ಬೆಂಗಳೂರು : ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ ಬಾರ್ಡರ್- ಗವಾಸ್ಕರ್ ಟ್ರೋಫಿ (IND v AUS 2023) ಇದೀಗ ಕ್ರಿಕೆಟ್ ಕಾರಿಡಾರ್ನ ಚರ್ಚೆಯ ವಿಷಯ. ವಿಶ್ವದ ಬಲಿಷ್ಠ ತಂಡಗಳೆರಡು ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಕಾದಾಡಲಿವೆ. ಇತ್ತಂಡಗಳಿಗೂ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ಗೆ ಮುನ್ನ ಕೊನೇ ಸರಣಿಯಾಗಿದೆ. ಪ್ರಮುಖವಾಗಿ ಇತ್ತಂಡಗಳು ನಡುವಿನ ಜಿದ್ದಾಜಿದ್ದಿನ ಕುರಿತು ಹೆಚ್ಚು ಚರ್ಚೆಗಳು ನಡೆಯುತ್ತಿವೆ. ಏತನ್ಮಧ್ಯೆ, ಭಾರತ ತಂಡದ ಮಾಜಿ ಆಲ್ರೌಂಡರ್ ಮೊಹಮ್ಮದ್ ಕೈಫ್ ಸರಣಿಯ ತೀವ್ರತೆಯ ಕುರಿತು ಮಾತನಾಡಿದ್ದು, ಪ್ರವಾಸಿ ತಂಡದ ಹೆಚ್ಚು ಆತಂಕಕ್ಕೆ ಬಿದ್ದಿದೆ ಎಂದು ಹೇಳಿದ್ದಾರೆ.
ಭಾರತದಲ್ಲಿ ಸ್ಪಿನ್ಗೆ ಪೂರಕವಾದ ಪಿಚ್ಗಳನ್ನು ಸಿದ್ಧಪಡಿಸುವ ಮೂಲಕ ಆತಿಥೇಯ ತಂಡಕ್ಕೆ ಅನುಕೂಲ ಮಾಡಿಕೊಡುವುದು ಬಿಸಿಸಿಐ ಉದ್ದೇಶವಾಗಿದೆ ಎಂಬುದಾಗಿ ಆಸ್ಟ್ರೇಲಿಯಾದ ಹಲವಾರು ಹಿರಿಯ ಆಟಗಾರರು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದಕ್ಕೆ ಪ್ರತ್ಯುತ್ತರ ನೀಡಿದ ಭಾರತೀಯ ಆಟಗಾರರು ಇದು ಆಸ್ಟ್ರೇಲಿಯಾ ತಂಡದ ಮೈಂಡ್ ಗೇಮ್ ಎಂಬುದಾಗಿ ತಿರುಗೇಟು ಕೊಟ್ಟಿದ್ದಾರೆ.
ಅದೇ ದಾಟಿಯಲ್ಲಿ ಮಾತನಾಡಿರುವ ಮೊಹಮ್ಮದ್ ಕೈಫ್, ಪ್ರವಾಸಿ ತಂಡದ ಆಟಗಾರರು ಸೋಲಿನ ಭಯಕ್ಕೆ ಬಿದಿದ್ದಾರೆ ಎಂದು ಹೇಳಿದ್ದಾರೆ. ಆಸ್ಟ್ರೇಲಿಯಾ ತಂಡ ಎಂದೂ 18 ಸದಸ್ಯರೊಂದಿಗೆ ಭಾರತಕ್ಕೆ ಬಂದಿಲ್ಲ. ಈ ಬಾರಿ 18 ಸದಸ್ಯರ ಬಳಗದೊಂದಿಗೆ ಭಾರತಕ್ಕೆ ಬಂದಿದ್ದಾರೆ. ಆಸ್ಟ್ರೇಲಿಯಾ ತಂಡ ತವರಿನಲ್ಲಿ ಬಲಶಾಲಿ. ಅವರನ್ನು ಸೋಲಿಸುವುದು ಸುಲಭವಲ್ಲ ಎಂದು ಸ್ಟಾರ್ ಸ್ಪೋರ್ಟ್ಸ್ನ ವಿಡಿಯೊದಲ್ಲಿ ಅವರು ಹೇಳಿದ್ದಾರೆ.
ಇದನ್ನೂ ಓದಿ : Border Gavaskar Trophy: ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಗರಿಷ್ಠ ರನ್ರೇಟ್ ಹೊಂದಿರುವ ಬ್ಯಾಟರ್ಗಳು
ಆಸ್ಟ್ರೇಲಯಾ ತಂಡಕ್ಕೆ ಭಾರತದಲ್ಲಿ ಆಡುವ ಭಯವಿದೆ. ಸ್ಪಿನ್ನರ್ಗಳಾದ ಆರ್. ಅಶ್ವಿನ್, ರವೀಂದ್ರ ಜಡೇಜಾ. ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್ ಅವರನ್ನು ಎದುರಿಸುವುದು ಅವರಿಗೆ ಸುಲಭವಲ್ಲ. ಅದೇ ಕಾರಣಕ್ಕೆ ದೊಡ್ಡ ಯೋಜನೆಗಳನ್ನು ರೂಪಿಸಿಕೊಳ್ಳುತ್ತಿದ್ದಾರೆ ಎಂಬುದಾಗಿ ಮೊಹಮ್ಮದ್ ಕೈಫ್ ಹೇಳಿದ್ದಾರೆ.