ಲಂಡನ್: ಆ್ಯಶಸ್ ಟೆಸ್ಟ್ ಸರಣಿಯ ಅಂತಿಮ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ 49 ರನ್ಗಳಿಂದ ಗೆಲುವು ಸಾಧಿಸಿ ಸರಣಿಯನ್ನು 2-2ರಿಂದ ಸಮಬಲಗೊಳಿಸಿದೆ. ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ಮೊಯಿನ್ ಅಲಿ(Moeen Ali) ಟೆಸ್ಟ್ ಕ್ರಿಕೆಟ್ಗೆ ಮತ್ತೊಮ್ಮೆ ವಿದಾಯ ಹೇಳಿದ್ದಾರೆ.
2021ರಲ್ಲೇ ಟೆಸ್ಟ್ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದ ಮೊಯೀನ್ ಅಲಿ ಅವರನ್ನು ತಮ್ಮ ನಿವೃತ್ತಿ ವಾಪಸ್ ಪಡೆದು ಈ ಬಾರಿ ಆ್ಯಶಸ್ ಸರಣಿಯಲ್ಲಿ ಆಡುವಂತೆ ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್(ben stokes) ಮತ್ತು ಕೋಚ್ ಬ್ರೆಂಡನ್ ಮೆಕಲಮ್ ಒತ್ತಾಯಿಸಿದ್ದರು. ಎಡಗೈ ಸ್ಪಿನ್ನರ್ ಜಾಕ್ ಲೀಚ್ ಗಾಯಗೊಂಡಿದ್ದರಿಂದ ಓರ್ವ ಅನುಭವಿ ಸ್ಪಿನ್ನರ್ ತಂಡಕ್ಕೆ ಅಗತ್ಯವಿದ್ದ ಕಾರಣ ಮೊಯಿನ್ ಅಲಿ ಅವರನ್ನು ಒತ್ತಾಯ ಪೂರ್ವಕವಾಗಿ ನಿವೃತ್ತಿ ಹಿಂಪಡೆಸಿ ಸರಣಿಗೆ ಆಯ್ಕೆ ಮಾಡಲಾಗಿತ್ತು. ಹೀಗೆ ನಿವೃತ್ತಿ ವಾಪಸ್ ಪಡೆದು ಆಡಿದ ಅಲಿ ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲಿ ಅತ್ಯಮೋಘ ಪ್ರದರ್ಶನ ತೋರುವ ಮೂಲಕ ಸರಣಿಯನ್ನು 2-2 ರಿಂದ ಸಮಬಲಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. ಆದರೆ ಮತ್ತೆ ತಮ್ಮ ಟೆಸ್ಟ್ ನಿವೃತ್ತಿಯನ್ನು ಘೋಷಿಸಿದ್ದಾರೆ. ಜತೆಗೆ ಇಂಗ್ಲೆಂಡ್ ತಂಡದ ನಾಯಕ ಮತ್ತು ಕೋಚ್ಗೆ ಸ್ಪಷ್ಟ ಸಂದೇಶವೊಂದನ್ನು ನೀಡಿದ್ದಾರೆ.
ನಿವೃತ್ತಿ ಘೋಷಿಸಿದ ಬಳಿಕ ಸ್ಕೈ ಸ್ಪೋರ್ಟ್ಸ್ ಜತೆ ಮಾತನಾಡಿದ ಮೊಯಿನ್ ಅಲಿ, “ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಅವರಿಂದ ಮತ್ತೊಮ್ಮೆ ನಿವೃತ್ತಿ ವಾಪಸ್ ಸಂದೇಶ ಬಂದರೆ ಅದನ್ನು ಅಳಿಸಿ ಹಾಕುತ್ತೇನೆ” ಎಂದು ಹೇಳಿದ್ದಾರೆ.
Moeen Ali confirms his retirement from Test cricket
— Sky Sports Cricket (@SkyCricket) July 31, 2023
🗣️ "I know I'm done. If Stokesy messages me again, I am going to delete it!" 🤣 pic.twitter.com/4CBeOp97qT
“ಟೆಸ್ಟ್ ನಿವೃತ್ತಿಯಿಂದ ಬಂದು ಆಡಿದ್ದು ನಿಜಕ್ಕೂ ಒಳ್ಳೆಯ ಅನುಭವವನ್ನೇ ನೀಡಿದೆ. ಇದೀಗ ನನ್ನ ಕೆಲಸ ಮುಗಿದಿದೆ. ಮತ್ತೆ ಟೆಸ್ಟ್ ಕ್ರಿಕೆಟ್ಗೆ ಬರುವ ಯಾವುದೇ ನಿರ್ಧಾರವಿಲ್ಲ. ನಾನು ಎರಡನೇ ಬಾರಿ ಟೆಸ್ಟ್ ಕ್ರಿಕೆಟ್ಗೆ ನಿವೃತ್ತಿ ಘೋಷಿಸುತ್ತಿದ್ದೇನೆ. ಆಸ್ಟ್ರೇಲಿಯಾ ವಿರುದ್ಧ ಉತ್ತಮ ಪ್ರದರ್ಶನ ತೋರಿದಿದ್ದರೂ. ನನ್ನ ಮೇಲೆ ವಿಶ್ವಾಸವಿಟ್ಟು ಈ ಸರಣಿಗೆ ಕರೆಸಿಕೊಂಡಿದ್ದಕ್ಕೆ ಕೋಚ್ ಮತ್ತು ನಾಯಕ ಸ್ಟೋಕ್ಸ್ಗೆ ಧನ್ಯವಾದಗಳು ಅದರಲ್ಲೂ ದಿಗ್ಗಜ ಸ್ಟುವರ್ಟ್ ಬ್ರಾಡ್ ಅವರ ವಿದಾಯ ಪಂದ್ಯದಲ್ಲಿ ಆಡಲು ಅವಕಾಶ ಸಿಕ್ಕಿದ್ದು ನನ್ನ ಪಾಲಿನ ಪುಣ್ಯ” ಎಂದು ಹೇಳುವ ಮೂಲಕ ಟೆಸ್ಟ್ ಕ್ರಿಕೆಟ್ ಜೀವನಕ್ಕೆ ತೆರೆ ಎಳೆದರು.
ಇದನ್ನೂ ಓದಿ IPL 2023: ಧೋನಿ ಪಾಳಯ ಸೇರಿದ ಬೆನ್ ಸ್ಟೋಕ್ಸ್, ಮೊಯಿನ್ ಅಲಿ
36ರ ಹರೆಯದ ಮೋಯಿನ್ ಅಲಿ ಇದುವರೆಗೆ 68 ಟೆಸ್ಟ್ ಪಂದ್ಯಗಳಲ್ಲಿ ಆಡಿದ್ದಾರೆ. 2014ರಲ್ಲಿ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದ ಅಲಿ 28.3ರ ಸರಾಸರಿಯಲ್ಲಿ 3094 ರನ್ ಗಳಿಸಿದ್ದಾರೆ. ಇದರಲ್ಲಿ ಐದು ಶತಕ ಮತ್ತು 15 ಅರ್ಧಶತಕಗಳನ್ನು ಬಾರಿಸಿದ್ದಾರೆ. ಉಪಯುಕ್ತ ಸ್ಪಿನ್ನರ್ ಆಗಿರುವ ಅವರು ಟೆಸ್ಟ್ ಕ್ರಿಕೆಟ್ನಲ್ಲಿ 204 ವಿಕೆಟ್ ಕಬಳಿಸಿದ್ದಾರೆ.