಗೆ ವಿದಾಯ ಪಂದ್ಯ ಏರ್ಪಡಿಸುವುದು ಕ್ರಿಕೆಟ್ ಆಸ್ಟ್ರೇಲಿಯಾದ ವಿಪರ್ಯಾಸ ಎಂದಿದ್ದಾರೆ.
ವಿಶ್ವಕಪ್ನಲ್ಲಿ ಅಮೋಘ ಬ್ಯಾಟಿಂಗ್
37 ವರ್ಷದ ಡೇವಿಡ್ ವಾರ್ನರ್ ಈ ಬಾರಿಯ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ಪರ ಗರಿಷ್ಠ ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದರು. 11 ಪಂದ್ಯಗಳಲ್ಲಿ ಪಾಕಿಸ್ತಾನ ಮತ್ತು ನೆದರ್ಲೆಂಡ್ಸ್ ವಿರುದ್ಧ ಶತಕ ಬಾರಿಸಿದ್ದರು. ಉಳಿದಂತೆ ಎರಡು ಅರ್ಧಶತಕ ಸಹಿತ ಒಟ್ಟಾರೆ 535 ರನ್ ಬಾರಿಸಿದ್ದರು. ಆಸ್ಟ್ರೇಲಿಯಾ ಪರ ಒಟ್ಟು 29 ಏಕದಿನ ವಿಶ್ವಕಪ್ ಪಂದ್ಯಗಳನ್ನು ಆಡಿರುವ ವಾರ್ನರ್, 6 ಶತಕ ಮತ್ತು 5 ಅರ್ಧಶತಕ ಸಹಿತ 1,527 ರನ್ ಗಳಿಸಿದ್ದಾರೆ.
ಆಸ್ಟ್ರೇಲಿಯಾ ಪರ ಟೆಸ್ಟ್ ಕ್ರಿಕೆಟ್‌ನಲ್ಲಿ 109 ಪಂದ್ಯಗಳನ್ನು ಆಡಿರುವ ವಾರ್ನರ್, 199 ಇನಿಂಗ್ಸ್‌ಗಳಲ್ಲಿ 8,487 ರನ್ ಗಳಿಸಿದ್ದಾರೆ. ಇದರಲ್ಲಿ 3 ದ್ವಿಶತಕ, 25 ಶತಕ ಮತ್ತು 36 ಅರ್ಧಶತಗಳು ಒಳಗೊಂಡಿದೆ. ಏಕದಿನ ಮಾದರಿಯಲ್ಲಿ 161 ಪಂದ್ಯಗಳಲ್ಲಿ ಆಡಿ, 22 ಶತಕ ಹಾಗೂ 33 ಅರ್ಧಶತಕ ಸಹಿತ 6,932 ರನ್ ಗಳಿಸಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ 99 ಪಂದ್ಯ ಆಡಿ, 1 ಶತಕ ಹಾಗೂ 24 ಅರ್ಧಶತಕದ ನರೆವಿನಿಂದ 2,894 ರನ್ ಕಲೆಹಾಕಿದ್ದಾರೆ.
ಇದನ್ನೂ ಓದಿ David Warner: ನಿವೃತ್ತಿ ಎಂದವರಿಗೆ ತಕ್ಕ ಉತ್ತರ ನೀಡಿದ ಡೇವಿಡ್ ವಾರ್ನರ್
“2024 ನನ್ನ ಅಂತಾರಾಷ್ಟ್ರೀಯ ಕ್ರಿಕೆಟ್ನ ಕೊನೇ ವರ್ಷವಾಗಿದೆ. ಅಮೆರಿಕ ಹಾಗೂ ವೆಸ್ಟ್ ಇಂಡೀಸ್ ಆತಿಥ್ಯದಲ್ಲಿ ನಡೆಯುವ ಟಿ20 ವಿಶ್ವ ಕಪ್ನಲ್ಲಿ ಚಾಂಪಿಯನ್ ಆಗುವುದೇ ನನ್ನ ಕನಸು. ಆದರೆ, ನಾನು ತಂಡದಲ್ಲಿ ಉಳಿಯುವುದು ಆಯ್ಕೆ ಮಂಡಳಿಯ ನಿರ್ಧಾರದ ಮೇಲೆ ನಿಂತಿದೆ” ಎಂಬುದಾಗಿ ವಾರ್ನರ್ ಹಿಂದೊಮ್ಮೆ ಸಂದರ್ಶನವೊಂದರಲ್ಲಿ ಹೇಳಿದ್ದರು.
ಪಾಕ್ ಮೊದಲ ಟೆಸ್ಟ್ಗೆ ಆಸ್ಟ್ರೇಲಿಯಾ ತಂಡ
ಪ್ಯಾಟ್ ಕಮಿನ್ಸ್ (ನಾಯಕ), ಸ್ಕಾಟ್ ಬೋಲ್ಯಾಂಡ್, ಅಲೆಕ್ಸ್ ಕ್ಯಾರಿ, ಕ್ಯಾಮರಾನ್ ಗ್ರೀನ್, ಜೋಶ್ ಹೇಝಲ್‌ವುಡ್, ಟ್ರ್ಯಾವಿಸ್ ಹೆಡ್, ಉಸ್ಮಾನ್ ಖ್ವಾಜಾ, ಮಾರ್ನಸ್ ಲಬುಶೇನ್, ನಥನ್ ಲಿಯಾನ್, ಮಿಚೆಲ್ ಮಾರ್ಷ್, ಲ್ಯಾನ್ಸ್ ಮಾರಿಸ್, ಸ್ಟೀವನ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಡೇವಿಡ್ ವಾರ್ನರ್.