Site icon Vistara News

INDvsENG ODI : ಬೌಲಿಂಗ್‌ ಸಾಧನೆಯಲ್ಲಿ ಅಗರ್ಕರ್‌ ಹಿಂದಿಕ್ಕಿದ ಶಮಿ

INDvsENG ODI

ಲಂಡನ್‌: ಟೀಮ್‌ ಇಂಡಿಯಾದ ಹೆಚ್ಚು ಅಂಡರ್‌ರೇಟೆಡ್‌ ಬೌಲರ್‌ ಮೊಹಮ್ಮದ್‌ ಶಮಿ. ಅವರು ಏಕದಿನ ವಿಶ್ವ ಕಪ್‌ನಲ್ಲಿ ಹ್ಯಾಟ್ರಿಕ್‌ ವಿಕೆಟ್‌ ಪಡೆಯುವುದು ಸೇರಿದಂತೆ ಆಗಾಗ ಹೊಸ ದಾಖಲೆಗಳನ್ನು ಸೃಷ್ಟಿಸುತ್ತಲೇ ಇರುತ್ತಾರೆ. ಆದರೆ, ಹೆಚ್ಚು ಚರ್ಚೆಯಲ್ಲಿ ಉಳಿಯುವುದಿಲ್ಲ. , ಅವರ ಸದ್ದಿಲ್ಲದ ಸೇವೆ ಹಲವು ಬಾರಿ ಭಾರತ ತಂಡವನ್ನು ಗೆಲ್ಲಿಸಿದೆ. ಅಂತೆಯೇ INDvsENG ODI ಸರಣಿಯ ಮೊದಲ ಪಂದ್ಯದಲ್ಲಿ ೩ ವಿಕೆಟ್‌ ಪಡೆಯುವ ಮೂಲಕ ಭಾರತ ತಂಡದ ಪರ ಹೊಸ ದಾಖಲೆ ಸೃಷ್ಟಿಸಿದ್ದಾರೆ.

ಈ ಬಾರಿ ಅವರು ಭಾರತ ತಂಡದ ಪರ ಅತಿ ವೇಗದಲ್ಲಿ ೧೫೦ ಏಕದಿನ ವಿಕೆಟ್‌ಗಳನ್ನು ಕಬಳಿಸಿದ ಸಾಧನೆ ಮಾಡಿದ್ದಾರೆ. ಇಂಗ್ಲೆಂಡ್‌ ತಂಡದ ಮೂವರು ಆಟಗಾರರನ್ನು ಪೆವಿಲಿಯನ್‌ಗೆ ಕಳುಹಿಸಿದ ಅವರು ಹೊಸ ದಾಖಲೆಯನ್ನು ಸೃಷ್ಟಿಸಿದರು. ಅದಕ್ಕಾಗಿ ಅವರು ಒಟ್ಟಾರೆ ೮೦ ಪಂದ್ಯಗಳನ್ನು ತೆಗೆದುಕೊಂಡಿದ್ದಾರೆ. ಭಾರತ ತಂಡದ ಮಾಜಿ ಆಲ್‌ರೌಂಡರ್‌ ಅಜಿತ್‌ ಅಗರ್ಕರ್‌ ೯೭ ಪಂದ್ಯಗಳಲ್ಲಿ ೧೫೦ ವಿಕೆಟ್‌ ಪಡೆಯುವ ಮೂಲಕ ಭಾರತ ಪರ ಸಾಧನೆ ಮಾಡಿದ್ದರು.

ವಿಶ್ವದ ಮೂರನೇ ಬೌಲರ್‌

ವಿಶ್ವದ ಬೌಲರ್‌ಗಳ ಪಟ್ಟಿಯಲ್ಲಿ ಮೊಹಮ್ಮದ್‌ ಶಮಿ ಅವರು ಅಫಘಾನಿಸ್ತಾನ ತಂಡದ ಸ್ಪಿನ್ನರ್‌ ರಶೀದ್‌ ಖಾನ್‌ ಜತೆ ಮೂರನೇ ಸ್ಥಾನ ಹಂಚಿಕೊಂಡಿದ್ದಾರೆ. ಪಾಕಿಸ್ತಾನದ ಮಾಜಿ ಬೌಲರ್‌ ಸಕ್ಲೈನ್‌ ಮುಷ್ತಾಕ್‌ ೭೮ ಪಂದ್ಯಗಳಲ್ಲಿ ಈ ಸಾಧನೆ ಮಾಡಿ ಎರಡನೇ ಸ್ಥಾನ ಪಡೆದುಕೊಂಡಿದ್ದರೆ, ಆಸ್ಟ್ರೇಲಿಯಾದ ವೇಗಿ ಮಿಚೆಲ್‌ ಸ್ಟಾರ್ಕ್‌ ೭೭ ಪಂದ್ಯಗಳಲ್ಲಿ ೧೫೦ ವಿಕೆಟ್‌ ಕಬಳಿಸಿ ಮೊದಲ ಸ್ಥಾನದಲ್ಲಿದ್ದಾರೆ. ನ್ಯೂಜಿಲೆಂಡ್‌ನ ಟ್ರೆಂಟ್‌ ಬೌಲ್ಟ್‌ಗೆ ನಾಲ್ಕನೇ ಸ್ಥಾನ.

ಇದನ್ನೂ ಓದಿ: IND vs ENG ODI: ಬುಮ್ರಾ ಬಿರುಗಾಳಿ, ದಾಖಲೆ ಕನಿಷ್ಠ ಮೊತ್ತಕ್ಕೆ ಇಂಗ್ಲೆಂಡ್‌ ಆಲೌಟ್‌!

Exit mobile version