ಕರಾಚಿ: ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮತ್ತು ಟೀಮ್ ಮ್ಯಾನೇಜ್ಮೆಂಟ್ ವಿರುದ್ಧ ಅಸಮಾಧಾನಗೊಂಡು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಹಠಾತ್ ನಿವೃತ್ತಿ ಘೋಷಿಸಿದ್ದ ವೇಗಿ ಮೊಹಮ್ಮದ್ ಆಮಿರ್(Mohammad Amir), ಇದೀಗ ಮತ್ತೆ ಪಾಕ್ ತಂಡದ ಪರ ಆಡುವುದಾಗಿ ತಿಳಿಸಿದ್ದಾರೆ.
ಪಿಸಿಬಿ ಅಧ್ಯಕ್ಷ ಸ್ಥಾನದಿಂದ ರಮೀಜ್ ರಾಜಾ ಕೆಳಗಿಳಿದ ಬೆನ್ನಲ್ಲೇ ಆಮಿರ್ ಪಾಕಿಸ್ತಾನ ತಂಡಕ್ಕೆ ಕಮ್‌ಬ್ಯಾಕ್ ಮಾಡುವುದಾಗಿ ಹೇಳಿದ್ದಾರೆ. ರಮೀಜ್ ರಾಜಾ ಆಡಳಿತದ ಅವಧಿಯಲ್ಲಿ ಆಮೀರ್ ಅಸಮಾಧಾನಗೊಂಡು ದಿಢೀರ್ ನಿವೃತ್ತಿ ಘೋಷಣೆ ಮಾಡಿದ್ದರು. ಇದೀಗ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮಧ್ಯಂತರ ಮುಖ್ಯಸ್ಥನಾಗಿ ನಜೀಮ್ ಸೇಥಿ ಅಧಿಕಾರ ವಹಿಸಿಕೊಂಡಿದ್ದಾರೆ. ಈ ಹಿನ್ನೆಲೆ ಆಮಿರ್ ಪಾಕ್ ತಂಡದ ಪರ ಆಡುವ ಬಯಕೆ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ ಆಮೀರ್,” ದೇವರು ಕರುಣಿಸಿದರೆ ಮತ್ತೆ ಪಾಕಿಸ್ತಾನ ತಂಡದ ಪರ ಆಡುತ್ತೇನೆ. ಇದಕ್ಕೂ ಮುನ್ನ ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್‌ಎಲ್) ಟೂರ್ನಿಯಲ್ಲಿ ಆಡಿ ಉತ್ತಮ ಪ್ರದರ್ಶನ ನೀಡಲು ಎದುರು ನೋಡುತ್ತಿದ್ದೇನೆ” ಎಂದು ಹೇಳಿದ್ದಾರೆ.
“ಈ ಮೊದಲು ನನ್ನ ಮೇಲೆ ಪಿಸಿಬಿ ಭಾರಿ ಹೂಡಿಕೆ ಮಾಡಿದೆ ಎಂದು ಮಾಜಿ ಅಧ್ಯಕ್ಷ ರಮೀಜ್ ರಾಜಾ ನೇತೃತ್ವದ ಪಿಸಿಬಿ ಮತ್ತು ಟೀಮ್ ಮ್ಯಾನೇಜ್ಮೆಂಟ್ ನನಗೆ ಚಿತ್ರಹಿಂಸೆ ನೀಡಿತ್ತು. ಇದರಿಂದ ನಾನು ನಿವೃತ್ತಿ ನೀಡಿದೆ. ಆದರೆ ನಜೀಮ್ ಸೇಥಿ ಮತ್ತು ಮಾಜಿ ನಾಯಕ ಶಾಹಿದ್ ಅಫ್ರಿದಿ ಮಾತ್ರವೇ ಭರವಸೆ ಇಟ್ಟಿದ್ದರು” ಎಂದು ಆಮಿರ್ ಹೇಳಿದ್ದಾರೆ.
2010ರ ಇಂಗ್ಲೆಂಡ್ ಪ್ರವಾಸದಲ್ಲಿ ಸ್ಪಾಟ್ ಫಿಕ್ಸಿಂಗ್‌ನಲ್ಲಿ ಭಾಗಿಯಾಗಿದ್ದ ಆಮಿರ್ ಕೆಲ ವರ್ಷ ನಿಷೇಧ ಶಿಕ್ಷೆ ಎದುರಿಸಿದ್ದರು. ನಂತರ ಕಾನೂನು ಹೋರಾಟ ನಡೆಸಿ ಆಜೀವ ನಿಷೇಧ ಶಿಕ್ಷೆಯಿಂದ ವಿನಾಯಿತಿ ಪಡೆದು 2016ರಲ್ಲಿ ತಂಡಕ್ಕೆ ಕಮ್‌ಬ್ಯಾಕ್ ಮಾಡಿದ್ದರು. ಪಾಕ್ ಪರ ಆಮಿರ್ 36 ಟೆಸ್ಟ್, 61 ಏಕ ದಿನ ಮತ್ತು 50 ಟಿ20 ಪಂದ್ಯಗಳನ್ನು ಆಡಿದ್ದಾರೆ.
ಇದನ್ನೂ ಓದಿ | IND VS SL | ಭಾರತಕ್ಕೆ ಬಂದ ಶ್ರೀಲಂಕಾ ಕ್ರಿಕೆಟ್ ತಂಡ; ಜ.03ಕ್ಕೆ ಮೊದಲ ಟಿ20 ಪಂದ್ಯ