ನವದೆಹಲಿ: ಆಸ್ಟ್ರೇಲಿಯಾದ ಸ್ಟಾರ್ ವೇಗಿ ಮಿಚೆಲ್ ಸ್ಟಾರ್ಕ್(Mitchell Starc) ಅವರು ನೆದರ್ಲೆಂಡ್ಸ್ ವಿರುದ್ಧದ ಪಂದ್ಯದಲ್ಲಿ ಒಂದು ವಿಕೆಟ್ ಕೀಳುವ ಮೂಲಕ ಏಕದಿನ ವಿಶ್ವಕಪ್(icc world cup 2023) ಪಂದ್ಯಗಳಲ್ಲಿ ಅತಿಹೆಚ್ಚು ಬೌಲ್ಡ್ ಮೂಲಕ ವಿಕೆಟ್ ಪಡೆದ ಮಾಜಿ ವೇಗಿ ವಾಸಿಂ ಅಕ್ರಮ್(wasim akram) ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ.
ಅರುಣ್ ಜೇಟ್ಲಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮಿಚೆಲ್ ಸ್ಟಾರ್ಕ್ ಅವರು ನೆದರ್ಲೆಂಡ್ಸ್ನ ಮ್ಯಾಕ್ಸ್ ಒ’ಡೌಡ್ ಅವರನ್ನು ಕ್ಲೀನ್ ಬೌಲ್ಡ್ ಮಾಡುವ ಮೂಲಕ ವಾಸಿಂ ಅಕ್ರಮ್(wasim akram) ಅವರ 25 ಕ್ಲೀನ್ ಬೌಲ್ಡ್ ದಾಖಲೆಯನ್ನು ಸರಿಗಟ್ಟಿದರು. ಆದರೆ ವಿಶ್ವಕಪ್ನಲ್ಲಿ ಅತ್ಯಧಿಕ ವಿಕೆಟ್ ಕಿತ್ತ ಸಾಧಕರ ಪಟ್ಟಿಯಲ್ಲಿ ವಾಸಿಂ ಅಕ್ರಮ್ ಅವರನ್ನು ಹಿಂಕ್ಕಿದರು. ವಾಸಿಂ ಅಕ್ರಮ್ ಅವರು 1987-2003 ರವರೆಗೆ ವಿಶ್ವಕಪ್ ಆಡಿ 55 ವಿಕೆಟ್ ಕಿತ್ತಿದ್ದರು. ಆದರೆ ಸ್ಟಾರ್ಕ್ ಅವರು ಕೇವಲ 23 ಪಂದ್ಯಗಳನ್ನು ಆಡಿ 56 ವಿಕೆಟ್ ಕಿತ್ತು ಅಕ್ರಮ್ ದಾಖಲೆಯನ್ನು ಮುರಿದರು.
ಮಾಲಿಂಗ ದಾಖಲೆ ಸರಿಗಟ್ಟಿದ ಸ್ಟಾರ್ಕ್
ಇದೇ ವೇಳೆ ಮಿಚೆಲ್ ಮಾರ್ಷ್ ಅವರು ವಿಶ್ವಕಪ್ನಲ್ಲಿ ಅತ್ಯಧಿಕ ವಿಕೆಟ್ ಕಿತ್ತ ಲಸಿತ ಮಾಲಿಂಗ ಅವರ ದಾಖಲಯನ್ನೂ ಕೂಡ ಸರಿಗಟ್ಟಿದರು. ಯಾರ್ಕರ್ ಕಿಂಗ್ ಲಂಕಾದ ಲಸಿತ ಮಾಲಿಂಗ ಅವರು 2007-2019ರ ತನಕ ವಿಶ್ವಕಪ್ ಆಡಿ 56 ವಿಕೆಟ್ ಕಿತ್ತಿದ್ದಾರೆ. ಈ ಮೂಲಕ ಅತ್ಯಧಿಕ ವಿಕೆಟ್ ಪಡೆದ ಬೌಲರ್ಗಳ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿದ್ದರು. ಇದೀಗ ಸ್ಟಾರ್ಕ್ ಕೂಡ 56 ವಿಕೆಟ್ ಪಡೆದು ಮಾಲಿಂಗ್ ದಾಖಲೆಯನ್ನು ಸರಿದೂಗಿಸಿದ್ದಾರೆ. ಇನ್ನೊಂದು ವಿಕೆಟ್ ಪಡೆದರೆ ಮಾಲಿಂಗ್ ದಾಖಲೆ ಪತನಗೊಳ್ಳಲಿದೆ. ಮಾಲಿಂಗ ಅವರು 18 ಬಾರಿ ಬೌಲ್ಡ್ ಮೂಲಕ ವಿಕೆಟ್ ಕಿತ್ತಿದ್ದಾರೆ.
ಗ್ಲೆನ್ ಮೆಕ್ಗ್ರಾತ್ಗೆ ಮೊದಲ ಸ್ಥಾನ
ಆಸ್ಟ್ರೇಲಿಯಾದ ಮಾಜಿ ವೇಗಿ ಗ್ಲೆನ್ ಮೆಕ್ಗ್ರಾತ್(Glenn McGrath) ಅವರು ವಿಶ್ವಕಪ್ ಟೂರ್ನಿಯಲ್ಲಿ ಅತ್ಯಧಿಕ ವಿಕೆಟ್ ಪಡೆದ ಆಟಗಾರನಾಗಿದ್ದಾರೆ. 1996-2007ರ ತನಕ ವಿಶ್ವಕಪ್ ಆಡಿದ ಸಾಧನೆ ಇವರದ್ದು. ಅಲ್ಲದೆ ಮೂರು ಬಾರಿಯ ವಿಶ್ವಕಪ್ ವಿಜೇತ ತಂಡದ ಸದಸ್ಯ ಎಂಬ ಹಿರಿಮೆಯೂ ಇವರ ಪಾಲಿಗಿದೆ. 39 ವಿಶ್ವಕಪ್ ಪಂದ್ಯ ಆಡಿರುವ ಅವರು 1955 ಬಾಲ್ ಎಸೆದು 71 ವಿಕೆಟ್ ಕೆಡವಿದ್ದಾರೆ. 42 ಮೇಡನ್ ಒಳಗೊಂಡಿದೆ. 15 ರನ್ಗೆ 7 ವಿಕೆಟ್ ಕಿತ್ತದ್ದು ವೈಯಕ್ತಿಕ ಗರಿಷ್ಠ ಸಾಧನೆಯಾಗಿದೆ.
ದಿಗ್ಗಜ ಕ್ರಿಕೆಟಿಗ ಮುತ್ತಯ್ಯ ಮುರಳೀಧರನ್ ಅವರು ವಿಶ್ವಕಪ್ನಲ್ಲಿ ಅತ್ಯಧಿಕ ವಿಕೆಟ್ ಪಡೆದ ಬೌಲರ್ಗಳ ಪಟ್ಟಿಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಮುರಳೀಧರನ್ 1996-2011ರ ವರೆಗೆ ವಿಶ್ವಕಪ್ ಆಡಿ 68 ವಿಕೆಟ್ ಪಡೆದಿದ್ದಾರೆ. ಸ್ಟಾರ್ಕ್ ಅವರು ಇನ್ನು 13 ವಿಕೆಟ್ ಕಿತ್ತರೆ ಮುರಳೀಧರನ್ ದಾಝಲೆಯನ್ನು ಮುರಿಯಬಹುದು. ಮುರಳೀಧರನ್ ಅವರು 17 ಬಾರಿ ಬೌಲ್ಡ್ ಮೂಲಕ ವಿಕೆಟ್ ಕಿತ್ತಿದ್ದಾರೆ.
ಪಂದ್ಯ ಗೆದ್ದ ಆಸ್ಟ್ರೇಲಿಯಾ
ದೆಹಲಿಯ ಅರುಣ್ ಜೇಟ್ಲಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯಾ, ಆರಂಭಕಾರ ಡೇವಿಡ್ ವಾರ್ನರ್(104) ಮತ್ತು ಮಧ್ಯಮ ಕ್ರಮಾಂಕದ ಆಟಗಾರ ಗ್ಲೆನ್ ಮ್ಯಾಕ್ಸ್ವೆಲ್(106) ಅವರ ದಾಖಲೆಯ ಶತಕದ ನೆರವಿನಿಂದ ನಿಗದಿತ 50 ಓವರ್ಗಳಲ್ಲಿ 8 ವಿಕೆಟ್ಗೆ 399 ರನ್ ಬಾರಿಸಿತು. ಬೃಹತ್ ಮೊತ್ತವನ್ನು ಕಂಡು ಕಂಗಾಲಾದ ನೆದರ್ಲೆಂಡ್ಸ್ 21 ಓವರ್ಗಳಲ್ಲಿ 90 ರನ್ಗೆ ಸರ್ವಪತನ ಕಂಡಿತು. ಆಸ್ಟ್ರೇಲಿಯಾ 309 ರನ್ಗಳ ಗೆಲುವು ಸಾಧಿಸಿತು.