Site icon Vistara News

AUS vs SL: ಎರಡು ಬಾರಿ ಮಂಕಡಿಂಗ್​ ಔಟ್ ನಿರಾಕರಿಸಿ ಕ್ರೀಡಾಸ್ಫೂರ್ತಿ ಮೆರೆದ ಸ್ಟಾರ್ಕ್​

Mitchell Starc nearly ran out Kusal Perera

ಲಕ್ನೋ: ಶ್ರೀಲಂಕಾ(AUS vs SL) ವಿರುದ್ಧದ ಪಂದ್ಯದಲ್ಲಿ ಆಸೀಸ್​ ಆಟಗಾರ ಮಿಚೆಲ್ ಸ್ಟಾರ್ಕ್(Mitchell Starc)​ ತೋರಿದ ಕ್ರೀಡಾಸ್ಫೂರ್ತಿಗೆ ಎದುರಾಳಿ ತಂಡದ ಆಟಗಾರರು ಮಾತ್ರವಲ್ಲದೆ ನೆಟ್ಟಿಗರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಎರಡು ಬಾರಿ ಮಂಕಡಿಂಗ್​ ಔಟ್ ಮಾಡಲು ಅವಕಾಶವಿದ್ದರೂ ಸ್ಟಾಕ್​ ಅವರು ಇದನ್ನು ಮಾಡದೆ ಕೇವಲ ಎಚ್ಚರಿಕೆ ಮಾತ್ರ ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಶ್ರೀಲಂಕಾದ ಬ್ಯಾಟಿಂಗ್​ ವೇಳೆ ಇನಿಂಗ್ಸ್‌ನ ಮೊದಲ ಓವರ್‌ನ ನಾಲ್ಕನೇ ಎಸೆತದಲ್ಲಿ ಸ್ಟಾರ್ಕ್ ಬೌಲಿಂಗ್​ ನಡೆಸುವ ಮುನ್ನವೇ ಕುಶಾಲ್ ಪೆರೇರಾ(Kusal Perera) ಕ್ರೀಸ್​ ಬಿಟ್ಟರು ಮುಂದೆ ಸಾಗಿದರು. ಈ ವೇಳೆ ಸ್ಟಾರ್ಕ್​ ಔಟ್​ ಮಾಡುವ ಬದಲು ಎಚ್ಚರಿಕೆ ಮಾತ್ರ ನೀಡಿದರು. ಆದರೆ ಮತ್ತೆ ಪೆರೇರಾ ಐದನೇ ಓವರ್‌ನ ಕೊನೆಯ ಎಸೆತದಲ್ಲಿಯೂ ಇದೇ ರೀತಿ ಮಾಡಿದರು. ಇದನ್ನು ಕೂಡ ಸ್ಟಾರ್ಕ್​ ಔಟ್​ ಮಾಡಲಿಲ್ಲ. ಕೇವಲ ಎಚ್ಚರಿಕೆಯನ್ನಷ್ಟೇ ನೀಡಿದರು. ಅವರ ಈ ಕ್ರೀಡಾಸ್ಫೂರ್ತಿಗೆ ನೆಟ್ಟಿಗರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಏನಿದು ಮಂಕಡಿಂಗ್​ ಔಟ್​

ಕ್ರಿಕೆಟ್‌ ಆಟದಲ್ಲಿ ಬೌಲರ್‌ ಒಬ್ಬ ಚೆಂಡನ್ನು ಬ್ಯಾಟರ್​ನತ್ತ ಎಸೆಯುವ ಮೊದಲೇ ನಾನ್‌ ಸ್ಟ್ರೈಕ್‌ ನಲ್ಲಿರುವ ಬ್ಯಾಟರ್​ ಕ್ರೀಸ್‌ ಬಿಟ್ಟಿದ್ದರೆ ಆಗ ಬೌಲರ್‌ ಆತನನ್ನು ರನೌಟ್‌ ಮಾಡುವ ಅವಕಾಶವನ್ನು ಕ್ರಿಕೆಟ್‌ ಕಾನೂನಿನ 41.46 ನಿಯಮ ನೀಡುತ್ತದೆ. ನಾನ್‌ ಸ್ಟ್ರೈಕ್​ನಲ್ಲಿರುವ ಬ್ಯಾಟರ್​ ಒಬ್ಬನನ್ನು ಆತನ ಅರಿವಿಗೆ ಬರದಂತೆ ರನೌಟ್‌ ಮಾಡುವ ವಿಧಾನ ಇದಾಗಿದೆ. ಈ ಅವಕಾಶ ಆ ಓವರ್‌ ಬೌಲಿಂಗ್‌ ಮಾಡುತ್ತಿರುವ ಬೌಲರ್​ಗೆ ಮಾತ್ರವೇ ಇರುತ್ತದೆ. ಮತ್ತು ಇದು ಸಂಪೂರ್ಣವಾಗಿ ಬೌಲರೊಬ್ಬನ ವಿವೇಚನೆಗೆ ಬಿಟ್ಟಿರುವ ವಿಚಾರವಾಗಿರುತ್ತದೆ.

ಇದನ್ನೂ ಓದಿ David Warner: ಮಳೆಯ ಮಧ್ಯೆಯೂ ಮೈದಾನ ಸಿಬ್ಬಂದಿಗೆ ನೆರವು ನೀಡಿದ ವಾರ್ನರ್​

ಮಂಕಡಿಂಗ್ ಹೆಸರು ಬರಲು ಕಾರಣವೇನು?

1947ರಲ್ಲಿ ಭಾರತ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದ ಸಂದರ್ಭದಲ್ಲಿ ಕ್ವೀನ್ಸ್‌ ಲ್ಯಾಂಡ್‌ ವಿರುದ್ಧದ ಪಂದ್ಯವೊಂದರಲ್ಲಿ ಭಾರತದ ಎಡಗೈ ಸ್ಪಿನ್ನರ್‌ ವೀನೂ ಮಂಕಡ್‌ ಅವರು ಬಿಲ್‌ ಬ್ರೌನ್‌ ಅವರನ್ನು ನಾನ್‌ ಸ್ಟ್ರೈಕ್‌ ಭಾಗದಲ್ಲಿ ರನೌಟ್‌ ಮಾಡಿದ್ದರು. ಆ ಬಳಿಕ ಕ್ರಿಕೆಟ್‌ ನ ಈ ವಿಚಿತ್ರ ನಿಯಮಕ್ಕೆ ‘ಮಂಕಡ್‌’ ನಿಯಮ ಎಂದೇ ಪ್ರಸಿದ್ಧಿ ಪಡೆಯಿತು.

ಪಂದ್ಯ ಗೆದ್ದ ಆಸೀಸ್​

ಸತತ ಎರಡು ಸೋಲು ಕಂಡಿದ್ದ 5 ಬಾರಿಯ ವಿಶ್ವ ಚಾಂಪಿಯನ್​ ಕೊನೆಗೂ ಲಂಕಾ ವಿರುದ್ಧದ ಗೆದ್ದು ಗೆಲುವಿನ ಖಾತೆ ತೆರೆಯುವಲ್ಲಿ ಯಶಸ್ವಿಯಾಯಿತು. ಇಲ್ಲಿನ ಭಾರತ ರತ್ನ ಶ್ರೀ ಅಟಲ್​ಬಿಹಾರಿ ವಾಜಪೇಯಿ ಕ್ರಿಕೆಟ್ ಸ್ಟೇಡಿಯಮ್​ನಲ್ಲಿ ನಡೆದ ಹಣಾಹಣಿಯಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಲಂಕಾ ತಂಡ 43.3 ಓವರ್​ಗಳಲ್ಲಿ 209 ರನ್​ಗಳಿಗೆ ಆಲ್​​ಔಟ್​ ಆಯಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಆಸ್ಟ್ರೇಲಿಯಾ 35.2 ಓವರ್​ಗಳಲ್ಲಿ 5 ವಿಕೆಟ್​ ನಷ್ಟಕ್ಕೆ 215 ರನ್ ಬಾರಿಸಿ ಗೆಲುವು ಕಂಡಿತು.

Exit mobile version