Site icon Vistara News

Moeen Ali: ನಿವೃತ್ತಿ ವಾಪಸ್​ ಪಡೆದು ಟೆಸ್ಟ್​ ತಂಡಕ್ಕೆ ಮರಳಿದ ಮೊಯಿನ್​ ಅಲಿ

Moeen Ali

ಲಂಡನ್: ಇಂಗ್ಲೆಂಡ್ ಕ್ರಿಕೆಟ್ ತಂಡದ ಆಲ್ ರೌಂಡರ್ ಮೋಯಿನ್ ಅಲಿ ಅವರು ತಮ್ಮ ಟೆಸ್ಟ್ ಕ್ರಿಕೆಟ್ ವಿದಾಯದಿಂದ ಹೊರಬಂದಿದ್ದಾರೆ. 2021ರಲ್ಲಿ ಟೆಸ್ಟ್​ ಕ್ರಿಕೆಟ್​ಗೆ ವಿದಾಯ ಹೇಳಿದ್ದ ಅವರು ಇದೀಗ 2 ವರ್ಷಗಳ ಬಳಿಕ ಅಚ್ಚರಿ ಎಂಬಂತೆ ಆಸ್ಟ್ರೇಲಿಯಾ ವಿರುದ್ಧದ ಆ್ಯಶಸ್​ ಟೆಸ್ಟ್​ ಸರಣಿಯ ಮೊದಲೆರಡು ಪಂದ್ಯಗಳಿಗೆ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಈ ವಿಚಾರವನ್ನು ಇಂಗ್ಲೆಂಡ್​ ಮತ್ತು ವೇಲ್ಸ್​ ಕ್ರಿಕೆಟ್​ ಮಂಡಳಿ ಖಚಿತ ಪಡಿಸಿದೆ.

ಐದು ಪಂದ್ಯಗಳ ಆ್ಯಶಸ್‌ ಸರಣಿಯು ಜೂನ್ 16 ರಂದು ಎಡ್ಜ್‌ಬಾಸ್ಟನ್‌ನಲ್ಲಿ ಪ್ರಾರಂಭವಾಗುತ್ತದೆ. 2021-22 ರಲ್ಲಿ ಜೋ ರೂಟ್ ನೇತೃತ್ವದಲ್ಲಿ ಇಂಗ್ಲೆಂಡ್​ ತಂಡ 4-0 ಅಂತರದ ಸೋಲು ಕಂಡಿತ್ತು. ಇದೇ ಸೋಲಿಗೆ ಸ್ಟೋಕ್ಸ್​ ಅವರು ಸೇಡು ತೀರಿಸಲು ಕಾತರರಾಗಿದ್ದಾರೆ.

34ರ ಹರೆಯದ ಮೋಯಿನ್ ಅಲಿ ಇದುವರೆಗೆ 64 ಟೆಸ್ಟ್ ಪಂದ್ಯಗಳಲ್ಲಿ ಆಡಿದ್ದಾರೆ. 2014ರಲ್ಲಿ ಟೆಸ್ಟ್ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದ ಅಲಿ 28.3ರ ಸರಾಸರಿಯಲ್ಲಿ 2914 ರನ್ ಗಳಿಸಿದ್ದಾರೆ. ಐದು ಶತಕ ಮತ್ತು 14 ಅರ್ಧಶತಕ ಗಳಿಸಿದ್ದಾರೆ. ಉಪಯುಕ್ತ ಸ್ಪಿನ್ನರ್ ಆಗಿರುವ ಮೋಯಿನ್ ಅಲಿ ಟೆಸ್ಟ್ ಕ್ರಿಕೆಟ್ ನಲ್ಲಿ 195 ವಿಕೆಟ್ ಕಬಳಿಸಿದ್ದಾರೆ. ಇದೀಗ ತಮ್ಮ ನಿವೃತ್ತಿಯನ್ನು ವಾಪಸ್​ ಪಡೆದು ಮತ್ತೆ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಈ ಬಾರಿಯ ಐಪಿಎಲ್​ನಲ್ಲಿ ಚಾಂಪಿಯನ್​ ಚೆನ್ನೈ ತಂಡದ ಸದ್ಯನಾಗಿದ್ದ ಅವರು ನಿರೀಕ್ಷಿತ ಮಟ್ಟದ ಬ್ಯಾಟಿಂಗ್​ ನಡೆಸುವಲ್ಲಿ ವಿಫಲರಾಗಿದ್ದರು.

ಇದನ್ನೂ ಓದಿ WTC Final 2023 : ಲಂಡನ್​ನಲ್ಲಿ ಭಯಂಕರ ಚಳಿ, ಟೀಮ್​ ಇಂಡಿಯಾಗೆ ಬೌಲರ್​​ಗಳ ಆಯ್ಕೆಯ ಗಲಿಬಿಲಿ!

ಇಂಗ್ಲೆಂಡ್​ ಟೆಸ್ಟ್​ ತಂಡದ ನೂತನ ಕೋಚ್​ ಆಗಿ ಕಿವೀಸ್​ನ ಬ್ರೆಂಡನ್ ಮೆಕಲಮ್ ಆಯ್ಕೆಯಾದ ಬಳಿಕ ತಂಡ ಟೆಸ್ಟ್​ನಲ್ಲಿ ಉತ್ತಮ​ ಪ್ರದರ್ಶನ ತೋರುತ್ತಿದೆ. ಮೆಕಲಮ್ ಅವರ ಮಾರ್ಗದರ್ಶನದಲ್ಲಿ ಇಂಗ್ಲೆಂಡ್ ​ತಂಡ ಆಡಿದ 12 ಟೆಸ್ಟ್‌ಗಳಲ್ಲಿ 10 ಪಂದ್ಯಗಳನ್ನು ಗೆದ್ದುಕೊಂಡಿದ್ದಾರೆ. ಇದೀಗ ಆ್ಯಶಸ್‌ ಸರಣಿಯಲ್ಲಿಯೂ ಮೇಲುಗೈ ಸಾಧಿಸುವ ಸಾಧ್ಯತೆ ಅಧಿಕವಾಗಿದೆ.

Exit mobile version