Site icon Vistara News

Mohammad Rizwan: ಕೊಹ್ಲಿ, ಬಾಬರ್​ ದಾಖಲೆ ಮುರಿದು ಟಿ20ಯಲ್ಲಿ ವಿಶ್ವ ದಾಖಲೆ ಬರೆದ ರಿಜ್ವಾನ್​

Mohammad Rizwan

ರಾವಲ್ಪಿಂಡಿ: ಪಾಕಿಸ್ತಾನ ಕ್ರಿಕೆಟ್​ ತಂಡದ ವಿಕೆಟ್​ ಕೀಪರ್​ ಕಮ್​-ಬ್ಯಾಟರ್​ ಮೊಹಮ್ಮದ್‌ ರಿಜ್ವಾನ್‌(Mohammad Rizwan) ಅವರು ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್​ನಲ್ಲಿ ನೂತನ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದಿದ್ದಾರೆ. ಅತಿ ಕಡಿಮೆ ಇನಿಂಗ್ಸ್​ಗಳಿಂದ ವೇಗವಾಗಿ 3 ಸಾವಿರ ರನ್​ಗಳಿಸಿದ(fastest to 3,000 T20I runs) ಆಟಗಾರ ಎನ್ನುವ ಮೈಲುಗಲ್ಲು ನಿರ್ಮಿಸಿದ್ದಾರೆ. ಈ ಮೂಲಕ ತನ್ನದೇ ದೇಶದ ಬಾಬರ್​ ಅಜಂ(Babar Azam) ಮತ್ತು ಟೀಮ್​ ಇಂಡಿಯಾದ ವಿರಾಟ್​ ಕೊಹ್ಲಿ(Virat Kohli) ಹೆಸರಿನಲ್ಲಿದ್ದ ಜಂಟಿ ದಾಖಲೆಯನ್ನು ಮುರಿದಿದ್ದಾರೆ.

ಶನಿವಾರ ರಾತ್ರಿ ರಾವಲ್ಪಿಂಡಿಯಲ್ಲಿ ನಡೆದಿದ್ದ ನ್ಯೂಜಿಲ್ಯಾಂಡ್​ ವಿರುದ್ಧದದ 2ನೇ ಟ್ವಿ20 ಪಂದ್ಯದಲ್ಲಿ ಅಜೇಯ 45 ರನ್​ ಬಾರಿಸುವ ಮೂಲಕ ಮೊಹಮ್ಮದ್‌ ರಿಜ್ವಾನ್‌ ಈ ದಾಖಲೆ ಬರೆದರು. ಮೊಹಮ್ಮದ್‌ ರಿಜ್ವಾನ್‌ ಕೇವಲ 79 ಇನಿಂಗ್ಸ್​ಗಳಿಂದ 3 ಸಾವಿರ ರನ್​ಗಳ ಗಡಿ ದಾಟಿದರು. ವಿರಾಟ್​ ಮತ್ತು ಬಾಬರ್​ ಜಂಟಿಯಾಗಿ 81 ಇನಿಂಗ್ಸ್​ನಲ್ಲಿ ಈ ಸಾಧನೆ ಮಾಡಿದ್ದರು. ರಿಜ್ವಾನ್​ ಪಾಕ್​ ಪರ ಟಿ20ಯಲ್ಲಿ ಒಟ್ಟು 3026* ರನ್​ ಬಾರಿಸಿದ್ದಾರೆ. ಇದರಲ್ಲಿ ಒಂದು ಶತಕ ಮತ್ತು 26 ಅರ್ಧಶತಕ ಒಳಗೊಂಡಿದೆ.


ಟಿ20ಯಲ್ಲಿ ಅತಿ ವೇಗವಾಗಿ 3 ಸಾವಿರ ರನ್​ ಪೂರೈಸಿದ ಬ್ಯಾಟರ್​ಗಳು


ಮೊಹಮ್ಮದ್‌ ರಿಜ್ವಾನ್‌-79 ಇನಿಂಗ್ಸ್​

ಬಾಬರ್​ ಅಜಂ-81 ಇನಿಂಗ್ಸ್​

ವಿರಾಟ್​ ಕೊಹ್ಲಿ-81 ಇನಿಂಗ್ಸ್​

ಆರಾನ್ ಫಿಂಚ್​-98 ಇನಿಂಗ್ಸ್​

ನ್ಯೂಜಿಲ್ಯಾಂಡ್​ಗೆ ಹೀನಾಯ ಸೋಲು


ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ನಡೆಸಿದ ಪ್ರವಾಸಿ ನ್ಯೂಜಿಲ್ಯಾಂಡ್​ ತಂಡ 18.1 ಓವರ್​ಗಳಲ್ಲಿ 90 ರನ್​ಗೆ ಸರ್ವಪತನ ಕಂಡಿತು. ಗುರಿ ಬೆನ್ನತ್ತಿದ ಪಾಕಿಸ್ತಾನ ರಿಜ್ವಾನ್ ಅವರ ಅಜೇಯ ಆಟದಿಂದ 12.1 ಓವರ್​ಗಳಲ್ಲಿ 3 ವಿಕೆಟ್​ ನಷ್ಟಕ್ಕೆ 92 ರನ್​ ಬಾರಿಸಿ 7 ವಿಕೆಟ್​ ಅಂತರದ ಗೆಲುವು ತನ್ನದಾಗಿಸಿಕೊಂಡಿತು. ಉಭಯ ತಂಡಗಳ ಮೊದಲ ಮುಖಾಮುಖಿ ಮಳೆಯಿಂದ ರದ್ದುಗೊಂಡಿತ್ತು. ಮೂರನೇ ಪಂದ್ಯ ಇಂದು(ಭಾನುವಾರ) ರಾತ್ರಿ ನಡೆಯಲಿದೆ. 5 ಪಂದ್ಯಗಳ ಸರಣಿ ಇದಾಗಿದೆ.

ಇದನ್ನೂ ಓದಿ IPL 2024: ಈ ಬಾರಿಯ ಐಪಿಎಲ್​ ಆವೃತ್ತಿಯಲ್ಲಿ ವೇಗದ ಅರ್ಧಶತಕ ಬಾರಿಸಿದ ಮೆಕ್‌ಗುರ್ಕ್

ಟಿ20 ವಿಶ್ವಕಪ್​ ಆಡುವ ಸಲುವಾಗಿ ನಿವೃತ್ತಿಯಿಂದ ಹೊರಬಂದು ಮತ್ತೆ ಕ್ರಿಕೆಟ್​ ಆಡುತ್ತಿರುವ ಮೊಹಮ್ಮದ್​ ಆಮೀರ್​ 3 ಓವರ್​ ಎಸೆದು ಕೇವಲ 13 ರನ್​ ವೆಚ್ಚದಲ್ಲಿ 2 ವಿಕೆಟ್​ ಕಿತ್ತರು. ಮಾಜಿ ನಾಯಕ ಶಾಹೀನ್​ ಅಫ್ರಿದಿ ಮೂರು, ಶಾದಾಬ್ ಖಾನ್ ಮತ್ತು ಅಬ್ರಾರ್ ಅಹ್ಮದ್​ ತಲಾ 2 ವಿಕೆಟ್​ ಉರುಳಿಸಿದರು. ನಾಯಕನಾಗಿ ಮರು ನೇಮಕಗೊಂಡ ಬಾಬರ್​ ಅಜಂ 14 ರನ್​ಗೆ ಔಟಾಗುವ ಮೂಲಕ ವೈಫಲ್ಯ ಕಂಡರು.

Exit mobile version