ಇಂದೋರ್: ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಬಾರ್ಡರ್ ಗವಾಸ್ಕರ್ ಟ್ರೋಫಿಯ (INDvsAUS) ಮೂರನೇ ಪಂದ್ಯ ಬುಧವಾರ (ಮಾರ್ಚ್ 1) ಆರಂಭವಾಗಲಿದೆ. ಎರಡು ಪಂದ್ಯಗಳಲ್ಲಿ ವಿಜಯ ಸಾಧಿಸಿರುವ ಭಾರತ ತಂಡ ಸರಣಿಯಲ್ಲಿ 2-0 ಮುನ್ನಡೆ ಪಡೆದಿರುವ ಕಾರಣ ಮೂರನೇ ಪಂದ್ಯಕ್ಕೆ ಹೆಚ್ಚು ಕಿಮ್ಮತ್ತು ಬಂದಿದೆ. ಈ ಪಂದ್ಯ ಡ್ರಾ ಆದರೂ ಸರಣಿ ಭಾರತದ ವಶವಾಗಲಿದೆ. ಹೀಗಾಗಿ ಹೇಗಾದರೂ ಮಾಡಿ ಗೆಲ್ಲುವ ಯೋಜನೆಯೊಂದಿಗೆ ಪ್ರವಾಸಿ ಆಸ್ಟ್ರೇಲಿಯಾ ತಂಡ ಕಣಕ್ಕೆ ಇಳಿಯಲಿದೆ. ಆದರೆ, ಆ ತಂಡ ಗಾಯದ ಸಮಸ್ಯೆಯಿಂದ ಇನ್ನೂ ಸುಧಾರಿಸಿಕೊಂಡಿಲ್ಲ. ತಂಡದ ಪ್ರಮುಖ ಬೌಲರ್ ಮಿಚೆಲ್ ಸ್ಟಾರ್ಕ್ ಪೂರ್ಣ ಫಿಟ್ ಆಗದ ಕಾರಣ ಮುಂದಿನ ಪಂದ್ಯದಲ್ಲಿ ಆಡುವುದು ಅನುಮಾನ ಎನಿಸಿದೆ.
ತಂಡದ ನಾಯಕ ಹಾಗೂ ವೇಗದ ಬೌಲರ್ ಪ್ಯಾಟ್ ಕಮಿನ್ಸ್ ತಾಯಿಯ ಅನಾರೋಗ್ಯದ ಹಿನ್ನೆಲೆಯಲ್ಲಿ ತವರಿಗೆ ವಾಪಸಾಗಿದ್ದಾರೆ. ಹೀಗಾಗಿ ಪ್ರಮುಖ ವೇಗಿಯೊಬ್ಬರ ಅಗತ್ಯ ತಂಡಕ್ಕಿದೆ. ಅದರೆ, ಮಿಚೆಲ್ ಸ್ಟಾರ್ಕ್ ಇನ್ನೂ ಫಿಟ್ ಆಗಿಲ್ಲ ಎಂಬುದು ಪ್ರವಾಸಿ ತಂಡಕ್ಕೆ ಆತಂಕ ತಂದಿದೆ. ಮತ್ತೊಬ್ಬ ವೇಗಿ ಜೋಶ್ ಹೇಜಲ್ವುಡ್ ಕೂಡ ಗಾಯದ ಸಮಸ್ಯೆಯಿಂದ ಸುಧಾರಿಸಿಕೊಳ್ಳದ ಕಾರಣ ಭಾರತಕ್ಕೆ ಪ್ರವಾಸ ಬಂದಿಲ್ಲ.
ನಾನು ಇನ್ನೂ ನೂರು ಪ್ರತಿಶತ ಗುಣಮುಖನಾಗಿಲ್ಲ. ಕೆಲವೊಂದು ಸಲ ನನಗೆ ಸರಿಯಾಗಿ ಆಡಲು ಸಾಧ್ಯವಾಗುತ್ತಿಲ್ಲ. ಆದರೂ ಆಡಬಲ್ಲೆ ಎಂಬ ವಿಶ್ವಾಸವಿದೆ ಎಂದು ಸ್ಟಾರ್ಕ್ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ : IND VS AUS: ಮೂರನೇ ಟೆಸ್ಟ್ ಪಂದ್ಯದಿಂದ ಹೊರಗುಳಿದ ಪ್ಯಾಟ್ ಕಮಿನ್ಸ್; ಸ್ಟೀವನ್ ಸ್ಮಿತ್ಗೆ ನಾಯಕತ್ವ
ನಾನು ಅತಿವೇಗದಲ್ಲಿ ಬೌಲಿಂಗ್ ಮಾಡಬಲ್ಲೆ. ಸ್ವಲ್ಪ ನೋವಿನೊಂದಿಗೆ ಹಲವಾರು ಸಂದರ್ಭಗಳಲ್ಲಿ ನಾನು ಆಡಿದ್ದೇನೆ. ಒಂದು ವೇಳೆ ಫುಲ್ ಫಿಟ್ ಆಗಿದ್ದಾಗ ಮಾತ್ರ ಅಡುತ್ತೇನೆ ಎಂದು ಅಂದಕೊಂಡರೆ 10ರಿಂದ 15 ಟೆಸ್ಟ್ ಪಂದ್ಯಗಳಲ್ಲಿ ಮಾತ್ರ ಆಡಲು ಸಾಧ್ಯ ಎಂದು ಸ್ಟಾರ್ಕ್ ಹೇಳಿದ್ದಾರೆ.