ಕೋಲ್ಕೊತಾ : ಪಾಕಿಸ್ತಾನ ತಂಡ ಟಿ೨೦ ವಿಶ್ವ ಕಪ್ ಫೈನಲ್ (T20 World Cup) ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಸೋಲುತ್ತಿದ್ದಂತೆ ಭಾರತ ತಂಡದ ವೇಗದ ಬೌಲರ್ ಮೊಹಮ್ಮದ್ ಶಮಿ, ಪಾಕಿಸ್ತಾನದ ಮಾಜಿ ವೇಗದ ಬೌಲರ್ ಶೋಯೆಬ್ ಅಖ್ತರ್ ಅವರನ್ನು ಟ್ರೋಲ್ ಮಾಡಿದ್ದಾರೆ. ಈ ಮೂಲಕ ಭಾರತ ತಂಡವನ್ನು ಟೀಕೆ ಮಾಡಿದ್ದ ಪಾಕ್‌ನ ಹಿರಿಯ ಕ್ರಿಕೆಟಿಗನಿಗೆ ತಕ್ಕ ಉತ್ತರ ಕೊಟ್ಟಿದ್ದಾರೆ.
“ಕ್ಷಮಿಸು ಸಹೋದರ, ಇದನ್ನೇ ಕರ್ಮ ಎಂದು ಕರೆಯುವುದು” ಎಂದು ಶೋಯೆಬ್ ಅಖ್ತರ್ ಅವರ ಟ್ವೀಟ್‌ಗೆ ಟ್ಯಾಗ್ ಮಾಡಿದ್ದಾರೆ ಶಮಿ. ಈ ಟ್ವೀಟ್‌ಗೆ ಕ್ರಿಕೆಟ್ ಅಭಿಮಾನಿಗಳು ನಾನಾ ರೀತಿಯಲ್ಲಿ ಪ್ರತಿಕ್ರಿಯೆ ಕೊಟ್ಟಿದ್ದಾರೆ. ”ಪಾಕಿಸ್ತಾನ ತಂಡವೇನೂ ಬಲಿಷ್ಠವಾಗಿರಲಿಲ್ಲ. ಅದೃಷ್ಟದಿಂದ ಫೈನಲ್‌ಗೇರಿತ್ತು. ಅದನ್ನೇ ತಮ್ಮ ಸಾಧನೆ ಎಂಬಂತೆ ಅಖ್ತರ್ ಸಂಭ್ರಮಿಸಿದ್ದರು. ಅವರ ಬಣ್ಣ ಬಯಲಾಗಿದೆ,” ಎಂದು ಒಬ್ಬರು ಬರೆದಿದ್ದರು. ಇನ್ನೊಬ್ಬರು ಮೊಹಮ್ಮದ್ ಶಮಿ ತಮ್ಮ ದೇಶ ಭಕ್ತಿಯನ್ನು ಪ್ರದರ್ಶಿಸಲು ಈ ರೀತಿ ಮಾಡಿದ್ದಾರೆ ಎಂದು ಬರೆದುಕೊಂಡಿದ್ದಾರೆ.
ಶಮಿಗೆ ಕೋಪ ಯಾಕೆ?
ಭಾರತ ತಂಡ ಇಂಗ್ಲೆಂಡ್ ವಿರುದ್ಧದ ಸೆಮಿ ಫೈನಲ್ ಪಂದ್ಯದಲ್ಲಿ ಚಾಂಪಿಯನ್ ಇಂಗ್ಲೆಂಡ್ ವಿರುದ್ಧ ೧೦ ಹೀನಾಯ ಸೋಲಿಗೆ ಒಳಗಾಗಿತ್ತು. ಮೊದಲು ಬ್ಯಾಟ್ ಮಾಡಿದ್ದ ಭಾರತ ತಂಡ ೧೬೭ ರನ್ ಬಾರಿಸಿತ್ತು. ಗುರಿ ಬೆನ್ನಟ್ಟಿದ್ದ ಇಂಗ್ಲೆಂಡ್ ಬಳಗ ವಿಕೆಟ್ ನಷ್ಟವಿಲ್ಲದೇ ಜಯ ಸಾಧಿಸಿತ್ತು. ಇದನ್ನು ವಿಶ್ಲೇಷಣೆ ಮಾಡುವ ವೇಳೆ ಶೋಯೆಬ್ ಅಖ್ತರ್ ವೇಗದ ಬೌಲರ್‌ಗಳಾದ ಮೊಹಮ್ಮದ್ ಶಮಿ ಹಾಗೂ ಭುವನೇಶ್ವರ್ ಕುಮಾರ್ ಅವರನ್ನು ಟೀಕೆಗೆ ಗುರಿಪಡಿಸಿದ್ದರು. ಇದೀಗ ಪಾಕಿಸ್ತಾನ ಕ್ರಿಕೆಟ್ ತಂಡ ಸೋಲು ಕಂಡಿದ್ದು ಸಮಯಕ್ಕೆ ಕಾದು ಶಮಿ ಪ್ರತ್ಯುತ್ತರ ಕೊಟ್ಟಿದ್ದಾರೆ.
ಇದನ್ನೂ ಓದಿ | T20 World Cup | ಮರುಕಳಿಸದ ಇತಿಹಾಸ, ಪಾಕಿಸ್ತಾನ ಕ್ರಿಕೆಟ್ ಅಭಿಮಾನಿಗಳಿಗೆ ನಿರಾಸೆ