Site icon Vistara News

Mohammed Shami : ಕ್ರಿಕೆಟರ್​ ಮೊಹಮ್ಮದ್ ಶಮಿಗೆ ಬಂಧನ ಭೀತಿ ದೂರ

Mohammed Shami

ಕೋಲ್ಕೊತಾ: ಪಶ್ಚಿಮ ಬಂಗಾಳದ ಅಲಿಪೋರ್ ಕೋರ್ಟ್ ಮಂಗಳವಾರ ಕ್ರಿಕೆಟಿಗ ಮೊಹಮ್ಮದ್ ಶಮಿಗೆ (Mohammed Shami) ಎರಡು ಸಾವಿರ ರೂಪಾಯಿಗಳ ಬಾಂಡ್ ಮೇಲೆ ಜಾಮೀನು ನೀಡಿದೆ. ಶಮಿ ಮಂಗಳವಾರ ಕೋಲ್ಕತ್ತಾದ ಅಲಿಪೋರ್ ಎಸಿಜೆಎಂ ನ್ಯಾಯಾಲಯಕ್ಕೆ ಖುದ್ದು ಹಾಜರಾಗಿ ಜಾಮೀನು ಪಡೆದರು. 2018 ರಲ್ಲಿ ಜಾದವ್​ಪುರ ಪೊಲೀಸ್ ಠಾಣೆಯಲ್ಲಿ ವಿಚ್ಛೇದಿತ ಪತ್ನಿ ಹಸೀನ್ ಜಹಾನ್ ಸಲ್ಲಿಸಿದ ಎಫ್ಐಆರ್ ಆಧಾರದ ಮೇಲೆ ಮೊಹಮ್ಮದ್ ಶಮಿ ಮತ್ತು ಅವರ ಕುಟುಂಬದ ಕೆಲವು ಸದಸ್ಯರ ವಿರುದ್ಧ ಪ್ರಕರಣ ದಾಖಲಾಗಿತ್ತು. ಬಳಿಕ ಶಮಿ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿತ್ತು.

ಈ ಹಿಂದೆ ನ್ಯಾಯಾಲಯವು ಶಮಿಗೆ ನ್ಯಾಯಾಲಯಕ್ಕೆ ಹಾಜರಾಗಿ ಜಾಮೀನು ತೆಗೆದುಕೊಳ್ಳುವಂತೆ ಸೂಚಿಸಿತ್ತು. 2018ರಲ್ಲಿ, ಶಮಿ ವಿರುದ್ಧ ಅವರ ಮಾಜಿ ಪತ್ನಿ ಹಸೀನ್ ಜಹಾನ್ ಕೌಟುಂಬಿಕ ದೌರ್ಜನ್ಯದ ಆರೋಪ ಮಾಡಿದ್ದರು ಮತ್ತು ಅವರು ಕೆಳ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು.

ಪತ್ನಿಗೆ ಚಿತ್ರಹಿಂಸೆ ನೀಡಿದ ಪ್ರಕರಣದಲ್ಲಿ ಮೊಹಮ್ಮದ್ ಶಮಿ ಇದೇ ಮೊದಲ ಬಾರಿಗೆ ನ್ಯಾಯಾಲಯಕ್ಕೆ ಹಾಜರಾದಂತಾಗಿದೆ. ಅಕ್ಟೋಬರ್ 5ರಿಂದ ನಡೆಯಲಿರುವ ವಿಶ್ವಕಪ್ 2023ಕ್ಕೆ ಮುಂಚಿತವಾಗಿ ಭಾರತೀಯ ಕ್ರಿಕೆಟಿಗ ಸೆಪ್ಟೆಂಬರ್ 19ರ ಮಂಗಳವಾರ ನ್ಯಾಯಾಲಯಕ್ಕೆ ಹಾಜರಾಗಿ ಜಾಮೀನಿಗೆ ಅರ್ಜಿ ಸಲ್ಲಿಸಿದರು. ನ್ಯಾಯಾಧೀಶರು ಮನವಿಯನ್ನು ಪುರಸ್ಕರಿಸಿದರು ಮತ್ತು ಜಾಮೀನು ನೀಡಿದ್ದಾರೆ.

ಆಗಸ್ಟ್ 23 ರಂದು ಪ್ರಕರಣದ ವಿಚಾರಣೆ ನಡೆಸುತ್ತಿರುವ ಅಲಿಪುರ್ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರು, ಹಸೀನ್ ಅವರ ದೂರನ್ನು ಗಮನದಲ್ಲಿಟ್ಟುಕೊಂಡು ಶಮಿಗೆ ಸಮನ್ಸ್ ನೀಡುವುದರ ಹಿಂದೆ ಯಾವುದೇ ಅಗತ್ಯ ಕಾರಣಗಳು ಕಂಡುಬಂದಿಲ್ಲ ಎಂದು ಹೇಳಿದ್ದರು. ಆದಾಗ್ಯೂ, ಮುಂದಿನ 30 ದಿನಗಳ ಒಳಗೆ ಭಾರತ ತಂಡದ ಕ್ರಿಕೆಟಿಗ ಈ ಪ್ರಕರಣದ ಹೆಚ್ಚಿನ ವಿಚಾರಣೆಗಾಗಿ ವಿಚಾರಣಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಬೇಕಾಗುತ್ತದೆ ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಅವರು ಕೋರ್ಟ್​​ಗೆ ಹಾಜರಾಗಿದ್ದರು.

ಪೊಲೀಸರು ಸಲ್ಲಿಸಿದ ಚಾರ್ಜ್​ಶೀಟ್​ನಲ್ಲಿ ಶಮಿ ಮತ್ತು ಹಸೀನ್​ ಹೊರತುಪಡಿಸಿ ಉಳಿದವರ ವಿರುದ್ಧದ ಪ್ರಕರಣಗಳನ್ನು ಕೈಬಿಡಲಾಗಿದೆ. ಆಗಸ್ಟ್ 2019 ರಲ್ಲಿ, ಅಲಿಪೋರ್ ನ್ಯಾಯಾಲಯದ ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಇಬ್ಬರು ಸಹೋದರರ ವಿರುದ್ಧ ಬಂಧನ ವಾರಂಟ್ ಹೊರಡಿಸಿತ್ತು. ನಂತರ ಅದನ್ನು ಜಿಲ್ಲಾ ಸೆಷನ್ಸ್ ನ್ಯಾಯಾಲಯ ತಡೆ ಹಿಡಿದಿತ್ತು. ಜಿಲ್ಲಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಜಹಾನ್ ನಂತರ ಕಲ್ಕತ್ತಾ ಹೈಕೋರ್ಟ್ ಗೆ ಹೋದರು. ಜಹಾನ್ ಅವರು ಸುಪ್ರೀಂ ಕೋರ್ಟ್ ಅನ್ನು ಸಂಪರ್ಕಿಸಿದರು. ಎರಡೂ ಪಕ್ಷಗಳ ವಾದ ಆಲಿಸಿದ ನಂತರ ಒಂದು ತಿಂಗಳೊಳಗೆ ಸೆಷನ್ಸ್ ನ್ಯಾಯಾಧೀಶರು ಈ ವಿಷಯವನ್ನು ವಿಲೇವಾರಿ ಮಾಡಬೇಕಾಗುತ್ತದೆ ಎಂದು ಕಳೆದ ತಿಂಗಳು ತೀರ್ಪು ನೀಡಿತು. ಅದರಂತೆ ಈ ವರ್ಷದ ಜುಲೈ ಎರಡನೇ ವಾರದಿಂದ ದಕ್ಷಿಣ 24 ಪರಗಣ ಜಿಲ್ಲಾ ಸೆಷನ್ಸ್ ನ್ಯಾಯಾಲಯವು ಈ ವಿಷಯವನ್ನು ವಿಚಾರಣೆಗೆ ಕೈಗೆತ್ತಿಕೊಂಡಿದೆ.

Exit mobile version