ಸಿಡ್ನಿ: ವರ್ಣರಂಜಿತ ಟೂರ್ನಿ ಇಂಡಿಯನ್ ಪ್ರೀಮಿಯರ್ ಲೀಗ್ನ(IPL 2024) ಮುಂದಿನ ಆವೃತ್ತಿಯಲ್ಲಿ ಆಡುವುದಾಗಿ ಆಸ್ಟ್ರೇಲಿಯಾದ ಸ್ಟಾರ್ ವೇಗಿ ಮಿಚೆಲ್ ಸ್ಟಾರ್ಕ್(Mitchell Starc) ತಿಳಿಸಿದ್ದಾರೆ. ಈ ಮೂಲಕ ಬರೋಬ್ಬರಿ 8 ವರ್ಷಗಳ ಬಳಿಕ ಮತ್ತೆ ಐಪಿಎಲ್ಗೆ ಕಮ್ಬ್ಯಾಕ್ ಮಾಡಲಿದ್ದಾರೆ.
ಕನ್ನಡಿಗರ ನೆಚ್ಚಿನ ತಂಡವಾದ ಆರ್ಸಿಬಿ ಪರವಾಗಿ ಸ್ಟಾರ್ಕ್(Australia’s star pacer Mitchell Starc) ಎರಡು ಸೀಸನ್ ಐಪಿಎಲ್ ಆಡಿದ್ದರು. ಒಟ್ಟು ಆರ್ಸಿಬಿ ಪರ ಸ್ಟಾರ್ಕ್ 27 ಪಂದ್ಯಗಳನ್ನು ಆಡಿ 34 ವಿಕೆಟ್ ಪಡೆದಿದ್ದಾರೆ. 2018ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಅವರಿನ್ನು 9.4 ಕೋಟಿ ರೂ.ಗೆ ಖರೀದಿ ಮಾಡಿತ್ತು, ಆದರೆ ಗಾಯದ ಕಾರಣದಿಂದ ಅವರು ಆಡಿರಲಿಲ್ಲ. ಬಳಿಕ ರಾಷ್ಟ್ರೀಯ ಪಂದ್ಯಗಳ ಒತ್ತಡದಿಂದ ಅವರು ಐಪಿಎಲ್ ನಲ್ಲಿ ಆಡದಿರಲು ನಿರ್ಧರಿಸಿದ್ದರು. ಇದೀಗ ಮುಂದಿನ ವರ್ಷ ನಡೆಯುವ ಟ20 ವಿಶ್ವಕಪ್ ದೃಷ್ಟಿಯಲ್ಲಿಟ್ಟುಕೊಂಡು ಐಪಿಎಲ್ ಆಡಲು ನಿರ್ಧರಿಸಿದ್ದಾರೆ. 2024ರ ಟಿ20 ವಿಶ್ವಕಪ್ ಟೂರ್ನಿ ವೆಸ್ಟ್ ಇಂಡೀಸ್ ಮತ್ತು ಅಮೆರಿಕಾ ಆತಿಥ್ಯದಲ್ಲಿ ನಡೆಯಲಿದೆ.
8 ವರ್ಷಗಳ ಬಳಿಕ ಮತ್ತೆ ಐಪಿಎಲ್ಗೆ
“ಐಪಿಎಲ್ ಆಡದೆ ಎಂಟು ವರ್ಷವಾಗಿದೆ. ಖಂಡಿತವಾಗಿಯೂ ಮುಂದಿನ ವರ್ಷ ಐಪಿಎಲ್ ಆಡಲಿದ್ದೇನೆ. ಐಪಿಎಲ್ನಲ್ಲಿ ಸಾಕಷ್ಟು ನೆನೆಪುಗಳಿವೆ. ಮತ್ತೆ ಡ್ರೆಸಿಂಗ್ ರೋಮ್ ಹಂಚಿಕೊಳ್ಳುವ ಕಾತರದಲ್ಲಿದ್ದೇನೆ. ಆಟಗಾರರ ಹರಾಜಿಗೆ ಹೆಸರು ನೊಂದಾಯಿಸಲು ಉತ್ಸಾಹ ಹೆಚ್ಚಾಗಿದೆ” ಎಂದು ಎಡಗೈ ವೇಗಿ ಸ್ಟಾರ್ಕ್ ಹೇಳಿದ್ದಾರೆ.
ಬುಧವಾರ ಪ್ರಕಟಿಸಲಾದ ಆಸ್ಟ್ರೇಲಿಯಾದ 15 ಸದಸ್ಯರ ಏಕದಿನ ವಿಶ್ವಕಪ್ ತಂಡದಲ್ಲಿ ಸ್ಟಾರ್ಕ್ ಕೂಡ ಸ್ಥಾನ ಪಡೆದಿದ್ದಾರೆ. ಇದಕ್ಕೂ ಮುನ್ನ ಆಸ್ಟ್ರೇಲಿಯಾವು ಭಾರತ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾಗವಹಿಸಲಿದೆ. ಈ ಸರಣಿಯಲ್ಲಿಯೂ ಸ್ಟಾರ್ಕ್ ಸ್ಥಾನ ಪಡೆದಿದ್ದಾರೆ.
ಇದನ್ನೂ ಓದಿ IPL 2024 : ಡಿಸೆಂಬರ್ ಅಂತ್ಯಕ್ಕೆ ಐಪಿಎಲ್ 2024ರ ಹರಾಜು ಪ್ರಕ್ರಿಯೆ
ಪೊಲಾರ್ಡ್ ಜತೆ ಗಲಾಟೆ
ಮುಂಬೈ ಇಂಡಿಯನ್ಸ್ ಆಟಗಾರನಾಗಿದ್ದ ಕೀರನ್ ಪೊಲಾರ್ಡ್ ಮತ್ತು ಆರ್ಸಿಬಿ ಪರ ಆಡುತ್ತಿದ್ದ ಮಿಚೆಲ್ ಸ್ಟಾರ್ಕ್ 2014 ಐಪಿಎಲ್ನಲ್ಲಿ ಜಗಳವಾಡಿದ್ದರು. ಪೊಲಾರ್ಡ್ ಬ್ಯಾಟಿಂಗ್ ಮಾಡುವಾಗ ಬೌನ್ಸರ್ ಎಸೆದ ಬಳಿಕ ಸ್ಟಾರ್ಕ್ ಅವರು ಏನೋ ಹೇಳುತ್ತಾ ಸಾಗಿದರು. ಇದಕ್ಕೆ ಪೊಲಾರ್ಡ್ ಸುಮ್ಮನೆ ಜಗಳಕ್ಕೆ ಬರಬೇಡ ಹೋಗು ಎನ್ನುವ ರೀತಿಯಲ್ಲಿ ಕೈ ಸನ್ನೆ ಮಾಡಿದ್ದಾರೆ. ಮುಂದಿನ ಎಸೆವನ್ನು ಎಸೆಯಲು ಓಡಿ ಬಂದಾಗ ಪೋಲಾರ್ಡ್ ಕ್ರೀಸ್ ಬಿಟ್ಟು ಪಕ್ಕಕೆ ಸರಿದರು. ಆದರೂ ಸಿಟ್ಟಿನಲ್ಲಿ ಸ್ಟಾರ್ಕ್ ಪೊಲಾರ್ಡ್ ಇದ್ದ ಕಡೆ ಚೆಂಡನ್ನು ಎಸೆದರು. ಇದರಿಂದ ಕೋಪಗೊಂಡ ಪೊಲಾರ್ಡ್ ತಮ್ಮ ಬ್ಯಾಟನ್ನು ಸ್ಟಾರ್ಕ್ ಕಡೆ ಬೀಸಾಡಿದರು. ಬಳಿಕ ವಾಗ್ವಾದ ನಡೆಸಿದರು. ತಕ್ಷಣ ಅಂಪೈರ್ ಮತ್ತು ಸಹ ಆಟಗಾರರು ಮಧ್ಯ ಪ್ರವೇಶಿಸಿ ಈ ಗಲಾಟೆಯನ್ನು ಹತೋಟಿಗೆ ತಂದಿದ್ದರು.